1500 ವಿದ್ಯಾರ್ಥಿಗಳ ದತ್ತು ಸ್ವೀಕಾರ

7

1500 ವಿದ್ಯಾರ್ಥಿಗಳ ದತ್ತು ಸ್ವೀಕಾರ

Published:
Updated:

ಆನೇಕಲ್: `ವಿಶ್ವದ ಭವಿಷ್ಯವನ್ನು ನಿರ್ಮಾಣ ಮಾಡುವ ಮಕ್ಕಳಿಗೆ ನಾವು ಅವಶ್ಯ ಆಹಾರ, ಉತ್ತಮ ಶಿಕ್ಷಣ ನೀಡಿ ಅವರನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ಮಾಡಬೇಕಿದೆ' ಎಂದು ವಿಧಾನ ಪರಿಷತ್ ಸದಸ್ಯ ಎಂ. ವಿ.ರಾಜಶೇಖರನ್ ಹೇಳಿದರು.ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ದಯಾನಂದ ಎಜುಕೇಷನಲ್ ಅಂಡ್ ಎಂಪ್ಲಾಯ್‌ಮೆಂಟ್ ಫೋರಂ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ದಯಾನಂದ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.`ಶಿಕ್ಷಕರು ವಿದ್ಯಾರ್ಥಿಗಳಲ್ಲಿ ದೇವರನ್ನು ಕಾಣಬೇಕು. ದೇಶವನ್ನು ಕಟ್ಟುವ ಶಕ್ತಿ ಅವರಿಗಿದೆ. ಇಂತಹ ವಿದ್ಯಾರ್ಥಿ ಸಮುದಾಯಕ್ಕೆ ನೆರವು ನೀಡಿ ಅವರ ಭವಿಷ್ಯವನ್ನು ಉತ್ತಮಗೊಳಿಸಲು ಈ ಸಂದರ್ಭದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಶ್ಲಾಘನೀಯ' ಎಂದು ಸಂತಸ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಸದಸ್ಯ ದಯಾನಂದ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, `ಸರ್ಕಾರಿ ಶಾಲಾ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ' ಎಂದು ಹೇಳಿದರು.`ಶಿಕ್ಷಣ ಕೇವಲ ಪ್ರಮಾಣ ಪತ್ರಕ್ಕೆ ಸೀಮಿತವಾಗದೆ ವೃತ್ತಿಪರ ಶಿಕ್ಷಣ ರೂಪುಗಳ್ಳಬೇಕು. ಈ ನಿಟ್ಟಿನಲ್ಲಿ 1500 ವಿದ್ಯಾರ್ಥಿಗಳನ್ನು ಶಿಕ್ಷಕರ ದಿನವಾದ ಇಂದು ದತ್ತು ಸ್ವೀಕರಿಸಲಾಗಿದೆ. ಇವರ ನೆರವಿಗಾಗಿ ದಯಾನಂದ ಎಜುಕೇಷನಲ್ ಅಂಡ್ ಎಂಪ್ಲಾಯ್‌ಮೆಂಟ್ ಫೋರಂ ಎಂಬ ಸಂಸ್ಥೆಯನ್ನೂ ಪ್ರಾರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣವನ್ನು ಉಚಿತವಾಗಿ ನೀಡಿ, ಅವರಿಗೆ  ಉದ್ಯೋಗವನ್ನು ಒದಗಿಸಿ ಸ್ವಾವಲಂಬಿಗಳನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದೇವೆ' ಎಂದು ತಿಳಿಸಿದರು.ಮಾಜಿ ಸಚಿವ ಚೆನ್ನಿಗಪ್ಪ, ವಿಧಾನ ಪರಿಷತ್ ಮುಖ್ಯ ಸಚೇತಕ ಆರ್ ವಿ ವೆಂಕಟೇಶ್ ಮಾತನಾಡಿದರು.

ಇದೇ ವೇಳೆ ದತ್ತು ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ 2012-2013ನೇ ಸಾಲಿನಲ್ಲಿ ವಿತರಿಸಿದಂತಹ ಸಸಿಗಳನ್ನು ಉತ್ತಮ ಗುಣಮಟ್ಟದಲ್ಲಿ ಪೋಷಣೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ದತ್ತು ಸ್ವೀಕಾರ ಮಾಡಿದ 1500 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್ ಪುಸ್ತಕ, ಶಾಲಾ ಸಮವಸ್ತ್ರ ಹಾಗೂ ಶಾಲಾ ಶುಲ್ಕ ವಿತರಿಸಲಾಯಿತು.ಅಂಗವಿಕಲ ಮಕ್ಕಳ ದತ್ತು ಸ್ವೀಕಾರ ಹಾಗೂ ಅಂಗವಿಕಲ ಮಕ್ಕಳಿಗೆ ತ್ರಿಚಕ್ರ ಸೈಕಲ್ ವಿತರಣೆ, 2012-13ನೇ ಸಾಲಿನ ಉತ್ತಮ ಶಿಕ್ಷಣ ನೀಡಿದ 13 ಶಿಕ್ಷಕರನ್ನು ಸನ್ಮಾನಿಸಲಾಯಿತು.ತಾಲ್ಲೂಕಿನ 2013-14 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಇನ್‌ಸ್ಪೈರ್ ಅವಾರ್ಡ್ ಪಡೆದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ  ಪ್ರೋತ್ಸಾಹ ಧನವನ್ನು ನೀಡಲಾಯಿತು.ಎಲ್ಲಾ ವಿದ್ಯಾರ್ಥಿಗಳಿಗೆ ಅಪಲೊ ಆಸ್ಪತ್ರೆಯ ನುರಿತ ವೈದ್ಯರಿಂದ ಉಚಿತ ವೈದಕೀಯ ತಪಾಸಣೆ ನಡೆಸಲಾಯಿತು. 

ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ಬೊಮ್ಮಸಂದ್ರ ಕೈಗಾರಿಕಾ ಒಕ್ಕೂಟದ ಉಪಾಧ್ಯಕ್ಷ ಗಜರಾಜ್, ಕಾರ್ಯದರ್ಶಿ ನರೇಂದ್ರಕುಮಾರ್, ವಿನಯ್, ಖಜಾಂಚಿ ಪರೇಷಾ.ಡಿ ಷಾ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ತೇಜಶ್ರಿ ನಟರಾಜ್, ಕಾಂಗ್ರೆಸ್ ಮುಖಂಡ ಶ್ರಿರಾಮುಲು, ಶಾಮರಾಜು, ಕೃಷ್ಣಮೂರ್ತಿ ಮುಂತಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry