14ರ ಒಳಗೆ ಪೂರ್ಣಗೊಳಿಸಲು ಆರೋಗ್ಯಾಧಿಕಾರಿಗಳಿಗೆ ಸೂಚನೆ

7

14ರ ಒಳಗೆ ಪೂರ್ಣಗೊಳಿಸಲು ಆರೋಗ್ಯಾಧಿಕಾರಿಗಳಿಗೆ ಸೂಚನೆ

Published:
Updated:

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನ ಕೆಲಭಾಗದಲ್ಲಿ ಕಾಣಿಸಿಕೊಂಡಿರುವ ಮಂಗನಕಾಯಿಲೆ (ಕ್ಯಾಸನೂರು ಕಾಡಿನ ಕಾಯಿಲೆ) ನಿಯಂತ್ರಣಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದು, ಫೆ. 14ರ ಒಳಗೆ ಈ ಭಾಗದ ಪ್ರತಿಯೊಬ್ಬರಿಗೂ ಮುಂಜಾಗ್ರತೆಯಾಗಿ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಮಂಗನ ಕಾಯಿಲೆ ನಿಯಂತ್ರಣದ ಬಗ್ಗೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಕರೆದಿದ್ದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.ತೀರ್ಥಹಳ್ಳಿ, ಹೊಸನಗರ ವ್ಯಾಪ್ತಿಯಲ್ಲಿ ಈ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು, 89 ರಕ್ತದ ಮಾದರಿ ಪೈಕಿ 18 ರಕ್ತ  ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ  ಎಂಟು ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಈ ರೋಗ ಉಲ್ಬಣಿಸದಂತೆ ಎಚ್ಚರವಹಿಸಬೇಕು. ಜೊತೆಗೆ ಅಗತ್ಯ ಔಷಧ, ವಾಹನ, ವೈದ್ಯರು, ಸಿಬ್ಬಂದಿ ಇತ್ಯಾದಿಗಳನ್ನು ಆದ್ಯತೆ ಮೇಲೆ ಒದಗಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಮುಂಜಾಗ್ರತೆಯಾಗಿ ಕೋಣಂ ದೂರು, ಹುಂಚದಕಟ್ಟೆ, ರಿಪ್ಪನ್‌ಪೇಟೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿಯಾಗಿ ವೈದ್ಯರನ್ನು ನೇಮಿಸಲಾಗಿದೆಯಲ್ಲದೆ, ಲ್ಯಾಬ್‌ಟೆಕ್ನಿಷಿಯನ್, ಅಗತ್ಯ ಔಷಧ, ವಾಹನ ಇತ್ಯಾದಿ ಸೌಲಭ್ಯಗಳನ್ನು ಆದ್ಯತೆ ಮೇಲೆ ಒದಗಿಸಲಾಗಿದೆ ಎಂದು ಹೇಳಿದ ಅವರು, ತೀರ್ಥಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತ್ಯೇಕ ವಾರ್ಡ್‌ನ್ನು ಪ್ರಾರಂಭಿಸಲಾಗಿದೆ. ಈ ಭಾಗದಲ್ಲಿ ತುರ್ತು ಚಿಕಿತ್ಸೆ ನೀಡಲು ಸಂಚಾರಿ ಅರೋಗ್ಯ ಘಟಕವನ್ನೂ ಸಜ್ಜಾಗಿಡಲಾಗಿದೆ ಎಂದರು.ಈ ಭಾಗದ ಜನರ ಹಿತದೃಷ್ಟಿಯಿಂದ ಯೋಗಿಮಳಲಿ ಹಾಗೂ ಹುಂಚದಕಟ್ಟೆ ಪ್ರಾಥಮಿಕ  ಆರೋಗ್ಯ ಕೇಂದ್ರಗಳಲ್ಲಿ ಪ್ರಯೋಗಾಲಯವನ್ನು ಆರಂಭಿಸಲು ಹಾಗೂ ಬುಕ್ಕಿವರೆ ಗ್ರಾಮದಲ್ಲಿ ಎಎನ್‌ಎಂ ಕೇಂದ್ರ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.ಈ ರೋಗ ಬಹುತೇಕವಾಗಿ ಮಂಗಗಳಿಂದ ಹರಡುವುದರಿಂದ ಸತ್ತ ಮಂಗಗಳ ಬಗ್ಗೆ ಕೂಡಲೇ ಸಾರ್ವಜನಿಕರು ಡಾ.ಸುಲೋಚನಾದೇವಿ ಮೊಬೈಲ್: 94481 73403 ಹಾಗೂ ಡಾ.ವೀರಭದ್ರಪ್ಪ  ಮೊಬೈಲ್: 97316 54487 ಅವರಿಗೆ ಮಾಹಿತಿ ನೀಡಿದರೆ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ ರೋಗದ ಬಗ್ಗೆ ಮಾಹಿತಿ ಸಂಗ್ರಹಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲಿದ್ದಾರೆ. ಈ ರೋಗಕ್ಕೆ ಹೆಚ್ಚಿನ ಚಿಕಿತ್ಸೆ ಅಗತ್ಯವಾದಲ್ಲಿ ಸಿಮ್ಸನಲ್ಲಿಯೂ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಮಾತನಾಡಿ, ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜೊತೆಗೆ ಅರಣ್ಯ, ಪಶುಪಾಲನೆ ಇಲಾಖೆಗಳು ಕೈಜೋಡಿಸಬೇಕು. ರೋಗ ಹರಡುತ್ತಿರುವ ಪ್ರದೇಶದಲ್ಲಿ ಜನಪ್ರತಿನಿಧಿಗಳು ಸಹ ರೋಗದ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ, ಅಗತ್ಯ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಬೇಕು ಎಂದರು. ಉಪಾಧ್ಯಕ್ಷ ಎಚ್. ಗಂಗಾಧರಪ್ಪ ಮಾತನಾಡಿ, ಅಗತ್ಯ ಬಿದ್ದಲ್ಲಿ ಜನಪ್ರತಿನಿಧಿಗಳಾದ ನಾವು ಸಹ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡುವುದಾಗಿ ತಿಳಿಸಿದರು.ಜಿ.ಪಂ. ಸದಸ್ಯ ಕಲಗೋಡು ರತ್ನಾಕರ್ ಮಾತನಾಡಿ, ಈ ರೋಗ ಪ್ರತಿವರ್ಷ ಅಲ್ಲಲ್ಲಿ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ. ಈ ಹಿನ್ನೆಲೆಯಲ್ಲಿ ನವಂಬರ್- ಡಿಸೆಂಬರ್‌ನಲ್ಲಿಯೇ ರೋಗನಿರೋಧಕ ಲಸಿಕೆ ಹಾಕಬೇಕಾಗಿತ್ತು. ಒಬ್ಬರು ಮೃತಪಟ್ಟು, ಹತ್ತಾರು ಜನ ರೋಗದಿಂದ ಬಳಲುವ ಹಂತ ತಲುಪಿದ ಮೇಲೆ ಆರೋಗ್ಯ ಇಲಾಖೆ ಎಚ್ಚರವಾಗಿದೆ ಎಂದು ಆಕ್ಷೇಪಿಸಿದರು.ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಜಿ.ಪಂ. ಉಪ ಕಾರ್ಯದರ್ಶಿ  ಹನುಮನರಸಯ್ಯ, ಮುಖ್ಯ ಲೆಕ್ಕಾಧಿಕಾರಿ ಶ್ರೀಕಂಠ, ತಾ.ಪಂ. ಅಧ್ಯಕ್ಷರು, ಸದಸ್ಯರು, ವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚನ್ನಬಸಪ್ಪ, ರೋಗ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry