ಗುರುವಾರ , ಮೇ 19, 2022
22 °C

15 ನೌಕರರ ಸಾಮೂಹಿಕ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ಮಧ್ಯಂತರ ಚುನಾವಣೆಗೆ ಸಮಯ ನಿಗದಿಯಾಗುವ ಮುನ್ನವೇ ತಾಲ್ಲೂಕು ಮಟ್ಟದ 8 ಅಧಿಕಾರಿಗಳೂ ಸೇರಿದಂತೆ 15 ಮಂದಿ ಸರ್ಕಾರಿ ನೌಕರರನ್ನು ಮಂಗಳವಾರ ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಎಂ.ನಾರಾಯಣಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಇದರಿಂದ ತಾಲ್ಲೂಕಿನಲ್ಲಿ ಶಾಸಕ ಸ್ಥಾನ ಖಾಲಿ ಇತ್ತು. ಶೀಘ್ರ ಉಪ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದೆ.ವಿಧಾನಸೌಧಕ್ಕೆ 15 ಅಧಿಕಾರಿ, ನೌಕರರ ಪಟ್ಟಿ ಹಿಡಿದು ತೆರಳಿದ್ದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಕೂಡಲೇ ವರ್ಗಾವಣೆಗೆ ಆದೇಶಿಸುವಂತೆ ಬಿಗಿಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಮಾಜಿ ಶಾಸಕರು ಸೂಚಿಸಿದವರ ವರ್ಗಾವಣೆಗೆ ಮುಖ್ಯಮಂತ್ರಿ ಕಚೇರಿಯಿಂದ ಆದೇಶ ಹೊರಬಿದಿದ್ದು, ವರ್ಗಾವಣೆ ಆದೇಶ ಪ್ರತಿಗಳು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿವೆ ತಲುಪಿವೆ ಎನ್ನಲಾಗಿದೆ.ತಹಶೀಲ್ದಾರ್ ಸಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಜನೀಕಾಂತ್‌ಮಲ್ಲೆ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಜೆ.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ತಾಂತ್ರಿಕ ವಿಭಾಗದ ಸಹಾಯಕ ಎಂಜಿನಿಯರ್ ರಾಮಕೃಷ್ಣಪ್ಪ, ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಎನ್.ಜಗದೀಶ್ ಕುಮಾರ್, ಸಾಮ್ಸನ್ ಮುಂತಾದವರ ಹೆಸರು ವರ್ಗಾವಣೆ ಪಟ್ಟಿಯಲ್ಲಿವೆ.ಇವರಲ್ಲಿ ಸಿ.ನಾಗರಾಜ್ ಹಾಗೂ ರಜನೀಕಾಂತ್‌ಮಲ್ಲೆ ಅವರು ತಾಲ್ಲೂಕಿಗೆ ವರ್ಗಾವಣೆಯಾಗಿ ಬಂದು ಇನ್ನೂ ಮೂರ್ನಾಲ್ಕು ತಿಂಗಳು ಕೂಡ ಕಳೆದಿರಲಿಲ್ಲ.ಯಾವುದೇ ಅಧಿಕಾರಿ, ನೌಕರರ ವರ್ಗಾವಣೆಯನ್ನು ನಿಗದಿಪಡಿಸಿದ ಅವಧಿಯಲ್ಲಿ ಮಾತ್ರ ಮಾಡಬೇಕು. ಮಧ್ಯಂತರ ಅವಧಿಯಲ್ಲಿ ವರ್ಗಾವಣೆಯಾದರೆ ಅಧಿಕಾರಿ, ಸಿಬ್ಬಂದಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಹೈಕೋರ್ಟ್ ಈಚೆಗಷ್ಟೇ ತೀರ್ಪು ನೀಡಿರುವ ಬೆನ್ನಲ್ಲೇ ನಡೆದಿರುವ ಈ ವರ್ಗಾವಣೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಒಮ್ಮೆಲೆ ಒಂದೇ ತಾಲ್ಲೂಕಿನ 15 ಜನ ಅಧಿಕಾರಿಗಳ ಸಾಮೂಹಿಕ ವರ್ಗಾವಣೆಯಾಗಿರುವುದು ವಿಶೇಷವೆನಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.