14 ಶಾಸಕರ ಅನರ್ಹತೆಗೆ ಚಿಂತನೆ

7
ಸದನದಲ್ಲಿ ನಡೆಯದ ಕೋಲಾಹಲ

14 ಶಾಸಕರ ಅನರ್ಹತೆಗೆ ಚಿಂತನೆ

Published:
Updated:

ಸುವರ್ಣ ವಿಧಾನಸೌಧ: ಹಾವೇರಿಯಲ್ಲಿ ಭಾನುವಾರ ನಡೆದ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸಮಾವೇಶದ ವೇದಿಕೆಯಲ್ಲಿ ಕಾಣಿಸಿಕೊಂಡ 14 ಶಾಸಕರನ್ನು ಅನರ್ಹಗೊಳಿಸುವಂತೆ ವಿಧಾನಸಭೆಯ ಸ್ಪೀಕರ್ ಅವರನ್ನು ಕೋರಲು ಬಿಜೆಪಿ ಚಿಂತನೆ ನಡೆಸಿದೆ. ಇದರ ಬೆನ್ನಲ್ಲೇ ಖಾಲಿ ಇರುವ ಎರಡು ಸ್ಥಾನಗಳನ್ನು ತುಂಬಲು ಸಚಿವ ಸಂಪುಟ ವಿಸ್ತರಣೆಗೂ ಯೋಚಿಸಿದೆ.ಇದೇ 12ರಂದು ಬೆಳಗಾವಿಯಲ್ಲಿ ರಾಜ್ಯ ಬಿಜೆಪಿಯ ಪ್ರಮುಖರ ಸಮಿತಿ (ಕೋರ್ ಕಮಿಟಿ) ಸಭೆ ಮತ್ತು ಪಕ್ಷದ ರಾಜ್ಯ ಪ್ರಭಾರಿಗಳ ಸಭೆಗಳು ನಡೆಯಲಿವೆ. ಪಕ್ಷದ ಶಾಸಕರು ಬಹಿರಂಗವಾಗಿ ಕೆಜೆಪಿ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ವಿಷಯ ಸಭೆಯಲ್ಲಿ ಚರ್ಚೆಗೆ ಬರಲಿದೆ. ಬಳಿಕ ಈ ಶಾಸಕರಿಗೆ ಷೋಕಾಸ್ ನೋಟಿಸ್ ಜಾರಿ ಮಾಡುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.ಸದ್ಯದ ಯೋಚನೆ ಪ್ರಕಾರ, ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ಆರೋಪದ ಮೇಲೆ 14 ಶಾಸಕರಿಗೂ ನೋಟಿಸ್ ಜಾರಿ ಮಾಡಲಾಗುತ್ತದೆ. ಈ ನೋಟಿಸ್‌ಗೆ ಎರಡು ಅಥವಾ ಮೂರು ದಿನಗಳೊಳಗೆ ಉತ್ತರಿಸುವಂತೆ ಸೂಚಿಸಲಾಗುತ್ತದೆ. ನೋಟಿಸ್‌ನಲ್ಲಿ ನಿಗದಿಪಡಿಸಿದ ಅವಧಿಯ ಬಳಿಕ ಪಕ್ಷದ ರಾಜ್ಯ ಘಟಕದಿಂದ ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ಮನವಿ ಸಲ್ಲಿಸಿ, ಪಕ್ಷವಿರೋಧಿ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ 14 ಶಾಸಕರನ್ನೂ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕೋರಲಾಗುತ್ತದೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷ ಸ್ಥಾನ ಪಡೆದು, ಈಗ ಕೆಜೆಪಿಯನ್ನು ಬೆಂಬಲಿಸುತ್ತಿರುವವರನ್ನು ಕೈಬಿಡುವ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸಿದೆ. ಸಮಾವೇಶದಲ್ಲಿ ಪಾಲ್ಗೊಂಡವರು ಮತ್ತು ಕೆಜೆಪಿಯನ್ನು ಬಹಿರಂಗವಾಗಿ ಬೆಂಬಲಿಸುತ್ತಿರುವ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅವರನ್ನು ವಜಾ ಮಾಡುವ ಪ್ರಸ್ತಾವಕ್ಕೆ ಪ್ರಮುಖರ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡುವ ಸಂಭವ ಇದೆ ಎಂದು ಮೂಲಗಳು ಹೇಳಿವೆ.

ವಲ್ಯಾಪುರೆ ರಾಜೀನಾಮೆ ಅಂಗೀಕಾರ: ಸುನೀಲ್ ವಲ್ಯಾಪುರೆ ಅವರು ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸ್ವೀಕರಿಸಿದ್ದಾರೆ. ಅದನ್ನು ಅಂಗೀಕರಿಸುವಂತೆ ಸೋಮವಾರ ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಇದರಿಂದಾಗಿ ಸಚಿವ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಉಳಿದಿವೆ. ಈ ಎರಡೂ ಸ್ಥಾನಗಳನ್ನು ಪಕ್ಷನಿಷ್ಠ ಶಾಸಕರಿಗೆ ನೀಡಲು ತೀರ್ಮಾನಿಸಲಾಗಿದೆ. ಆದಷ್ಟು ಬೇಗ ಸಂಪುಟ ವಿಸ್ತರಣೆಗೆ ಯೋಚಿಸಲಾಗಿದೆ.ನಡೆಯದ ಕೋಲಾಹಲ: ಕರ್ನಾಟಕ ಜನತಾ ಪಕ್ಷದ ಸಂಸ್ಥಾಪನಾ ಸಮಾವೇಶದಲ್ಲಿ ಬಿಜೆಪಿ ಶಾಸಕರು ಕಾಣಿಸಿಕೊಂಡ ವಿಷಯ ಸದನದಲ್ಲಿ ಕೋಲಾಹಲ ಎಬ್ಬಿಸಬಹುದು ಎಂಬ ನಿರೀಕ್ಷೆ ಹಲವರಲ್ಲಿ ಇತ್ತು. ಆದರೆ, ಸಮಾವೇಶಕ್ಕೆ ಹೋದವರು, ತೆರೆಮರೆಯಲ್ಲಿದ್ದು ಅದನ್ನು ಬೆಂಬಲಿಸಿದ್ದವರು, ಕಟು ಮಾತುಗಳಿಂದ ವಿರೋಧಿಸಿದ್ದವರು ಎಲ್ಲರೂ ಏನೂ ನಡೆದೇ ಇಲ್ಲವೇನೋ ಎಂಬಂತೆ ಸೋಮವಾರ ಸದನದಲ್ಲಿದ್ದರು.ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಮನೆಯಲ್ಲಿ ಭಾನುವಾರ ನಡೆದ ಉಪಾಹಾರ ಕೂಟದಲ್ಲಿ ಭಾಗವಹಿಸಿದ್ದ ಸಚಿವರು ಕೂಡ ಎಂದಿನಂತೆಯೇ ಇದ್ದರು. ಅವರ ಚಟುವಟಿಕೆಗಳಲ್ಲಿ ಯಾವ ವ್ಯತ್ಯಾಸವೂ ಕಾಣಲಿಲ್ಲ. ಸಮಾವೇಶದ ವೇದಿಕೆ ಏರಿದ್ದವರಲ್ಲಿ ಸಿ.ಸಿ.ಪಾಟೀಲ, ನೆಹರೂ ಓಲೇಕಾರ, ಡಾ.ವೈ.ಸಿ.ವಿಶ್ವನಾಥ್ ಮತ್ತಿತರರು ಸದನಕ್ಕೆ ಹಾಜರಾಗಿದ್ದರು.ರಾಜ್ಯಪಾಲರಿಗೆ ಮನವಿ: `ಈ ಸರ್ಕಾರ ಬಹುಮತ ಕಳೆದುಕೊಂಡಿದೆ. ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆಯೂ ಬಿಜೆಪಿಗೆ ಉಳಿದಿಲ್ಲ. ಆದರೂ ಭಂಡತನದಿಂದ ಅಧಿಕಾರದಲ್ಲಿ ಮುಂದುವರಿದಿದ್ದಾರೆ' ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.ವಿಧಾನಸಭೆಯ ಮೊಗಸಾಲೆಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಬಹುಮತ ಕಳೆದುಕೊಂಡಿರುವ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.`14 ಶಾಸಕರಿಗೆ ಟಿಕೆಟ್ ಇಲ್ಲ'ನವದೆಹಲಿ ವರದಿ: ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದ ಕರ್ನಾಟಕ ಜನತಾ ಪಕ್ಷದ ಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿದ್ದ  ಪಕ್ಷದ 14 ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ಬಿಜೆಪಿ ನಿರ್ಧರಿಸಿದೆ.  ಮುಂದಿನ ವರ್ಷ ಏಪ್ರಿಲ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಧಿಸಲು ಪಕ್ಷದ ವತಿಯಿಂದ ಈ ಶಾಸಕರಿಗೆ ಅವಕಾಶವಿರುವುದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.ಸುಮಾರು 40 ಶಾಸಕರು ಯಡಿಯೂರಪ್ಪ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ಸುಳ್ಳಾಗಿರುವುದರಿಂದ ಪಕ್ಷದ ವರಿಷ್ಠರು ನಿರಾಳವಾಗಿದ್ದಾರೆ ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry