ಬುಧವಾರ, ನವೆಂಬರ್ 20, 2019
22 °C
ಕೊನೆಯ ದಿನ ನೂಕುನುಗ್ಗಲು

150ಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆ

Published:
Updated:

ಕೋಲಾರ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಬುಧವಾರ ಕೋಲಾರ, ಶ್ರೀನಿವಾಸಪುರ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲು ನೂಕುನುಗ್ಗಲು ಏರ್ಪಟ್ಟಿತ್ತು. ಚುನಾವಣಾಧಿಕಾರಿ ಕಚೇರಿ ಮುಂದೆ ಜನಸಂದಣಿ ಹೆಚ್ಚಿದ ಪರಿಣಾಮ ಸಾರ್ವಜನಿಕರು, ವಾಹನ ಸವಾರರು ಸಂಚರಿಸಲು ಪರದಾಡಿದರು.ಜಿಲ್ಲೆಯ ಆರು ಕ್ಷೇತ್ರಗಳಲ್ಲಿ 150ಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದ್ದು, ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಸಂಜೆಯಾದರೂ ನಡೆದಿತ್ತು. ನಾಮಪತ್ರಗಳ ದಾಖಲೀಕರಣ, ಅಂಕಿ- ಅಂಶ ತಯಾರಿಕೆ ಕೆಲಸವೂ ವಿಳಂಬವಾಗಿತ್ತು.ಜಿಲ್ಲೆಯಲ್ಲಿ ಕೊನೆಯ ದಿನ ಎಷ್ಟು ನಾಮಪತ್ರ ಸಲ್ಲಿಕೆಯಾಗಿದೆ ಎಂಬುದರ ಅಂಕಿ-ಅಂಶ ರಾತ್ರಿ 9 ಗಂಟೆಯಾದರೂ ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಯಲ್ಲಿ ಲಭ್ಯವಿರಲಿಲ್ಲ. ವಿವಿಧ ಕ್ಷೇತ್ರಗಳಲ್ಲಿ 50, 40, 35 ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಕ್ರೋಡೀಕರಣದ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದರು.ನೂಕುನುಗ್ಗಲು: ಮಾಲೂರಿನ ಚುನಾವಣಾಧಿಕಾರಿಗಳ ಕಚೇರಿ ಮುಂದಿನ ಜೋಡಿ ರಸ್ತೆಯ ಅಷ್ಟೂ ಪ್ರದೇಶದಲ್ಲಿ ನೂರಾರು ಕಾರ್ಯಕರ್ತರು ನೆರೆದಿದ್ದ ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಮುಳಬಾಗಲಿನಲ್ಲೂ ಇಂಥದ್ದೇ ಸನ್ನಿವೇಶ ನಿರ್ಮಾಣವಾಗಿತ್ತು. ಒಟ್ಟು 18 ಮಂದಿ ನಾಮಪತ್ರ ಸಲ್ಲಿಸಿದರು.ಕೋಲಾರದಲ್ಲಿ ಸಚಿವ ವರ್ತೂರು ಪ್ರಕಾಶ್ ಬಾಲಕರ ಕಾಲೇಜು ವೃತ್ತದಿಂದ ಮೆರವಣಿಗೆ ಮೂಲಕ ಬಂದು ಪಕ್ಷೇತರ ಅಭ್ಯರ್ಥಿಯಾಗಿ ಎರಡನೇ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಗಟ್ಟಳ್ಳಿ ಆಂಜನೇಯ ಗುಡಿಯಲ್ಲಿ ಪೂಜೆ ಸಲ್ಲಿಸಿ ನೇರವಾಗಿ ಚುನಾವಣಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು.ಅವರ ಜೊತೆಗೆ ನಿಯಮ ಮೀರಿ ಹಲವರನ್ನು ಒಳಕ್ಕೆ ಕಳಿಸಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಎಂ.ಎಸ್.ಆನಂದ್ ಪೊಲೀಸರೊಡನೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.ಶ್ರೀನಿವಾಸಪುರದಲ್ಲಿ ಐವರು ಮಾತ್ರ ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)