14 ಇಂಚು ರಸ್ತೆ ಕೇವಲ ನಾಲ್ಕುವರೇ ಇಂಚು..!

7
ನಗರೋತ್ಥಾನ ಯೋಜನೆ ಕಾಂಕ್ರಿಟ್‌ ರಸ್ತೆಗಳು ಕಳಪೆ?

14 ಇಂಚು ರಸ್ತೆ ಕೇವಲ ನಾಲ್ಕುವರೇ ಇಂಚು..!

Published:
Updated:

ಹಾವೇರಿ: ನಗರದಲ್ಲಿ ನಗರೋತ್ಥಾನ ಯೊಜನೆ­ಯಡಿ ನಗರದಲ್ಲಿ ನಡೆದಿರುವ ಕಾಂಕ್ರಿಟ್‌ ರಸ್ತೆಗಳ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆಮಟ್ಟದ್ದಾಗಿದೆಯೇ? ಇಂತಹದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಎರಡನೇ ಹಂತದ ನಗರೋತ್ಥಾನ ಯೋಜನೆಯಡಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಕಾಂಕ್ರಿಟ್‌ ರಸ್ತೆಗಳ ನಿರ್ಮಾಣ ಕಾಮಗಾರಿ ಸೇರಿದಂತೆ ಗಟಾರು, ಹೊಸ ರಸ್ತೆಗಳ ಆರಂಭವಾಗಿದೆ.



ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕೆ ಇರುವ ನಿಯ­ಮಾವಳಿಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸಲಾಗಿದೆ.  ಯೋಜ­ನಾ ಬದ್ಧವಾಗಿ ನಡೆಯ­ಬೇಕಿದ್ದ ಪ್ರತಿ ರಸ್ತೆ ಕಾಮಗಾರಿಯನ್ನು ಬೇಕಾ­ಬಿಟ್ಟಿಯಾಗಿ ಮಾಡಿರುವುದೇ ಇದಕ್ಕೆ ಸಾಕ್ಷಿ.



ಅನುಷ್ಠಾನವಾಗದ ನಿಯಮಾವಳಿ ನಗರೋ­ತ್ಥಾನ ಯೋಜನೆಯಡಿ ಕೈಗೊಳ್ಳುವ ಪ್ರತಿ­ಯೊಂದು ಕಾಮಗಾರಿಗೆ ಸರ್ಕಾರ ತಾಂತ್ರಿಕ ನಿಯಮಾವಳಿ ರೂಪಿಸಿದೆ. ಅದರಲ್ಲಿ ಮಣ್ಣಿನ ರಸ್ತೆ ಹಾಗೂ ಡಾಂಬರ್‌ ಅಥವಾ ಕಾಂಕ್ರಿಟ್‌ ರಸ್ತೆಗಳಿದ್ದ ರಸ್ತೆಯಲ್ಲಿ ಹೊಸದಾಗಿ ಕಾಂಕ್ರಿಟ್‌ ರಸ್ತೆ ನಿರ್ಮಿಸಲು ಪ್ರತ್ಯೇಕ ಎರಡು ನಿಯಮಾವಳಿಗಳಿವೆ.



ಮಣ್ಣಿನ ರಸ್ತೆ ಇದ್ದ ಕಡೆಗಳಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಿಸುವಾಗ 20 ಸೆಂಟಿ ಮೀಟರ್‌ ಅಳತೆಯ ಮೊಹರಂ ಮೆಟಲಿಂಗ್‌, ಅದರ ಮೇಲೆ ತಲಾ ಹತ್ತು ಸೆಂ.ಮೀ ಅಳತೆಯ 40 ಮಿ.ಮೀ.ಕಡಿ ಬಳಸಿ ಬೆಡ್‌ ಹಾಕಿ ನಂತರ 20 ಸೆಂ.ಮೀ. ಅಳತೆಯ ಕಾಂಕ್ರಿಟ್‌ ಹಾಕಬೇಕು. ಹಿಂದಿನ ರಸ್ತೆಗಿಂತ ಒಟ್ಟು 14 ಇಂಚು ಎತ್ತರವಾಗಬೇಕು. ಈ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ಚರಂಡಿಗಳು ಇಲ್ಲದಿದ್ದಲ್ಲಿ, ಚರಂಡಿಗಳನ್ನು ಸಹ ನಿರ್ಮಿಸಬೇಕು ಎಂಬುದು ನಿಯಮಾವಳಿಯಲ್ಲಿದೆ.



ಅದೇ ರೀತಿ ಈ ಮೊದಲು ಕಾಂಕ್ರಿಟ್‌ ಇಲ್ಲವೇ ಡಾಂಬರೀಕರಣದ ರಸ್ತೆಗಳಿದ್ದರೇ ಮೊದಲು ಅದನ್ನು ತೆಗೆದು ಹಾಕಿ ನಂತರ ಮೋಹರಂ ಹೊರತುಪಡಿಸಿ ಮೇಲಿನ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಿ ರಸ್ತೆ ನಿರ್ಮಿಸಬೇಕಿದೆ. ವಾತಾವರಣ­ಕ್ಕನುಗುಣವಾಗಿ ರಸ್ತೆಗಳ ಹಿಗ್ಗುವಿಕೆ, ಕುಗ್ಗುವಿಕೆ ಕಂಡು ಬರುವುದರಿಂದ ಪ್ರತಿ ರಸ್ತೆಯ ವಿಸ್ತೀರ್ಣಕ್ಕೆ ತಕ್ಕಂತೆ ಫೈಬರ್‌ ಸೀಟ್‌ ಬಳಸಿ ಡ್ರಾಯ್‌ ಲಿಂಕ್ಡ್ ಕಾಂಕ್ರಿಟ್‌ (ಡಿಎಲ್‌ಸಿ) ಎನ್ನುವ ಸಣ್ಣ ಪ್ರಮಾಣದ ಕಂದಕ ನಿರ್ಮಿಸಬೇಕು.



ಆದರೆ, ಈಗ ನಗರದಲ್ಲಿ ನಿರ್ಮಿಸಲಾಗು­ತ್ತಿರುವ ಪ್ರತಿಯೊಂದು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಸರ್ಕಾರದ ಯಾವುದೇ ನಿಯಮಾ­ವಳಿಗಳನ್ನು ಅನುಸರಿಸಲಾಗಿಲ್ಲ. ಕಾಂಕ್ರಿಟ್‌ ಸೇರಿ 14 ಇಂಚು ಎತ್ತರ ಇರಬೇಕಿದ್ದ ರಸ್ತೆಯನ್ನು ಅಗೆದು ನೋಡಿದರೆ,  ಕೇವಲ ನಾಲ್ಕುವರೆ ಇಂಚು ಮಾತ್ರ ಇರುವುದು ಬೆಳಕಿಗೆ ಬಂದಿದೆ. ಇದರಿಂದ ನಗರೋತ್ಥಾನದಲ್ಲಿ ಮಾಡುತ್ತಿರುವ ಕಾಂಕ್ರಿಟ್‌ ರಸ್ತೆಗಳು ಸಂಪೂರ್ಣ ಕಳಪೆ ಮಟ್ಟದ್ದಾಗಿವೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಜೆಡಿಯು ರಾಜ್ಯ ಘಟ­ಕದ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಕೋರಿ­ಶೆಟ್ಟರ ಹೇಳುತ್ತಾರೆ.



ಯಾರು ಹೊಣೆ?

ನಗರಸಭೆಯವರಾಗಲಿ, ಜಿಲ್ಲಾಡಳಿತವಾಗಲಿ ಕಾಮಗಾರಿ ನಮಗೆ ಸಂಬಂಧಿಸಿದ್ದಲ್ಲ ಎಂದು ಹೇಳುತ್ತಿವೆ. ಹಾಗಾದರೆ, ಈ ಕಾಮಗಾರಿಗೆ ಯಾರು ಹೊಣೆ? ನಗರೋತ್ಥಾನದಲ್ಲಿ ನಡೆದಿ­ರುವ ಕಾಮಗಾರಿಗಳು ಯಾರ ವ್ಯಾಪ್ತಿಗೆ ಬರು­ತ್ತವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸುತ್ತಾರೆ.



ಕಪ್ಪು ಪಟ್ಟಿಗೆ ಸೇರಿಸಿ

ನಗರದಲ್ಲಿ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ಟೆಂಡರ್‌ ಪಡೆದಿರುವ ಗುತ್ತಿಗೆ ಕಂಪೆನಿ ಕಾಮಗಾರಿಯನ್ನು ಸಂಪೂರ್ಣ ಕಳಪೆ ಮಟ್ಟದಲ್ಲಿದ್ದು, ಕೂಡಲೇ ಅದನ್ನು ಸರಿಪಡಿಸಿ ಸರ್ಕಾರದ ನಿಯಮಾವಳಿ ಪ್ರಕಾರ ರಸ್ತೆ ನಿರ್ಮಿಸಬೇಕು. ಇಲ್ಲವಾದರೆ, ಆ ಗುತ್ತಿಗೆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬೇರೆಯವರಿಗೆ ಗುತ್ತಿಗೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.



ಮೊದಲ ಹಂತದ ನಗರೋತ್ಥಾನ ಯೋಜನೆಯಡಿ ನಿರ್ಮಿಸಲಾದ ಕಾಂಕ್ರಿಟ್‌ ರಸ್ತೆಗಳ ಮೇಲ್ಪದರು ಕಿತ್ತು ಹೋಗಿ, ಒಳಗಿನ ಕಬ್ಬಿಣದ ಸಳಿಗಳು ಹೊರಗೆ ಕಾಣಿಸುತ್ತಿವೆ. ಅಷ್ಟೊಂದು ಕಳಪೆ ಕಾಮಗಾರಿಯಾಗಿದೆ. ಎರಡನೇ ಹಂತದ ಕಾಮಗಾರಿಯೂ ಆ ರೀತಿ ಆಗದಂತೆ ಎಚ್ಚರವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry