14-15ರಂದು ಕ್ಯಾಫ್ನೆಟ್ ಕಾಫಿ ಮೇಳ
ಮಡಿಕೇರಿ: ‘ಕ್ಯಾಫ್ನೆಟ್’ ಯೋಜನೆಯ ಪ್ರಮುಖ ಸಂಶೋಧನಾ ಮಾಹಿತಿಯನ್ನು ಬೆಳೆಗಾರರಿಗೆ ತಿಳಿಸುವುದರ ಜತೆಗೆ, ಸುಸ್ಥಿರ ಕಾಫಿ ಉತ್ಪಾದನೆ ಬಗ್ಗೆ ಅರಿವು ಮೂಡಿಸುವ ಮುಖ್ಯ ಉದ್ದೇಶದಿಂದ ಈ ತಿಂಗಳ 14 ಮತ್ತು 15ರಂದು ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ‘ಕ್ಯಾಫ್ನೆಟ್ ಕಾಫಿ ಮೇಳ’ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ.ಎನ್.ಎ. ಪ್ರಕಾಶ್, ‘ಕ್ಯಾಫ್ನೆಟ್’ ಯೋಜನೆಯ ಸಂಯೋಜಕ ಡಾ.ಸಿ.ಜಿ. ಕುಶಾಲಪ್ಪ ಹಾಗೂ ಪದಾಧಿಕಾರಿ ಬೋಸ್ ಮಂದಣ್ಣ, ‘ಮೇಳದ ಅಂಗವಾಗಿ ಸುಸ್ಥಿರ ಕಾಫಿ ಕೃಷಿ ಬಗ್ಗೆ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದ್ದು, ಇದರಲ್ಲಿ ಕಾಫಿಯಲ್ಲಿ ಯಾಂತ್ರಿಕತೆ, ತೋಟಗಳ ದೃಢೀಕರಣ, ಸಾವಯವ ಕೃಷಿ ಮತ್ತಿತರ ಮಾಹಿತಿಯನ್ನು ರೈತರಿಗೆ ಒದಗಿಸಲಾಗುತ್ತದೆ’ ಎಂದರು.
ಕೊಡಗಿನ ಕಾಫಿ ತೋಟಗಳಲ್ಲಿ ದಾಖಲಿಸಿರುವ 202 ಸ್ಥಳೀಯ ಮರಗಳ ವಿವರಗಳನ್ನು ಒಳಗೊಂಡ ಪುಸ್ತಕವನ್ನು ಮೇಳದಲ್ಲಿ ಬಿಡುಗಡೆ ಮಾಡಲಾಗುವುದು. ಈ ಪುಸ್ತಕ ಮಾರಾಟಕ್ಕೂ ಲಭ್ಯವಿದೆ. ಅಲ್ಲದೆ, ರೈತರು ನೀಡಿದ ಸುಸ್ಥಿರ ಕಾಫಿ ಬೆಳೆಯುವ ಜ್ಞಾನದ ಪುಸ್ತಕವನ್ನೂ ಬಿಡುಗಡೆ ಮಾಡಲಾಗುತ್ತದೆ. ಕೊಡಗಿನ ಕಾಫಿ ತೋಟಗಳು ಜೀವವೈವಿಧ್ಯತೆಯ ಸಂರಕ್ಷಣೆ, ಅಂತರ್ಜಲ ವೃದ್ಧಿ ಹಾಗೂ ಇಂಗಾಲದ ಸಂಸ್ಕರಣೆಗೆ ನೀಡುತ್ತಿರುವ ಕೊಡುಗೆಯ ಬಗ್ಗೆಯೂ ಬೆಳೆಗಾರರಿಗೆ ಮಾಹಿತಿ ನೀಡಲಾಗುತ್ತದೆ ಎಂದರು.
ಕಾಫಿಯ ಮಾರುಕಟ್ಟೆ, ಮೌಲ್ಯವರ್ಧನೆ, ನೆರಳಿನ ಆಧಾರದಲ್ಲಿ ಕಾಫಿ ಗುಣಮಟ್ಟ ಕಾಯ್ದುಕೊಳ್ಳುವುದು, ರೈತರು ಸಂಗ್ರಹಿಸಿದ ಸುಮಾರು 60 ವರ್ಷಗಳ ಮಳೆಯ ದಾಖಲೆಯನ್ನಾಧರಿಸಿ ಜಿಲ್ಲೆಯ ಮಳೆ ಪ್ರಮಾಣದಲ್ಲಾದ ಬದಲಾವಣೆ ಹಾಗೂ ಮುಂದಿನ ದಿನಗಳಲ್ಲಿ ಇದರಿಂದ ಆಗಬಹುದಾದ ನಿರೀಕ್ಷಿತ ಬದಲಾವಣೆಗಳ ಬಗ್ಗೆಯೂ ಮೇಳದಲ್ಲಿ ಬೆಳಕು ಚೆಲ್ಲಲಾಗುತ್ತದೆ ಎಂದರು.
ಸುಸ್ಥಿರ ಕಾಫಿ ಬೇಸಾಯ, ಕಾಫಿ ಮಾರುಕಟ್ಟೆ, ಮೌಲ್ಯವರ್ಧನೆ ಹಾಗೂ ಕಾಫಿಯ ಗುಣಮಟ್ಟ ಸುಧಾರಣೆಗೆ ಸಂಬಂಧಪಟ್ಟಂತೆ ವಿಜ್ಞಾನಿಗಳು ಹಾಗೂ ಬೆಳೆಗಾರರೊಂದಿಗೆ ಸಂವಾದ ನಡೆಸಲಾಗುವುದು. ಅಲ್ಲದೆ, ಕಾಫಿ ತೋಟಗಳ ದೃಢೀಕರಣ, ಪರಿಸರ ಸ್ನೇಹಿ ಪ್ರವಾಸೋದ್ಯಮ ಹಾಗೂ ಕಾಫಿ ಗುಣಮಟ್ಟದ ಪರೀಕ್ಷೆ ಕುರಿತು ನುರಿತ ತಜ್ಞರಿಂದ ತರಬೇತಿ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಪರಿಸರಕ್ಕೆ ಪೂರಕವಾಗಿ ಕಾಫಿ ಕೃಷಿ ಮಾಡಿ ದೃಢೀಕರಣ ಪಡೆದುಕೊಂಡ ಜಿಲ್ಲೆಯ ಎಂಟು ರೈತ ಕೂಟಗಳ ಸುಮಾರು 90 ರೈತರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
‘ಕ್ಯಾಫ್ನೆಟ್ ಮೇಳ’ ಕೊಡಗಿನಲ್ಲಿ ಅದರಲ್ಲೂ ವಿಶೇಷವಾಗಿ ಕಾಫಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಹಾಗೂ ಉತ್ತಮ ಬೆಲೆ ದೊರಕಿಸಿಕೊಡುವತ್ತ ಜಿಲ್ಲೆಯ ಕಾಫಿ ಬೆಳೆಗಾರರು, ಉದ್ಯಮಿಗಳು ಹಾಗೂ ವಿಜ್ಞಾನಿಗಳನ್ನು ಒಂದುಗೂಡಿಸುವ ಮುನ್ನಡೆಸುವ ಒಂದು ಪ್ರಯತ್ನವಾಗಿದೆ ಎಂದರು.
‘ಕ್ಯಾಫ್ನೆಟ್’ ಕೊಡಗಿನಲ್ಲಿ ವಿಶಿಷ್ಟ ರೀತಿಯಲ್ಲಿ ಕಾಫಿ ಬೆಳೆಯುವ ಪದ್ಧತಿಯನ್ನು ವಿಶ್ವ ಸಮುದಾಯಕ್ಕೆ ಪರಿಚಯಿಸುವಲ್ಲಿ ಹಾಗೂ ನಾಡಿನ ಕಾಫಿ ಬೆಳೆಗಾರರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಈ ಯೋಜನೆಯು ಕಾಫಿ ಬೆಳೆಗೆ ಸಂಬಂಧಿಸಿದಂತೆ ವಿವಿಧ ಪಾಲುದಾರರನ್ನು ಒಳಗೊಂಡಿದ್ದು, ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಿಗೆ ಆರ್ಥಿಕ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾಗಿ ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ನೀಡಿ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿಯೂ ದುಡಿಯುತ್ತಿದೆ ಎಂದು ಡಾ. ಸಿ.ಜಿ. ಕುಶಾಲಪ್ಪ ತಿಳಿಸಿದರು.
2007ರ ಆಗಸ್ಟ್ನಲ್ಲಿ ಜಾರಿಗೆ ಬಂದ ಈ ಯೋಜನೆಯ ಮೂಲಕ ಇದುವರೆಗೆ ಐನೂರಕ್ಕೂ ಅಧಿಕ ರೈತರನ್ನು ಹಲವು ಬಗೆಯ ಸಂಶೋಧನಾ ವಿಚಾರಗಳಲ್ಲಿ ತೊಡಗಿಸಿಕೊಳ್ಳಲಾಗಿದೆ. ಈ ಯೋಜನೆಯಡಿ ಕಾಫಿ ಕೃಷಿಯ ಬಗ್ಗೆ ಇರುವ ಸ್ಥಳೀಯ ಪಾರಂಪರಿಕ ಜ್ಞಾನ, ಕಾಫಿ ತೋಟಗಳಲ್ಲಿರುವ ಸಸ್ಯ, ಮರ, ಪ್ರಾಣಿ-ಪಕ್ಷಿ ಸಂಕುಲದ ವಿವರ, ಆರ್ಥಿಕ ವಿಶ್ಲೇಷಣೆ ಹಾಗೂ ಮಣ್ಣಿನ ಪರೀಕ್ಷೆಗಳನ್ನು 38ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಡೆಸಲಾಗಿದೆ. ಅಲ್ಲದೆ, ಮಳೆ ನೀರನ್ನು ತಡೆಹಿಡಿದು ಅದನ್ನು ತೋಟಗಳಲ್ಲಿರುವ ಮರ ಹಾಗೂ ಕಾಫಿ ಗಿಡಗಳ ಬಳಿ ಇಂಗಿಸಿ, ಅಂತರ್ಜಲ ಸಂವರ್ಧನೆ ಕಾರ್ಯಕ್ರಮವನ್ನು ಜಿಲ್ಲೆಯ ಏಳು ವಿವಿಧ ಮಳೆ ವಲಯಗಳಲ್ಲಿ ನಡೆಸಲಾಗಿದೆ ಎಂದು ಹೇಳಿದರು.
ಕಾಫಿ ತೋಟಗಳಲ್ಲಿ ನಡೆಸಿದಂತಹ ಸಂಶೋಧನೆಗಳ ವಿವರಗಳನ್ನು ಮುಖ್ಯವಾಗಿ ಜೀವವೈವಿಧ್ಯತೆಯ ಪಟ್ಟಿ, ಮಣ್ಣು ಪರೀಕ್ಷೆ ವಿವರ ಹಾಗೂ ಪ್ರಪ್ರಥಮ ಬಾರಿಗೆ ಕಾಫಿಯ ಸ್ವಾದಿಷ್ಟತೆಗೆ ಸಂಬಂಧಿಸಿದಂತೆ ಪರೀಕ್ಷಾ ವಿವರಗಳನ್ನು ಪ್ರತಿಷ್ಠಿತ ಪ್ರಯೋಗಾಲಯಗಳಿಂದ ಯಾವುದೇ ಖರ್ಚಿಲ್ಲದೆ ರೈತರಿಗೆ ಒದಗಿಸಲಾಗಿದೆ. ಈ ಯೋಜನೆಯ ಮೂಲಕ ದೇಶದಲ್ಲಿಯೇ ಪ್ರಥಮ ಬಾರಿಗೆ ಕಾಫಿ ಬೆಳೆಯುವ ಪ್ರದೇಶಗಳು ಅಂತರ್ಜಲ ಸಂವರ್ಧನೆ, ಇಂಗಾಲದ ಸಂಸ್ಕರಣೆ ಹಾಗೂ ಜೀವವೈವಿಧ್ಯತೆಯ ಸಂರಕ್ಷಣೆಗೆ ನೀಡುತ್ತಿರುವ ಮೌಲ್ಯವನ್ನು ತುಲನೆ ಮಾಡುವ ಪ್ರಯತ್ನ ನಡೆಸಲಾಗಿದೆ. ಇದರಿಂದ ಬೆಳೆಗಾರರು ತಾವು ಒದಗಿಸುತ್ತಿರುವ ಪರಿಸರ ಸೇವೆಗಳಿಗೆ ಬೆಲೆ ಕಟ್ಟಿ ಮುಂದಿನ ದಿನಗಳಲ್ಲಿ ಅದರ ಲಾಭವನ್ನು ಪಡೆದುಕೊಳ್ಳುವುದಕ್ಕೆ ‘ಕ್ಯಾಫ್ ನೆಟ್’ ನಾಂದಿ ಹಾಡಿದೆ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.