1,500 ಹೆಲಿಕಾಪ್ಟರ್: ಎಚ್‌ಎಎಲ್ ಗುರಿ

7

1,500 ಹೆಲಿಕಾಪ್ಟರ್: ಎಚ್‌ಎಎಲ್ ಗುರಿ

Published:
Updated:

ಬೆಂಗಳೂರು:  ಮುಂದಿನ ಹತ್ತು ವರ್ಷಗಳಲ್ಲಿ ಒಟ್ಟು 1,500 ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಗುರಿಯನ್ನು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆ ಹೊಂದಿದೆ.

ಏರೊ ಇಂಡಿಯಾ-2011 ವೈಮಾನಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ಹಣಕಾಸು ವಿಭಾಗದ ನಿರ್ದೇಶಕ ಡಿ. ಶಿವಮೂರ್ತಿ, ‘ಎಚ್‌ಎಎಲ್ ಈ ವರ್ಷ ವಿವಿಧ ಕಂಪೆನಿಗಳಿಂದ ಒಟ್ಟು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ವಾಣಿಜ್ಯ ವಹಿವಾಟಿಗೆ ಒಪ್ಪಿಕೊಂಡಿದೆ’ ಎಂದು ಮಾಹಿತಿ ನೀಡಿದರು.

ಜಾಗತಿಕ ಮಟ್ಟದಲ್ಲಿ ಪ್ರಮುಖ ವಿಮಾನ ಉತ್ಪಾದನಾ ಸಂಸ್ಥೆಯಾಗುವುದೇ ನಮ್ಮ ಗುರಿ ಎಂದ ಅವರು, ‘ಲಘು ಯುದ್ಧ ವಿಮಾನಗಳ ಮಾಕ್-2 ಮಾದರಿ ಮತ್ತು ನೌಕಾಪಡೆಯಲ್ಲಿ ಬಳಸಲು ಸೂಕ್ತವಾದ ಮಾದರಿಗಳು ಸದ್ಯದಲ್ಲೇ ಉತ್ಪಾದನೆ ಕಾಣಲಿವೆ’ ಎಂದರು.

ಎಚ್‌ಎಎಲ್ ಮತ್ತು ರಷ್ಯಾದ ಯುನೈಟೆಡ್ ಏರ್‌ಕ್ರಾಫ್ಟ್ ಕಾರ್ಪೊರೇಷನ್ ಜಂಟಿಯಾಗಿ ನಿರ್ಮಿಸಲಿರುವ ಬಹು ಉಪಯೋಗಿ ಸಾಗಣೆ ವಿಮಾನಗಳ (ಎಂಟಿಎ) ತಯಾರಿ ಆರಂಭವಾಗುವುದು ಯಾವಾಗ ಎಂಬ ಸುದ್ದಿಗಾರರ ಪ್ರಶ್ನೆಗೆ ‘ಇವು ಮುಂದಿನ ಐದು ವರ್ಷದಲ್ಲಿ ತಯಾರಿಯಾಗಲಿವೆ’ ಎಂದರು. ಅಮೆರಿಕ ಮತ್ತು ಚೀನಾ ದೇಶಗಳು ಈಗಾಗಲೇ ಐದನೆಯ ತಲೆಮಾರಿನ ಯುದ್ಧ ವಿಮಾನಗಳ ಉತ್ಪಾದನೆಯನ್ನು ಆರಂಬಿಸಿವೆ. ನಾವೂ ಕೂಡ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಬೇಕೆಂಬ ಹಂಬಲ ಇದೆ.

ಈ ಕುರಿತಂತೆ ರಷ್ಯಾದ ಜೊತೆ ಮಾತುಕತೆ ನಡೆದಿದೆ. ಸರ್ಕಾರ ಕೂಡ ಒಪ್ಪಿಗೆ ನೀಡಿದೆ ಎಂದರು. ಸಂಸ್ಥೆಯ ಆಧುನೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಉದ್ದೇಶಕ್ಕಾಗಿ ಮುಂದಿನ 10 ವರ್ಷಗಳಲ್ಲಿ 20 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. ಕಂಪೆನಿಯ ಒಟ್ಟು ವಹಿವಾಟಿನ ಶೇ 9ರಷ್ಟನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಸ್ತುತ ಸಂದರ್ಭದಲ್ಲಿ ಮಿಲಿಟರಿಗೆ ಬೇಕಾದ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಉತ್ಪಾದನೆ ಎಚ್‌ಎಎಲ್‌ನ ಮುಖ್ಯ ಗುರಿ. ನಾಗರಿಕ ವಿಮಾನಗಳ ತಯಾರಿ ಆರಂಭಿಸುವ ಯಾವುದೇ ಉದ್ದೇಶ ಸದ್ಯಕ್ಕೆ ಇಲ್ಲ. ವಿಮಾನ ತಯಾರಿಕಾ ಕ್ಷೇತ್ರದಲ್ಲಿ ದೇಶದ ಮುಂಚೂಣಿ ಸಂಸ್ಥೆಯಾಗಿ ಷೇರು ಮಾರುಕಟ್ಟೆಗೆ ಲಗ್ಗೆ ಹಾಕುವ ಕುರಿತಂತೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಧುನಿಕ ಲಘು ಹೆಲಿಕಾಪ್ಟರ್‌ಗಳು (ಎಎಲ್‌ಎಚ್) ಪ್ರಸ್ತುತ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣವಾದವುಗಳಲ್ಲ. ಅದು ಸಾಧ್ಯವಾಗಬೇಕಾದರೆ ತಂತ್ರಜ್ಞಾನ ವರ್ಗಾವಣೆ ಪರಿಣಾಮಕಾರಿಯಾಗಿ ನಡೆದು, ಆಧುನಿಕ ತಂತ್ರಜ್ಞಾನ ನಮ್ಮಲ್ಲೂ ಲಭ್ಯವಾಗಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry