14 ಗಂಟೆ ಕಾಲ ಸಂಚಾರ ಸ್ಥಗಿತ

ಶನಿವಾರ, ಜೂಲೈ 20, 2019
28 °C
ಬೆಳಗಾವಿ-ಪಣಜಿ ಹೆದ್ದಾರಿಯಲ್ಲಿ ಭೂಕುಸಿತ, ಉರುಳಿದ ಮರ

14 ಗಂಟೆ ಕಾಲ ಸಂಚಾರ ಸ್ಥಗಿತ

Published:
Updated:

ಖಾನಾಪುರ: ಬೆಳಗಾವಿಯಿಂದ ಖಾನಾಪುರ, ಲೋಂಡಾ, ರಾಮಗನರ, ಅನಮೋಡ ಮಾರ್ಗವಾಗಿ ಗೋವಾ ರಾಜ್ಯವನ್ನು ಸಂಪರ್ಕಿಸುವ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ ನಂ. 4ಎ ರ ಅನಮೋಡ-ಮೋಲೇಂ ನಡುವಿನ ಘಟ್ಟ ಪ್ರದೇಶದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ರಾತ್ರಿ ಭೂಕುಸಿತ ಉಂಟಾಗಿ ಬುಧವಾರ ಮಧ್ಯಾಹ್ನದವರೆಗೆ 14 ತಾಸು ಗೋವಾ-ಕರ್ನಾಟಕದ ನಡುವಿನ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.ಅನಮೋಡ ಅಬಕಾರಿ ಚೆಕ್ ಪೋಸ್ಟ್‌ನಿಂದ 10 ಕಿ.ಮೀ ದೂರದ ದೂಧಸಾಗರ ತಿರುವಿನ ಗೋವಾ ರಾಜ್ಯಕ್ಕೆ ಸೇರಿದ ಪ್ರದೇಶದಲ್ಲಿ ಮಣ್ಣು ಕುಸಿದಿದ್ದು, ಈ ಮಣ್ಣಿನಡಿ ಹೂತಿದ್ದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಗೋವಾದಿಂದ ರಾಜ್ಯಕ್ಕೆ ಆಗಮಿಸುವ ನೂರಾರು ವಾಹನಗಳು ಭೂಕುಸಿತಗೊಂಡ ಸ್ಥಳದಿಂದ 12 ಕಿ.ಮೀ ದೂರದ ಮೋಲೇಂವರೆಗೆ ಹಾಗೂ ರಾಜ್ಯದಿಂದ ಗೋವಾ ಕಡೆಗೆ ಸಾಗುತ್ತಿದ್ದ ವಾಹನಗಳು ಅನಮೋಡವರೆಗೆ ಅಂದಾಜು 14 ಗಂಟೆ ಸಾಲುಗಟ್ಟಿ ನಿಂತ್ದ್ದಿದವು.ಭೂಕುಸಿತದ ಸುದ್ದಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಎರಡು ಜೆಸಿಬಿ ಯಂತ್ರಗಳೊಂದಿಗೆ ತೆರಳಿ ರಸ್ತೆಯ ಮೇಲೆ ಬಿದ್ದ ಮರ ಹಾಗೂ ಮಣ್ಣು ತೆರವು ಕಾರ್ಯಾಚರಣೆ ಕೈಗೊಂಡರು. ಬುಧವಾರ ಬೆಳಿಗ್ಗೆ ಪ್ರಾರಂಭಗೊಂಡ ಈ ಕಾರ್ಯಾಚರಣೆ ಮಧ್ಯಾಹ್ನ 1.30ಕ್ಕೆ ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಗೊಳಿಸುವದರ ಮೂಲಕ ಪೂರ್ಣಗೊಂಡಿತು.ಬಳಿಕ ಉತ್ತರ ಕನ್ನಡ ಜಿಲ್ಲೆ ರಾಮನಗರ ಹಾಗೂ ಗೋವಾದ ಮೋಲೆಂ ಪೊಲೀಸರು ಸಂಚಾರ ನಿಯಂತ್ರಿಸಿ ಎರಡೂ ಬದಿಯ ವಾಹನಗಳು ತೆರಳಲು ಅನುವು ಮಾಡಿಕೊಟ್ಟರು. ಸದ್ಯಕ್ಕೆ ಈ ಮಾರ್ಗದ ಕರ್ನಾಟಕ-ಗೋವಾ ನಡುವಿನ ರಸ್ತೆ ಸಂಚಾರ ಮತ್ತೆ ಪ್ರಾರಂಭಗೊಂಡಿದ್ದು, ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇದೆ.ಕೊಚ್ಚಿ ಹೋದ ಸೇತುವೆ

ನಿಪ್ಪಾಣಿ: 
ನಗರ ಸಮೀಪದ ಸಿದ್ನಾಳ ಗ್ರಾಮದಲ್ಲಿ ವೇದಗಂಗಾ ನದಿಗೆ ನಿರ್ಮಿಸಿದ ಕಿರು ಸೇತುವೆಯು ನೀರಿನ ರಭಸಕ್ಕೆ ಕೊಚ್ಚಿ ಹೋಯಿತು.1967ನೇ ಸಾಲಿನಲ್ಲಿ ಸುಮಾರು 35 ವರ್ಷಕ್ಕೂ ಮೇಲ್ಪಟ್ಟು ಇತಿಹಾಸ ಹೊಂದಿದ್ದ ಈ ಕಿರುಸೇತುವೆಯು ಸಿದ್ನಾಳ, ಹುನ್ನರಗಿ, ಬೋಳೆವಾಡಿ ಸೇರಿದಂತೆ ಅನೇಕ ಗ್ರಾಮಗಳ ಸಂಪರ್ಕದ ಕೊಂಡಿಯಾಗಿತ್ತು.ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದ ಈ ಸೇತುವೆಯು ಸಂಪೂರ್ಣ ಶಿಥಿಲಗೊಂಡಿತ್ತು. ಒಂದೆರಡು ಸಲ ನವೀಕರಣ ಮಾಡಲಾಗಿತ್ತಾದರೂ ಪ್ರಯೋಜನವಾಗಿರಲಿಲ್ಲ.ಇದೇ ವರ್ಷದ ಆರಂಭದಲ್ಲಿ ಅದರ ಬದಿಗೆ ಹೊಸ ಕಿರು ಸೇತುವೆ ನಿರ್ಮಿಸಲಾಗಿತ್ತು. ಆದರೆ ಕೆಲ ತಾಂತ್ರಿಕ ಅಡೆತಡೆಗಳಿಂದಾಗಿ ಅದರ ಉದ್ಘಾಟನೆ ವಿಳಂಬವಾಗಿತ್ತು. ನೀರಿನ ರಭಸಕ್ಕೆ ಹಳೆಯ ಕಿರುಸೇತುವೆ ಕೊಚ್ಚಿ ಹೋಗಿ ಸಂಚಾರಸಂಪರ್ಕ ಕಡಿತಗೊಂಡಿದ್ದರಿಂದ ಜನರು ಬುಧವಾರ ಸಂಚರಿಸುವ ಮೂಲಕ ಉದ್ಘಾಟನೆಗೊಳ್ಳುವ ಮೊದಲೇ ಜನರೇ ಉದ್ಘಾಟಿಸಿದಂತಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry