ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1500 ಹೊಸ ಐಟಿಐ: ಖರ್ಗೆ

Last Updated 22 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹನ್ನೆರಡನೇ ಪಂಚ ವಾರ್ಷಿಕ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ 1500 ಹೊಸ ಐಟಿಐ, 5000 ಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಉದ್ಯೋಗ ವಿನಿಮಯ ಕೇಂದ್ರಗಳ ಮೇಲ್ದರ್ಜೆಗಾಗಿ ಸುಮಾರು 7800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಇಲ್ಲಿ ಹೇಳಿದರು.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಉದ್ಯೋಗ ಮತ್ತು ತರಬೇತಿ ಮಹಾನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ ನಗರದ ಪೀಣ್ಯ ಫೋರ್‌ಮೆನ್ ತರಬೇತಿ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಸುಮಾರು 32 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಅಪೆಕ್ಸ್ ಹೈಟೆಕ್ ಸಂಸ್ಥೆಯ ಕಟ್ಟಡವನ್ನು ಉದ್ಘಾಟಿಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

`ಕೌಶಲ ವಿಕಾಸ ಯೋಜನೆಯಡಿ ದೇಶದಲ್ಲಿ 1500 ಹೊಸ ಐಟಿಐಗಳ ಸ್ಥಾಪನೆ, ಸಾರ್ವಜನಿಕ ಸಹಭಾಗಿತ್ವದಲ್ಲಿ ಐದು ಸಾವಿರ ಕೌಶಲ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು 5182 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ವಿಶೇಷವಾಗಿ ನಕ್ಸಲ್‌ಪೀಡಿತ, ಗುಡ್ಡಗಾಡು ಪ್ರದೇಶ ಹಾಗೂ ಅತಿ ಹಿಂದುಳಿದ ಪ್ರದೇಶಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ~ ಎಂದು ಅವರು ಹೇಳಿದರು.

`ಬೆಂಗಳೂರು ಸೇರಿದಂತೆ ವಿವಿಧೆಡೆ 15 ಉನ್ನತ ತರಬೇತಿ ಸಂಸ್ಥೆ ಹಾಗೂ 12 ಪ್ರಾದೇಶಿಕ ವೃತ್ತಿ ತರಬೇತಿ ಸಂಸ್ಥೆಗಳ ಸ್ಥಾಪನೆಗೆ 605 ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ಉದ್ಯೋಗ ವಿನಿಮಯ ಕಚೇರಿಗಳನ್ನು ಮೇಲ್ದರ್ಜೆಗೇರಿಸಲು 2,167 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಯೋಜನಾ ಆಯೋಗ ಹಾಗೂ ಹಣಕಾಸು ಸಚಿವಾಲಯ ಒಪ್ಪಿಗೆ ಸೂಚಿಸಿವೆ~ ಎಂದು ಸಚಿವರು ಮಾಹಿತಿ ನೀಡಿದರು.

ಮೂರು ಮಸೂದೆ ಮಂಡನೆ: `ಬಾಲ ಕಾರ್ಮಿಕ ಪದ್ಧತಿ, ಮಲ ಹೊರುವ ಪದ್ಧತಿ ನಿರ್ಮೂಲನೆ, ಕೂಲಿ ಕಾರ್ಮಿಕರ ಭದ್ರತೆಗಾಗಿ ಮೂರು ಮಸೂದೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಆದಷ್ಟು ಶೀಘ್ರ ಈ ಮಸೂದೆಗಳನ್ನು ಸಚಿವ ಸಂಪುಟದ ಮುಂದೆ ತಂದು ಒಪ್ಪಿಗೆ ಪಡೆಯಲಾಗುವುದು~ ಎಂದರು.

`6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವುದು ಮೂಲಭೂತ ಹಕ್ಕಾಗಿರುವುದರಿಂದ ಪೋಷಕರು ಮಕ್ಕಳನ್ನು ಕೂಲಿಗೆ ಕಳಿಸುವುದನ್ನು ತಡೆಯುವುದು ಸರ್ಕಾರಗಳ ಜವಾಬ್ದಾರಿ. ಬಾಲ ಕಾರ್ಮಿಕರನ್ನು ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಕಠಿಣ ಶಿಕ್ಷೆ ವಿಧಿಸುವಂತಹ ಕಾನೂನನ್ನು ಸರ್ಕಾರ ಜಾರಿಗೆ ತರಲಿದೆ~ ಎಂದು ಅವರು ಹೇಳಿದರು.

15 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ, `ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡ ಒಪ್ಪಂದದಂತೆ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುವುದರ ಜತೆಗೆ, 15 ಲಕ್ಷ ಉದ್ಯೋಗ ಸೃಷ್ಟಿಸುವುದು ಕೂಡ ಸರ್ಕಾರದ ಉದ್ದೇಶವಾಗಿದೆ~ ಎಂದು ಹೇಳಿದರು.

`ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 7.5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಪೈಕಿ ಸುಮಾರು 86 ಸಾವಿರ ಕೋಟಿ ರೂಪಾಯಿಗಳನ್ನು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಬಳಸಲಾಗುತ್ತಿದೆ. ಆ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಲು ಒತ್ತು ನೀಡಲಾಗುವುದು~ ಎಂದರು.

`ಕೇವಲ ಪ್ರಚಾರ ಗಿಟ್ಟಿಸುವ ಉದ್ದೇಶದಿಂದ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿಲ್ಲ. ಯೋಜನೆಗಳ ಅನುಷ್ಠಾನಗೊಳಿಸುವುದು ಸರ್ಕಾರದ ಆದ್ಯತೆ. ಈ ನಿಟ್ಟಿನಲ್ಲಿ ಒಪ್ಪಂದಗಳನ್ನು ಶೀಘ್ರ ಜಾರಿಗೆ ತರಲು ಸರ್ಕಾರ ಪ್ರಯತ್ನ ನಡೆಸಲಿದೆ~ ಎಂದರು.

ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಮಾತನಾಡಿ, `ಅಪೆಕ್ಸ್ ಹೈಟೆಕ್ ಸಂಸ್ಥೆಯ ಕಟ್ಟಡಕ್ಕೆ ಒಟ್ಟು 32 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. 12 ಕೋಟಿ ರೂಪಾಯಿಗಳನ್ನು ಕಟ್ಟಡ ನಿರ್ಮಾಣಕ್ಕೆ ಖರ್ಚು ಮಾಡಿದ್ದರೆ, ಉಪಕರಣಗಳಿಗಾಗಿ ರೂ. 20 ಕೋಟಿ ವಿನಿಯೋಗಿಸಲಾಗಿದೆ~ ಎಂದರು.

`ಕರ್ನಾಟಕದ ಪಾಲಿಗೆ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅಕ್ಷಯ ಪಾತ್ರೆ ಇದ್ದಂತೆ. ಕಳೆದ 60 ವರ್ಷಗಳಲ್ಲಿ ರಾಜ್ಯಕ್ಕೆ ಯಾವ ಕಾರ್ಮಿಕ ಸಚಿವರೂ ಇಷ್ಟೊಂದು ನೆರವು ನೀಡಿರಲಿಲ್ಲ. ಅವರು ನಿಜಕ್ಕೂ ಅಭಿವೃದ್ಧಿ ಚಿಂತಕರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ 2,500ರಿಂದ 3000 ಕೋಟಿ ರೂಪಾಯಿ ನೆರವು ನೀಡಿದ್ದಾರೆ~ ಶಾಸಕ ಎಂ. ಶ್ರೀನಿವಾಸ್, ಉದ್ಯೋಗ ಮತ್ತು ತರಬೇತಿ ಮಹಾನಿರ್ದೇಶನಾಲಯದ ಹೆಚ್ಚುವರಿ ಕಾರ್ಯದರ್ಶಿ ಶಾರ್ದಾ ಪ್ರಸಾದ್, ಉಪ ಮಹಾ ನಿರ್ದೇಶಕ ಆರ್.ಎಲ್. ಸಿಂಗ್, ನಿರ್ದೇಶಕ ಎಸ್.ಡಿ. ಲಹರಿ, ರಾಜ್ಯ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಜಿ.ಎಸ್. ನಾರಾಯಣಸ್ವಾಮಿ, ಪಾಲಿಕೆ ಸದಸ್ಯರಾದ ಆಶಾ ಸುರೇಶ್, ತಿಮ್ಮರಾಜು ಮತ್ತಿತರರು ಉಪಸ್ಥಿತರ್ದ್ದಿದರು.

`ಕೈ ಸೋತರೂ ಪರವಾಗಿಲ್ಲ...~
`ನಮಗೆ ಹಣ ಕೊಟ್ಟು ಕೊಟ್ಟು ಕೈ ಸೋತರೂ ಪರವಾಗಿಲ್ಲ. ಇನ್ನೂ ಅನುದಾನ ಕೊಡ್ತೀವಿ. ನಿಮಗೆ ಪುರಸೊತ್ತಿಲ್ಲದಿರಬಹುದು. ಸ್ವಲ್ಪ ಬಿಡುವು ಮಾಡಿಕೊಂಡು ಇತ್ತ ಗಮನಹರಿಸುವ ಮೂಲಕ ಕೊಟ್ಟ ಹಣ ಸದುಪಯೋಗಪಡಿಸಿಕೊಳ್ಳಿ. ಭಿನ್ನಮತೀಯ ಚಟುವಟಿಕೆಗಳ ನಡುವೆ ಮುಖ್ಯಮಂತ್ರಿಗಳು ನಮಗೆ ಇಷ್ಟು ಸಹಕಾರ ನೀಡುತ್ತಿರುವುದೇ ದೊಡ್ಡದು~ ಎಂದು ಖರ್ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT