ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಿಂದ ಮರುಪಾವತಿ ಅಭಿಯಾನ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು: ಸಾಲ ವಸೂಲಾತಿ ಉದ್ದೇಶದಿಂದ ಹಮ್ಮಿಕೊಂಡಿರುವ `ವಿಶೇಷ ಮರುಪಾವತಿ ಅಭಿಯಾನ' ಈ ತಿಂಗಳ 15ರಿಂದ ಫೆಬ್ರುವರಿ 28ರವರೆಗೆ ನಡೆಯಲಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ.ಅಬುಬಕ್ಕರ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದಿಂದ ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆಗಳಡಿ ಸಾಲ ನೀಡಲಾಗಿತ್ತು. ಆದರೆ ಸಾಲದ ಮರುಪಾವತಿ ಸರಿಯಾಗಿ ಆಗಿರಲಿಲ್ಲ. ಹಾಗಾಗಿ ನಿಗಮವು 2011-12ನೇ ಸಾಲಿನಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ರೂಪಿಸಿತ್ತು. ಪರಿಣಾಮವಾಗಿ ರಾಜ್ಯದಾದ್ಯಂತ ರೂ. 6.98 ಕೋಟಿ ಸಾಲ ಮರುಪಾವತಿಯಾಗಿದ್ದು, 2012-13ನೇ ಸಾಲಿಗೂ ಇದು ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.

ಏಳು ಜಿಲ್ಲೆಗಳಲ್ಲಿ ಮಾತ್ರ ಇದ್ದ ನಿಗಮದ ಕಚೇರಿಯನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ವ್ಯವಸ್ಥಾಪಕರೊಂದಿಗೆ ಇಬ್ಬರು ಸಹಾಯಕ ಸಿಬ್ಬಂದಿಗಳೂ ಇದ್ದಾರೆ. ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗುವಂತೆ ಮಾಡಲು ಆನ್‌ಲೈನ್ ಪದ್ಧತಿಯನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಯೋಜನೆಗಳನ್ನು ಸಕಾಲದಲ್ಲಿ ಜಾರಿಗೊಳಿಸಲು ಪ್ರತಿ ತಿಂಗಳು ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದೆ. ಎರಡು ತಿಂಗಳಿಗೊಮ್ಮೆ ನಿರ್ದೇಶಕರ ಮಂಡಳಿ ಸಭೆ ಕರೆದು ಸಲಹೆ ಸೂಚನೆಗಳನ್ನು ಆಹ್ವಾನಿಸುತ್ತೇವೆ. ನಿಗಮಕ್ಕೆ ಸ್ವಂತ ಕಚೇರಿ ಇಲ್ಲದ ಕಾರಣ ರೂ. 5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನಿಗಮದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ರಾಷ್ಟ್ರಮಟ್ಟದ `ರಾಜೀವ್ ಗಾಂಧಿ ಸ್ವರ್ಣ ಪದಕ' ಘೋಷಿಸಿದೆ. ಇದೇ ತಿಂಗಳ 15ರಂದು ಚೆನ್ನೈನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು.

`ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಸಲೀಂ ಅವರು ನನ್ನ ಏಳಿಗೆಯನ್ನು ಸಹಿಸಲಾರದೆ ಚೆಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

220 ಕೋಟಿ ಬಾಕಿ
ನಿಗಮ ಆರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು ರೂ 220 ಕೋಟಿ ಸಾಲ ಮರುಪಾವತಿ ಬಾಕಿ ಇದೆ.

ರಾಜ್ಯದಾದ್ಯಂತ 5,000 ಆಟೊಗಳ ಖರೀದಿಗೆ ಸಾಲ ಪಡೆದಿರುವ ಫಲಾನುಭವಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಸಾಲ ವಸೂಲಾತಿಗೆ ತೊಡಕಾಗಿದೆ.

ಬೆಂಗಳೂರು ಒಂದರಲ್ಲಿಯೇ 1,750 ಆಟೋರಿಕ್ಷಾ ಖರೀದಿಗೆ ನೀಡಲಾಗಿರುವ ಸಾಲ ಮರುಪಾವತಿಯಾಗಿಲ್ಲ ಎಂದು ಅಬುಬಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT