14ಕ್ಕೆ ಸಿಎಂ ವಿರುದ್ಧದ ಪ್ರಕರಣ ವಿಚಾರಣೆ

7

14ಕ್ಕೆ ಸಿಎಂ ವಿರುದ್ಧದ ಪ್ರಕರಣ ವಿಚಾರಣೆ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಕೀಲ ಸಿರಾಜಿನ್ ಬಾಷಾ ದಾಖಲಿಸಿರುವ ಖಾಸಗಿ ಮೊಕದ್ದಮೆಯ ವಿಚಾರಣೆಯ ಆರಂಭದಲ್ಲಿ ಪ್ರತಿವಾದಿಗಳಿಗೆ ಪಾಲ್ಗೊಳ್ಳಲು ಅವಕಾಶ ನೀಡಬೇಕೆ? ಬೇಡವೇ? ಎಂಬ ಪ್ರಶ್ನೆ ನ್ಯಾಯಾಲಯದ ಎದುರು ಬಂದಿದೆ.ಈ ಹಿನ್ನೆಲೆಯಲ್ಲಿ ಎಲ್ಲ ಪ್ರಕರಣಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಫೆಬ್ರುವರಿ 14ಕ್ಕೆ ಮುಂದೂಡಿದೆ. ಪ್ರತಿವಾದಿಗಳಿಗೆ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನೀಡುವ ಕುರಿತ ವಿಷಯ ಇತ್ಯರ್ಥವಾದ ಬಳಿಕ ಐದು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಯಲಿದೆ.ಸಿರಾಜಿನ್ ಅವರು ದಾಖಲಿಸಿರುವ ಎಲ್ಲ ಮೊಕದ್ದಮೆಗಳ ವಿಚಾರಣೆ ಶುಕ್ರವಾರ ನಿಗದಿಯಾಗಿತ್ತು. ಮಧ್ಯಾಹ್ನ 3 ಗಂಟೆಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಹಿಪ್ಪರಗಿ ಕಲಾಪ ಆರಂಭಿಸಿದರು. ಆಗ ಅರ್ಜಿದಾರರ ಪರ ಹಾಜರಾಗಿದ್ದ ಸುಪ್ರೀಂಕೋರ್ಟ್ ಹಿರಿಯ ವಕೀಲ ಅನುಪ್ ಚೌಧರಿ ಅವರು ಯಡಿಯೂರಪ್ಪ ಅವರ ಅಳಿಯ ಆರ್.ಎನ್.ಸೋಹನ್‌ಕುಮಾರ್ ಅವರ ಅರ್ಜಿಗೆ ಆರಂಭದಲ್ಲೇ ಮಾನ್ಯತೆ ನೀಡದಂತೆ ಆಕ್ಷೇಪಣೆ ಸಲ್ಲಿಸಿದರು.‘ಖಾಸಗಿ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಆರಂಭದಲ್ಲಿ ಅರ್ಜಿದಾರರಿಗೆ ಮಾತ್ರ ವಿಚಾರಣೆಯಲ್ಲಿ ಭಾಗವಹಿಸುವ ಅವಕಾಶ ಇದೆ.ನ್ಯಾಯಾಲಯ ಸಮನ್ಸ್ ಜಾರಿ ಮಾಡುವವರೆಗೂ ಆರೋಪಿಗಳಿಗೆ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ನ್ಯಾಯಾಲಯ ಸುಪ್ರೀಂಕೋರ್ಟ್‌ನ ತೀರ್ಪನ್ನು ಗೌರವಿಸಬೇಕು. ಆದ್ದರಿಂದ ಈ ಹಂತದಲ್ಲಿ ಆರೋಪಿಗಳಿಗೆ ವಿಚಾರಣೆಯಲ್ಲಿ ಅವಕಾಶ ನೀಡಬಾರದು’ ಎಂದು ವಾದಿಸಿ, ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಯೊಂದನ್ನು ಸಲ್ಲಿಸಿದರು.ಆಗ ಅನುಪ್ ಚೌಧರಿ ಅವರಿಗೆ ವಾದ ಮಂಡನೆಗೆ ಅವಕಾಶ ನೀಡಿರುವುದಕ್ಕೇ ಆಕ್ಷೇಪ ಎತ್ತಿದ ಸೋಹನ್‌ಕುಮಾರ್ ಪರ ವಕೀಲ ರವಿ ಬಿ.ನಾಯ್ಕಿ, ‘ಖಾಸಗಿ ಮೊಕದ್ದಮೆಗಳಲ್ಲಿ ಅರ್ಜಿದಾರರ ಪರ ಮೊದಲು ವಕಾಲತ್ತು ವಹಿಸಿದ ವಕೀಲರು ಮಾತ್ರ ವಿಚಾರಣೆಯಲ್ಲಿ ಭಾಗವಹಿಸಬೇಕು. ಇತರೆ ವಕೀಲರಿಗೆ ಅವಕಾಶ ನೀಡಬಾರದು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.ಆದರೆ ಹಿರಿಯ ವಕೀಲರಾದ ಚೌಧರಿ ಅವರಿಗೆ ಅರ್ಜಿದಾರರ ಪರವಾಗಿ ವಾದಿಸುವ ಅವಕಾಶ ಇದೆ ಎಂದು ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ ವಾದಿಸಿದರು. ಈ ಹಂತದಲ್ಲಿ ಅರ್ಜಿದಾರರು ಮತ್ತು ಪ್ರತಿವಾದಿಗಳ ಪರ ವಕೀಲರ ನಡುವೆ ತೀವ್ರವಾದ ವಾದ-ಪ್ರತಿವಾದ ನಡೆಯಿತು. ಕೊನೆಗೂ ಚೌಧರಿ ಅವರಿಗೆ ವಾದ ಮಂಡನೆಗೆ ನ್ಯಾಯಾಧೀಶರು ಅವಕಾಶ ನೀಡಿದರು.ಅಷ್ಟರಲ್ಲಿ ಸುಪ್ರೀಂಕೋರ್ಟ್ ಬೇರೊಂದು ಪ್ರಕರಣದಲ್ಲಿ ನೀಡಿದ ತೀರ್ಪನ್ನು ನ್ಯಾಯಾಲಯದ ಗಮನಕ್ಕೆ ತಂದ ಸೋಹನ್‌ಕುಮಾರ್ ಪರ ವಕೀಲರು, ‘ಖಾಸಗಿ ಮೊಕದ್ದಮೆಗಳ ವಿಚಾರಣೆಯ ಆರಂಭದಲ್ಲೇ ಪ್ರತಿವಾದಿಗಳಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಆದ್ದರಿಂದ ತಮಗೆ ಅವಕಾಶ ನೀಡಬೇಕು’ ಎಂದು ವಾದಿಸಿದರು.

ಆದರೆ ಆರೋಪಿಪರ ವಕೀಲರು ಉಲ್ಲೇಖಿಸಿರುವ ತೀರ್ಪು ತುಂಬಾ ಹಿಂದಿನದು. 2008ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಅವರಿಗೆ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತಿಲ್ಲ ಎಂದು ಚೌಧರಿ ವಾದಿಸಿದರು.ಇದರಿಂದ ವಿವಾದ ಮತ್ತಷ್ಟು ಕಗ್ಗಂಟಾಯಿತು. ಈ ಹಿನ್ನೆಲೆಯಲ್ಲಿ ಪ್ರತಿವಾದಿಗಳಿಗೆ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕೇ? ಬೇಡವೇ? ಎಂಬ ವಿಷಯದ ಕುರಿತು ಫೆಬ್ರುವರಿ 14ರಂದು ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ಪ್ರಕಟಿಸಿದರು. ಮುಖ್ಯಮಂತ್ರಿ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳ ವಿಚಾರಣೆಯನ್ನೂ ಅದೇ ದಿನಕ್ಕೆ ಮುಂದೂಡಿದರು.ಇದೇ ವೇಳೆ ಯಡಿಯೂರಪ್ಪ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯಲ್ಲಿ ಆರೋಪಿ ಎಂದು ಉಲ್ಲೇಖಿಸಿರುವ ಎನ್.ಅಕ್ಕಮಹಾದೇವಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry