ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನಗಳಲ್ಲಿ ಎಪಿಎಂಸಿ ಸೆಸ್ ಕಡಿತ: ಸವದಿ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಿಜಾಪುರ:`ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕೆ ಮಹಾರಾಷ್ಟ್ರ ಮಾದರಿ ಮಾರುಕಟ್ಟೆ ನೀತಿಯನ್ನು ಶೀಘ್ರವೇ ಜಾರಿಗೆ ತಂದು ಎಪಿಎಂಸಿ ಸೆಸ್ ಕಡಿತಗೊಳಿಸಲಾಗುವುದು~ ಎಂದು ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ, ರಾಷ್ಟ್ರೀಯ ತೋಟಗಾರಿಕೆ ನಿಗಮ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ಕೆಪೆಕ್, ಕೃಷಿ ಮಾರಾಟ ಮಹಾಮಂಡಳದಿಂದ ನಗರದಲ್ಲಿ ಹಮ್ಮಿಕೊಂಡಿರುವ ದ್ರಾಕ್ಷಿ ಬೆಳೆಯ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

`ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ತೆರಿಗೆ ಹಾಗೂ ಎಪಿಎಂಸಿ ಸೆಸ್ ಹೆಚ್ಚಳದಿಂದಾಗಿ ರಾಜ್ಯದ ವಹಿವಾಟು ನೆರೆ ರಾಜ್ಯಗಳ ಪಾಲಾಗುತ್ತಿದೆ. ಒಣ ದ್ರಾಕ್ಷಿ, ಹತ್ತಿ, ಗೋವಿನ ಜೋಳ, ಅರಿಸಿನವನ್ನು ಕರ್ನಾಟಕದಲ್ಲಿ ಮಾರಾಟ ಮಾಡದ ಸ್ಥಿತಿ ಇದೆ. ಇವೂ ಸೇರಿದಂತೆ ಹಲವು ಉತ್ಪನ್ನಗಳ ಮಾರಾಟದ ಮೇಲೆ ವಿಧಿಸಲಾಗುತ್ತಿರುವ ಎಪಿಎಂಸಿ ಸೆಸ್ ಅನ್ನು ಇನ್ನು 15 ದಿನಗಳಲ್ಲಿ ಕಡಿಮೆ ಮಾಡಲಾಗುವುದು. ಅಥಣಿ ಮತ್ತು ವಿಜಾಪುರವನ್ನು ಪ್ರಮುಖ ಒಣ ದ್ರಾಕ್ಷಿ ಮಾರಾಟ ಕೇಂದ್ರಗಳನ್ನಾಗಿ ರೂಪಿಸಲಾಗುವುದು~ ಎಂದರು.

ಸಮಾವೇಶ ಉದ್ಘಾಟಿಸಿದ ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ, ಒಣ ದ್ರಾಕ್ಷಿ ಮಾರಾಟದ ಮೇಲಿನ ವ್ಯಾಟ್ ಶೇ 14ರಿಂದ ಶೇ 2ಕ್ಕೆ ಇಳಿಸಲಾಗಿದೆ. ದ್ರಾಕ್ಷಿ ಬೆಳೆಗಾರರ ಬೇಡಿಕೆಗಳ ಈಡೇರಿಕೆಗಾಗಿ ಅಧಿಕಾರಿಗಳು ಹಾಗೂ ಬೆಳೆಗಾರರ ಸಭೆ ಕರೆದು ಚರ್ಚಿಸುವುದಾಗಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, `ಕೇಂದ್ರ ಸರ್ಕಾರದಿಂದ 24 ಕೋಟಿ ರೂಪಾಯಿ ಸಬ್ಸಿಡಿ ದೊರೆಯುತ್ತಿದ್ದರೂ ವಿಜಾಪುರದಲ್ಲಿ ವೈನ್ ಪಾರ್ಕ್ ಸ್ಥಾಪಿಸಲು ಯಾರೂ ಮುಂದೆ ಬರುತ್ತಿಲ್ಲ. ಧಾರವಾಡ, ಬಾಗಲಕೋಟೆಯಲ್ಲಿ ಹಣ್ಣು ಸಂಸ್ಕರಣ ಘಟಕ ಸ್ಥಾಪಿಸಿದ ಮಾದರಿಯಲ್ಲಿ ವಿಜಾಪುರದಲ್ಲಿಯೂ ದ್ರಾಕ್ಷಿ ಸಂರಕ್ಷಣಾ ಘಟಕ ಸ್ಥಾಪಿಸಲಾಗುವುದು. ಹಣ್ಣು, ತರಕಾರಿ ಮತ್ತು ಹೂವುಗಳ ಸಂರಕ್ಷಣೆ ಹಾಗೂ ಮೌಲ್ಯವರ್ಧನೆಗೆ ಸರ್ಕಾರ ಹೆಚ್ಚಿನ ಅನುದಾನ ನೀಡಲಿದೆ~ ಎಂದರು. ಶಾಸಕ ಎಂ.ಬಿ. ಪಾಟೀಲ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೋಟಗಾರಿಕೆಗಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ನೀಡುತ್ತಿರುವ ಒಂದು ಲಕ್ಷ ರೂಪಾಯಿಯ ಮಿತಿಯನ್ನು 25 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂದರು.

ಸಾನಿಧ್ಯ ವಹಿಸಿದ್ದ ಗದಗ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ, ಪೋಸ್ಕೊ ಉಕ್ಕು ಕಂಪೆನಿಯನ್ನು ಹಳ್ಳಿಗುಡಿಯಲ್ಲಿ ಸ್ಥಾಪಿಸುವುದಿಲ್ಲ ಎಂಬ ಬಗ್ಗೆ ಸರ್ಕಾರಿ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT