ಸೋಮವಾರ, ಜೂನ್ 14, 2021
24 °C

15ರ ವರೆಗೆ ನೀರು ಹರಿಸಲು ರೈತರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

15ರ ವರೆಗೆ ನೀರು ಹರಿಸಲು ರೈತರ ಆಗ್ರಹ

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಗೆ ಏಪ್ರಿಲ್ 15ರವರೆಗೆ  ನೀರು ಹರಿಸುವ ಮೂಲಕ ರೈತರ ಹಿತ ಕಾಯುವಂತೆ ಆಗ್ರಹಿಸಿ ಹಂಚಿನಾಳಕ್ಯಾಂಪ್‌ನಲ್ಲಿ ರೈತರು ಸೋಮವಾರ ರಸ್ತೆ ತಡೆ ಚಳವಳಿ ನಡೆಸಿದರು.ವಿವಿಧ ಪಕ್ಷಗಳ ಮುಖಂಡರು ಹಾಗೂ ನೂರಾರು ರೈತರು ಹಂಚಿನಾಳ, ಹಂಚಿನಾಳಕ್ಯಾಂಪ್, ಸಿದ್ರಾಂಪೂರ, ಚೆನ್ನಳ್ಳಿ, ಗೊರೇಬಾಳ ಮತ್ತಿತರ ಗ್ರಾಮಸ್ಥರೊಂದಿಗೆ ಬೆಳಿಗ್ಗೆ 10ರಿಂದ 11ರವರೆಗೆ ರಸ್ತೆ ತಡೆ ಮಾಡಿದರು. ಇದರಿಂದ ಗಂಗಾವತಿ- ರಾಯಚೂರು ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಯಿತು.ಮಾರ್ಚ್ 31ರವರೆಗೆ ಮಾತ್ರ ನೀರು ಹರಿಸುವುದಾಗಿ ನೀರಾವರಿ ಇಲಾಖೆ ಪ್ರಕಟಿಸಿದೆ. ಅದೇ ನಿರ್ಧಾರವನ್ನು ಮುಂದುವರಿಸಿದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಚಳಿಗಾಲದ ಹಂಗಾಮು ಮುಗಿದರೂ ಚಳಿ ಮುಂದುವರಿದ ಕಾರಣ ಈ ಬಾರಿ ಬತ್ತ ಕಾಳು ಕಟ್ಟಿಲ್ಲ.ಕಾರಣ ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆದು ರಾಯಚೂರು ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭದ್ರಾ ಜಲಾಶಯದಿಂದ ನೀರು ಪಡೆದು ಏಪ್ರಿಲ್ 15ರವರೆಗೆ ಎಡದಂಡೆ ನಾಲೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರರು ಮನವಿಪತ್ರ ಸ್ವೀಕರಿಸಿ ರೈತರ ಗಂಭೀರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.ಬಿ.ಆರ್.ಎಸ್. ಪಕ್ಷದ ಕೆ.ಕರಿಯಪ್ಪ, ಜೆಡಿಎಸ್‌ನ ಬಸವರಾಜ ನಾಡಗೌಡ, ಕಾಂಗ್ರೆಸ್‌ನ ಭೀಮನಗೌಡ. ಎನ್.ವಿ.ಸತ್ಯನಾರಾಯಣ, ಬಲಸು ಸೂರ್ಯನಾರಾಯಣ, ಎಂ.ರಂಗನಗೌಡ, ಬಸವರಾಜ ದಡೇಸುಗೂರು, ಎಪಿಎಂಸಿ ಮಾಜಿ ನಿರ್ದೇಶಕ ರಾಮನಗೌಡ, ಮಲ್ಲಿಕಾರ್ಜುನ ಗೊರೇಬಾಳ, ಶರಣಪ್ಪ, ಶಂಬಣ್ಣ ಸಾಹುಕಾರ ಮತ್ತಿತರರು ಚಳವಳಿಯಲ್ಲಿ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.