ಶುಕ್ರವಾರ, ಮೇ 20, 2022
24 °C

14ರಿಂದ ಕೃಷಿ ಮೇಳ-2011

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯವು ಜಿಲ್ಲಾ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಇದೇ 14ರಿಂದ 16ರವರೆಗೆ `ಕೃಷಿ ಮೇಳ-2011~ ಆಯೋಜಿಸಿದೆ. ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ನೂತನ ತಂತ್ರಜ್ಞಾನದ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಿ ಅಳವಡಿಸಿಕೊಳ್ಳಲು ಪ್ರೇರೇಪಿಸುವ ಉದ್ದೇಶ ಮೇಳದ್ದಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ ಪಾಟೀಲ್ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾನಯನ ಅಭಿವೃದ್ಧಿ ತಂತ್ರಜ್ಞಾನ, ಜಾನುವಾರು ಶಕ್ತಿ ವರ್ಧನೆ, ಹತ್ತಿ ಉತ್ಪಾದನೆ ಮತ್ತು ಮಾರುಕಟ್ಟೆ, ಕೀಟ ನಿರ್ವಹಣೆ, ಜೈವಿಕ ಇಂಧನ ಉತ್ಪಾದನೆ ಸಸ್ಯ ಸಿಮಾರೂಬಾ ಗ್ಲಾಕಾ,  ತೊಗರಿ ಬೆಳೆ ಮತ್ತು ಈ ಬೆಳೆಯಲ್ಲಿ ಹೊಸ ಎರಡು ತಳಿ ಟಿಎಸ್-3ಆರ್ ಮತ್ತು ಬಿಎಸ್‌ಎಂಆರ್(ರೋಗ ನಿರೋಧ ತಳಿ), ತೊಗರಿ ಸಸಿ ನಾಟಿ ಪದ್ಧತಿ ತಾಂತ್ರಿಕತೆ, ಶೇಂಗಾ ಬೆಳೆ ಸುರುಳಿ ಪೂಚಿ ಕೀಟ ಮತ್ತು ಕಾಯಿಕೊರಕ ಬಾಧೆ ಹೋಗಲಾಡಿಸುವ ಕೃಷಿ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.ರೇಷ್ಮೆ ಕೃಷಿ ಆಸಕ್ತ ರೈತರಿಗೆ ಹಿಪ್ಪು ನೇರಳೆ ತಳಿ ಪ್ರಾತ್ಯಕ್ಷಿಕೆ, ಚಾಕಿ ಸಾಕಾಣಿಕೆ ನೂತನ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಡಲಾಗುವುದು, ಭತ್ತದಲ್ಲಿ ಹೊಸ ತಳಿ ಗಂಗಾವತಿ ಸೋನಾ ತಳಿ ಬಗ್ಗೆ ವಿವರಣೆ,  ಎರೆಗೊಬ್ಬರ ಉತ್ಪಾದನೆ, ಜೈವಿಕ ಉತ್ಪಾದಕಗಳು, ಭತ್ತದ ನಾಟಿ ಯಾಂತ್ರೀಕರಣ, ಹನಿ ನೀರಾವರಿ ಪದ್ಧತಿ, ಸ್ಪಿಂಕ್ಲರ್, ಲೇಸರ್ ಲೇವಲ್ಲರ್‌ನ ಬಳಕೆ ಮತ್ತು ಉಪಯುಕ್ತತೆ ಬಗ್ಗೆ ತಿಳಿಸಿಕೊಡಲಾಗುವುದು. ಸಿಂಪರಣಾ ಯಂತ್ರಗಳ ಪ್ರಾತ್ಯಕ್ಷಿಕೆ, ಶೂನ್ಯ ಸಾಗುವಳಿ ಬೇಸಾಯ, ಸಾವಯವ ಕೃಷಿ ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ರೈತರು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಕೃಷಿ ವಿವಿ ಆವರಣದಲ್ಲಿ ಎರಡುವರೆ ಎಕರೆ ಪ್ರದೇಶದಲ್ಲಿ ನೈಜ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗಿದೆ. ಶೇಂಗಾ, ಎಳ್ಳು, ನವಣೆ, ಹತ್ತಿ, ತೊಗರಿ ನಾಟಿ ಪದ್ಧತಿ, ಹರಳು, ಸೂರ್ಯಕಾಂತಿ, ಟೊಮ್ಯಾಟೋ, ಮೇವಿನ ಬೆಳೆಗಳು, ಹಸಿರೆಲೆಗೊಬ್ಬರದ ಬೆಳೆ, ಭತ್ತದ ನಾಟಿ ಯಾಂತ್ರೀಕರಣ, ಕಳೆ ನಿರ್ವಹಣೆ ಸೇರಿದಂತೆ ಮುಂತಾದ ಪ್ರಾತ್ಯಕ್ಷಿಕೆ ಏರ್ಪಡಿಸಿದೆ ಎಂದು ವಿವರಿಸಿದರು.ವಸ್ತು ಪ್ರದರ್ಶನ: ವಸ್ತು ಪ್ರದರ್ಶನಕ್ಕೆ 150ಕ್ಕೂ ಹೆಚ್ಚು ಮಳಿಗೆ ಹಾಕಲಾಗುತ್ತಿದೆ. ಧಾರವಾಡ, ರಾಯಚೂರು, ಬೀದರ್, ಬಾಗಲಕೋಟೆ ಕೃಷಿ ಮತ್ತು ತೋಟಗಾರಿಕೆ, ಪಶು ವಿವಿಗಳು, ಕೃಷಿ ಸಂಬಂಧಿತ ಸರ್ಕಾರಿ, ಸರ್ಕಾರೇತರ ಹಾಗೂ ಸ್ವಸಹಾಯ ಸಂಘ ಸಂಸ್ಥೆಗಳು, ಖಾಸಗಿ ಬೀಜ, ಗೊಬ್ಬರ, ಕೀಟನಾಶಕ ಕಂಪೆನಿಗಳು, ವಿತರಕ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.