144 ಮನೆ ಹಸ್ತಾಂತರ ಇಂದು

7

144 ಮನೆ ಹಸ್ತಾಂತರ ಇಂದು

Published:
Updated:

ಹಾವೇರಿ: ಮಳೆಗಾಲದಲ್ಲಿ ಪ್ರವಾಹದಿಂದ ಆತಂಕ ಎದುರಿಸುತ್ತಿದ್ದ ತಾಲ್ಲೂಕಿನ ವರದಾ ನದಿ ತಟದ ಗ್ರಾಮ ಮಣ್ಣೂರಿಗೆ ಈಗ ‘ಆಸರೆ’ ಭಾಗ್ಯ ಒದಗಿ ಬಂದಿದೆ. ಟಾಟಾ ಪುನರ್ವಸತಿ ಸಮಿತಿ ಗ್ರಾಮದ ಮುಂಭಾಗದ ಗಾರ್ಡನ್ ಜಾಗೆಯಲ್ಲಿ ಬೃಹತ್ ವೇದಿಕೆ ನಿರ್ಮಿಸಿ, ಮನೆಗಳ ಹಸ್ತಾಂತರದ ಗಳಿಗೆಯನ್ನು ಎದುರು ನೋಡುತ್ತಿದೆ.‘ಆಸರೆ’ ಯೋಜನೆ ಅಡಿಯಲ್ಲಿ ದಾನಿಗಳಾದ ಟಾಟಾ ಪುನರ್ವಸತಿ ಸಮಿತಿ ನಿರ್ಮಿಸಿದ 144 ಮನೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಫೆ. 26ರಂದು ಮಣ್ಣೂರಿನ ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಮತ್ತು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಟಾಟಾ ಸಂಸ್ಥೆಯ ಸಂಸ್ಥಾಪಕ ಜೆ.ಆರ್.ಡಿ. ಟಾಟಾ ಅವರ ಕಾಲದಲ್ಲಿ (1930) ಜೆಮ್‌ಶೆಡ್‌ಪುರದಲ್ಲಿ ಉಕ್ಕು ಕಾರ್ಖಾನೆ ಕಾರ್ಮಿಕರಿಗಾಗಿ ರೂಪಿಸಿದ ನಗರ ಯೋಜನೆಯ ಪ್ರತಿರೂಪವನ್ನು ಮಣ್ಣೂರು ಗ್ರಾಮದಲ್ಲಿ ಸೃಷ್ಟಿಸಲಾಗಿದೆ. ಇಲ್ಲಿನ ಮನೆಗಳಿಗೆ ನೀರು ಮತ್ತು ವಿದ್ಯುತ್ ಸೌಲಭ್ಯ, ಆಂತರಿಕ ರಸ್ತೆ ಹಾಗೂ ಚರಂಡಿ ಮತ್ತು ಉದ್ಯಾನವನ ನಿರ್ಮಿಸಲಾಗಿದೆ.ಇದಲ್ಲದೇ ಎರಡು ವಾಲಿಬಾಲ್ ಒಂದು ಬ್ಯಾಡ್ಮಿಂಟನ್ ಕೋರ್ಟ, ಸಮುದಾಯ ಭವನ ಹಾಗೂ ಕೊಠಡಿಗಳ ಶಾಲೆಯಂಥ ಮೂಲಭೂತ ಸೌಕರ್ಯಗಳನ್ನು ಇನ್ನು ಮುಂದೆ ಕಲ್ಪಿಸಲಾಗುತ್ತದೆ. ಇಲ್ಲಿ ನಿರ್ಮಿಸಲಾಗಿರುವ 144 ಮನೆಗಳಿಗೆ ಸ್ನಾನ ಹಾಗೂ ಶೌಚಾಲಯಗಳ ಸೌಲಭ್ಯವಿದ್ದು, ಮನೆಯೆದುರು ತೆಂಗಿನ ಸಸಿ ನೆಡಲಾಗಿದೆ. ಪ್ರತಿ ಮನೆಗೆ ಸುಮಾರು 1400 ರಿಂದ 1500 ಚದರ ಅಡಿ ಜಾಗೆ ಇದ್ದು, ಇದರಲ್ಲಿ 290 ಚದರ ಅಡಿ ಮನೆ ನಿರ್ಮಿಸಲಾಗಿದೆ. ಸರ್ಕಾರ ಎಲ್ಲ ಮನೆಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಒದಗಿಸಿದೆ. ಗ್ರಾಮದಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸಲು ಶೇ. 40ರಷ್ಟು ಬಯಲು ಜಾಗೆ ಬೀಡಲಾಗಿದೆ.ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ. ಅಗಡಿ, ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮತ್ತಿತರರು ಭಾಗವಹಿಸಲಿದ್ದಾರೆ.ನವಗ್ರಾಮ ಉದ್ಘಾಟನೆ ಇಂದು: ಹಾವೇರಿ ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್‌ನ ವಸತಿ ಸಮಿತಿ ವತಿಯಿಂದ ತಾಲ್ಲೂಕಿನ ಮಣ್ಣೂರು ಗ್ರಾಮದಲ್ಲಿ ಸರ್ಕಾರದ ‘ಆಸರೆ’ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ನೂತನ ಮಣ್ಣೂರು ಗ್ರಾಮದ ಉದ್ಘಾಟನಾ ಸಮಾರಂಭ ಫೆ. 26ರಂದು ಬೆಳಿಗ್ಗೆ 9.30ಕ್ಕೆ ಜರುಗಲಿದೆ.ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರು ನವಮಣ್ಣೂರು ಗ್ರಾಮವನ್ನು ಉದ್ಘಾಟಿಸಿ, ಸಂತ್ರಸ್ಥರಿಗೆ ಮನೆಗಳ ಬೀಗದ ಕೈ ಹಸ್ತಾಂತರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಮತ್ತು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುವರೆಂದು ಟಾಟಾ ಸ್ಟೀಲ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಟಾಟಾ ಪುನರ್ವಸತಿ ಸಮಿತಿ ಅಧ್ಯಕ್ಷ ಎಚ್.ಎಂ. ನೆರೂರಕರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry