15 ಸಾವಿರ ಮನೆ ನಿರ್ಮಾಣ: ಆದೇಶ

7

15 ಸಾವಿರ ಮನೆ ನಿರ್ಮಾಣ: ಆದೇಶ

Published:
Updated:

ರಾಯಚೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ 45 ಸಾವಿರ ಕುಟುಂಬಗಳಿಗೆ ಈ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದ ಅಗತ್ಯತೆ ಇದೆ. ಪ್ರಥಮ ಹಂತವಾಗಿ 15 ಸಾವಿರ ಶೌಚಾಲಯಗಳನ್ನು ಒಂದು ವರ್ಷದಲ್ಲಿ ನಿರ್ಮಿಸಬೇಕು. ಈ ದಿಶೆಯಲ್ಲಿ ಯೋಜನೆ ಸಿದ್ಧಪಡಿಸಬೇಕು ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಂಧೀಖಾನೆ ಸಚಿವ ಎ ನಾರಾಯಣಸ್ವಾಮಿ ಹೇಳಿದರು.ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಇಲಾಖೆ ಪ್ರಗತಿ ಪರಶೀಲನಾ ಸಭೆಯಲ್ಲಿ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಯೋಜನೆ ಅನುಷ್ಠಾನ, ಫಲಾನುಭವಿ ಗುರುತಿಸುವಲ್ಲಿ ಅಧಿಕಾರಿಗಳು ಎಸಗುತ್ತ ಬಂದ ಲೋಪ ಮತ್ತು ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದರು.ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ, ಫಲಾನುಭವಿ ಗುರುತಿಸುವುದು, ಯೋಜನೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಕಲ್ಪಿಸಿದ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಜೆಸ್ಕಾಂ ನಿರ್ಲಕ್ಷ್ಯ ತೋರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜೆಸ್ಕಾಂ ಎಂಜಿನಿಯರ್ ಅಮಾನತ್‌ಗೆ ಆದೇಶ: ಸಭೆಯಲ್ಲಿ ಜೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಕೋರಿದರು. ಸಭೆಗೆ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಗೈರು ಹಾಜರಾಗಿದ್ದಕ್ಕೆ ಕೆಂಡಾಮಂಡಲರಾದ ಸಚಿವರು ಆ ಎಂಜಿನಿಯರ್‌ನನ್ನು ಅಮಾನತ್ತುಗೊಳಿಸಬೇಕು. ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಕೇವಲ ಜೆಸ್ಕಾಂ ಎಂಜಿನಿಯರ್ ಮಾತ್ರವಲ್ಲ. ಇಂದಿನ ಸಭೆಗೆ ಯಾವ್ಯಾವ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದಾರೋ ಅವರೆಲ್ಲರ ಅಮಾನತ್ತುಗೊಳಿಸಲು ಸರ್ಕಾರಕ್ಕೆ ವರದಿ ಕೊಡುತ್ತೇನೆ. ಗೈರು ಉಳಿದವರ ಪಟ್ಟಿ ಕೊಡಿ. ಸರ್ಕಾರದ ಸಚಿವರೊಬ್ಬರು ಪ್ರಗತಿಪರಿಶೀಲನಾ ಸಭೆ ನಡೆಸಿದರೆ ಅಗತ್ಯತೆ ಇದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡಾ ಹಾಜರು ಇರಬೇಕಾಗುತ್ತದೆ. ಇಂದು ನಡೆಯುವ ಸಭೆಗೆ ಹಾಜರಾಗಲು ನೋಟಿಸ್ ಕಳುಹಿಸಿದ್ದರೂ ಬಂದಿಲ್ಲ ಎಂದರೆ ಏನರ್ಥ. ಅವರನ್ನು ಸಸ್ಪೆಂಡ್ ಮಾಡಬೇಕು. ವರದಿ ಕಳುಹಿಸಿ ಎಂದು ಜಿಲ್ಲಾಧಿಕಾರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.ನಗರಸಭೆ ಅಧಿಕಾರಿಗಳಿಗೆ ಸೂಚನೆ: ನಗರದ ಕೊಳವೆ ಪ್ರದೇಶ, ಹರಿಜನವಾಡ, ಪರಿಶಿಷ್ಟ ಪಂಗಡ ಜನ ವಾಸಿಸುವ ಪ್ರದೇಶದಲ್ಲಿ ಎಷ್ಟು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ ಎಷ್ಟು ಶೌಚಾಲಯ ನಿರ್ಮಾಣ ಮಾಡಬೇಕು. ಪ್ರತಿ ಕುಟುಂಬಕ್ಕೆ ಶೌಚಾಲಯ ನಿರ್ಮಾಣಕ್ಕೆ ಜಾಗೆ ಇದೆಯೇ, ಶೌಚಾಲಯ ನಿರ್ಮಾಣಕ್ಕೆ ತಗಲುವ ವೆಚ್ಚದ ಬಗ್ಗೆ ಸಮಗ್ರ ವರದಿ ತಯಾರಿಸಿ ಇಲಾಖೆಗೆ ಒಂದು ವಾರದಲ್ಲಿ ಸಲ್ಲಿಸಬೇಕು. ಶೌಚಾಲಯ ನಿರ್ಮಾಣ ಯೋಜನೆಯನ್ನು ಆಂದೋಲನ ರೂಪದಲ್ಲಿ ಕಾರ್ಯಗತಗೊಳಿಸಬೇಕು ಎಂದು ರಾಯಚೂರು ನಗರಸಭೆ ಆಯುಕ್ತ ತಿಪ್ಪೇಶ ಅವರಿಗೆ ಸೂಚಿಸಿದರು.ನಗರದಲ್ಲಿ ಕೆಲ ಪ್ರದೇಶದಲ್ಲಿ ನಿರ್ಮಿಸಿದ ಮನೆಗಳು ಪೆಟ್ಟಿಗೆಯಾಕಾರ ಇದೆ. ಕಚ್ಚಾ ಪಕ್ಕಾ ಮನೆ ಎಂದು ಹೇಳಲಾಗುತ್ತಿದೆ. ಇಂಥ ಮನೆಗಳು ಜನರು ವಾಸಿಸಲು ಯೋಗ್ಯವಾಗಿಲ್ಲ. ಕೂಡಲೇ ಇಂಥ ಮನೆ ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡಿಕೊಡಬೇಕು. ಇದಕ್ಕೆ ತಗಲುವ ಕರ್ಚು ಎಷ್ಟು, ಎಷ್ಟು ಮನೆ ನಿರ್ಮಿಸಬೇಕಾಗುತ್ತದೆ ಎಂಬುದಕ್ಕೆ ವರದಿ ಕೊಡಬೇಕು. ನಗರದ ಕೆಲ ಕಡೆ ರಾಜಕಾಲುವೆ ಇದೆ. ಈ ಕಾಲುವೆ ಮೇಲೆ ಸಿಮೆಂಟ್ ಬೆಡ್ ಹಾಕಿ ಶೌಚಾಲಯ ನಿರ್ಮಾಣ ಮಾಡಬಹುದು. ಸ್ಥಳೀಯರೊಂದಿಗೆ ಚರ್ಚಿಸಬೇಕು. ನಿರ್ಮಾಣದ ರೂಪುರೇಷೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದರು.ಅನುಷ್ಠಾನ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕ್ರಮ: ರಾಯಚೂರು ನಗರಸಭೆ, ಸಿಂಧನೂರು ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳೂ ಈ ಶೌಚಾಲಯ ನಿರ್ಮಾಣದ ಬಗ್ಗೆ ಗಮನಹರಿಸಬೇಕು. ಈ ರೀತಿ ನಿರ್ಮಿಸುವ ಶೌಚಾಲಯಗಳಿಗೆ ಸ್ಥಳೀಯ ಅನುದಾನವೂ ಇರುತ್ತದೆ. ಸಮರ್ಪಕವಾಗಿ ಅನುದಾನ ಕಲ್ಪಿಸಬೇಕು. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಒದಗಿಸಿದ ಅನುದಾನ ಬಳಕೆ ಮಾಡಿಕೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.ಜಾಗೃತಿ ಸಮಿತಿ ಸಭೆ ನಡೆಸಿ: ಜಿಲ್ಲೆಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣ ಅಂಕಿ ಅಂಶಗಳನ್ನು ಗಮನಿಸಲಾಗಿ ದಲಿತರ ರಕ್ಷಣೆ ಸಮರ್ಪಕವಾಗಿ ಜಿಲ್ಲಾಡಳಿತ ಮಾಡಿಲ್ಲ ಎಂಬುದು ಕಂಡು ಬರುತ್ತದೆ. ಮೂರು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಜಾತಿ ನಿಂದನೆ, ದೌರ್ಜನ್ಯ ಪ್ರಕರಣ ಹೆಚ್ಚು ದಾಖಲಾಗಿವೆ. ನಿರಂತರವಾಗಿ ಜಾಗೃತ ಸಮಿತಿ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದರು.

ಶಾಸಕರಾದ ಸಯ್ಯದ್ ಯಾಸಿನ್, ವೆಂಕಟರಾವ್ ನಾಡಗೌಡ, ಜಿಪಂ ಸಿಇಓ ಮನೋಜಕುಮಾರ ಜೈನ್, ಎಸ್ಪಿ ಶಶಿಕುಮಾರ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry