ಸೋಮವಾರ, ಜೂನ್ 21, 2021
20 °C
ಮಾಸಿಕ ಕೆಡಿಪಿ ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಇಒ ನಿಂಗಪ್ಪ ಅಧಿಕಾರಿಗಳಿಗೆ ಸೂಚನೆ

15ರೊಳಗೆ ಸಂಪೂರ್ಣ ಅನುದಾನ ಸದ್ಬಳಕೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಆಯಾ ವರ್ಷಾಂತ್ಯದಲ್ಲಿ ಸಂಪೂರ್ಣ ಬಳಕೆಯಾಗದೇ ಇದ್ದಲ್ಲಿ ಅದಕ್ಕೆ ಅಧಿಕಾರಿಗಳನ್ನೇ ನೇರ ಹೊಣೆಯನ್ನಾಗಿ ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಎನ್.ನಿಂಗಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಧಾ ಅವರ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಮಾರ್ಚ್ ೧೫ರೊಳಗೆ ಎಲ್ಲ ಇಲಾಖೆ ಅಧಿಕಾರಿಗಳು ಈ ವರ್ಷದ ಅನುದಾನವನ್ನು ಪೂರ್ಣವಾಗಿ ಖರ್ಚು ಮಾಡುವ ಮೂಲಕ ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.ಸಣ್ಣ ನೀರಾವರಿ ಇಲಾಖೆ ಉಪ ವಿಭಾಗದ ಅಧಿಕಾರಿ ಮಾತನಾಡಿ, ವಿಶೇಷ ಘಟಕ ಯೋಜನೆಯಡಿ ಒಟ್ಟು ₨ ೭೭ ಲಕ್ಷ ವೆಚ್ಚದಲ್ಲಿ ೧೫ ಏತ ನೀರಾವರಿ ಹಾಗೂ ಗಿರಿಜನ ಉಪ ಯೋಜನೆಯಡಿ ಒಟ್ಟು ₨ ೪೪ ಲಕ್ಷ ವೆಚ್ಚದಲ್ಲಿ 8 ಚೆಕ್‌ಡ್ಯಾಂ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಸುಧಾ ಮಾತನಾಡಿ, ಈಗಾಗಲೇ ಎಲ್ಲೆಲ್ಲಿ ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ ಎನ್ನುವುದಾಗಿ ಪ್ರಶ್ನಿಸಿದ ವೇಳೆ ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಸಿಂಗಾಪುರ, ಈಚಲ ನಾಗೇನಹಳ್ಳಿ, ಬೊಮ್ಮೇನಹಳ್ಳಿ, ಸೊಂಡೇಕೊಳ, ಹೊಸಹಳ್ಳಿ, ಕುರುಮರಡಿಕೆರೆ, ಹುಲ್ಲೂರು, ಕಕ್ಕೇರು, ಎಣ್ಣೆಗೆರೆ, ಮಾಡನಾಯಕನಹಳ್ಳಿ, ಚಿಕ್ಕಪ್ಪನಹಳ್ಳಿ, ಕಲ್ಲಹಳ್ಳಿ ಗ್ರಾಮಗಳಲ್ಲಿ ಏತ ನೀರಾವರಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿ ಮಾತನಾಡಿ, ಚಿತ್ರದುರ್ಗವನ್ನು ಕಾಲುಬಾಯಿ ರೋಗ ಮುಕ್ತವನ್ನಾಗಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಒಟ್ಟು ೮೦ ಸಾವಿರ ಜಾನುವಾರುಗಳಿದ್ದು, ೨೦ ದಿನಗಳಿಂದ ಸುಮಾರು ೪೭ ಸಾವಿರ ಜಾನುವಾರುಗೆ ಲಸಿಕೆ ಹಾಕಲಾಗಿದೆ. ಉಳಿದ 33 ಸಾವಿರ ಜಾನುವಾರುಗೆ ಮಾರ್ಚ್‌ ೧೫ರೊಳಗಾಗಿ ಲಸಿಕೆ ಹಾಕುವ ಮೂಲಕ ಶೇ 100ರಷ್ಟು ಗುರಿ ಸಾಧಿಸಲಾಗುವುದು. ಮೂರು ತಂಡಗಳ ಮೂಲಕ ವರ್ಷದಲ್ಲಿ 2 ಬಾರಿ ಅಂದರೆ ಫೆಬ್ರುವರಿ ಮತ್ತು ಆಗಸ್ಟ್ ತಿಂಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಇದಾಗಿದ್ದು, 10 ವರ್ಷಗಳ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ತಿಮ್ಮಾರೆಡ್ಡಿ ಮಾತನಾಡಿ, ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ೩೪ ವಿಶೇಷ ಶೌಚಾಲಯ ನಿರ್ಮಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಿಸಲು ೩೩ ಕಾಮಗಾರಿಗಳಿಗೆ ಅನುಮೋದನೆ ದೊರೆತ್ತಿದ್ದು, ಈವರೆಗೆ ೧೫ ಕಾಮಗಾರಿ ಪೂರ್ಣ ಗೊಳಿಸಲಾಗಿದೆ ಎಂದರು.ಪಂಚಾಯತ್‌ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿ ಬಸವರಾಜ್ ಮಾತನಾಡಿ, ಎನ್‌ಆರ್‌ಡಿಡಬ್ಲ್ಯೂಪಿ ಯೋಜನೆ, ಡಿಫ್ಲೋರೈಡೇಶನ್ ಫ್ಲಾಂಟ್, ಆರ್‌ಓ ಪ್ಲಾಂಟ್ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು ೨೫೬ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಈವರೆಗೆ ೧೬೯ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ತಾ.ಪಂ. ಉಪಾಧ್ಯಕ್ಷೆ ಲಕ್ಷ್ಮಿದೇವಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಈ. ಕುಮಾರಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.ನೀತಿ ಸಂಹಿತೆ: ಸಭೆ ಮೊಟಕು

ಪರಿಶಿಷ್ಟ ಜಾತಿ, ಪಂಗಡಗಳಿಗಾಗಿ ವಿವಿಧ ಇಲಾಖೆಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಆಯಾ ವರ್ಷದಲ್ಲಿ ಬಳಕೆ ಮಾಡದಿದ್ದರೆ ಅದಕ್ಕೆ ಅಧಿಕಾರಿಗಳೇ ಜವಾಬ್ದಾರರಾಗಲಿದ್ದು, ಎಚ್ಚರದಿಂದ ಕರ್ತವ್ಯ ನಿರ್ವಹಿಸಿ ಎಂದು ತಾಲ್ಲೂಕು ಪಂಚಾಯ್ತಿ ಇಒ ಎನ್‌.ನಿಂಗಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ವಿಷಯ ತಿಳಿಯುತ್ತಿದ್ದಂತೆ ಕೆಡಿಪಿ ಸಭೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.