16 ಡಾಲರ್ ವೆಚ್ಚದಲ್ಲಿ 5,000ಕಿ.ಮೀ ಪ್ರಯಾಣ !

7

16 ಡಾಲರ್ ವೆಚ್ಚದಲ್ಲಿ 5,000ಕಿ.ಮೀ ಪ್ರಯಾಣ !

Published:
Updated:

ಸಿಡ್ನಿ (ಐಎಎನ್‌ಎಸ್): ಕೇವಲ 16 ಡಾಲರ್ ವೆಚ್ಚ ಮಾಡಿ ಕಾರಿನಲ್ಲಿ 5,000 ಕಿ.ಮೀ ಕ್ರಮಿಸಲು ಸಾಧ್ಯವೇ? ಹೌದು. ಆಸ್ಟ್ರೇಲಿಯಾದಲ್ಲಿ ಇದು ಸಾಧ್ಯವಾಗಿದೆ. ಪವನ ಇಂಧನದಿಂದ ಈ ಕಾರು 5000 ಕಿ.ಮೀ ಕ್ರಮಿಸಿದೆ.ಪವನಶಕ್ತಿಯಿಂದ ಚಲಿಸುವ ಜಗತ್ತಿನ ಮೊದಲ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಇದು, ಪರ್ತ್‌ನಿಂದ ಅಡಿಲೇಡ್ ಮೂಲಕ ಹಾಯ್ದು ಸೋಮವಾರ ಮೆಲ್ಬರ್ನ್ ತಲುಪಿದೆ. ಮೂರು ವಾರಗಳಲ್ಲಿ 5,000 ಕಿ.ಮೀ. ಸಂಚರಿಸಿ ಬಂದಿರುವ ಈ ಕಾರಿಗೆ ಒಟ್ಟು ಖರ್ಚು ಬಂದಿದ್ದು ಕೇವಲ 16 ಡಾಲರ್ ಎಂದು ಆಸ್ಟ್ರೇಲಿಯಾದ ಮಾಧ್ಯಮವೊಂದರಲ್ಲಿ ವರದಿಯಾಗಿದೆ.ಕಳೆದ ಆರು ತಿಂಗಳಿಂದ ಜರ್ಮನಿಯಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಡರ್ಕ್ ಜಿಯೊನ್ ಮತ್ತು ಸ್ಟೀಫನ್ ಸಿಮೆರರ್ ಈ ಕಾರನ್ನು ತಯಾರಿಸಿದ್ದಾರೆ.

ಕಾರಿಗೆ ಅಳವಡಿಸಿರುವ ಲಿಥಿಯಮ್-ಐಯಾನ್ ಬ್ಯಾಟರಿಗೆ ರಾತ್ರಿ ಹೊತ್ತು ಸಂಚಾರಿ ಪವನ ಇಂಧನ ಉತ್ಪದನಾ ಟರ್ಬೈನ್‌ನಿಂದ ಚಾರ್ಜ್ ಮಾಡಲಾಗುತ್ತಿತ್ತು.‘ಉತ್ತಮ ತಂತ್ರಜ್ಞಾನದಿಂದ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಮಾಡಿ ತೋರಿಸಿದ್ದೇವೆ’ ಎಂದು ಆಸ್ಟ್ರೇಲಿಯಾದ ಎಎಪಿ ಸುದ್ದಿಸಂಸ್ಥೆಗೆ ಜಿಯೊನ್ ತಿಳಿಸಿದ್ದಾರೆ.

‘ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಸಾಕಷ್ಟು ಜನ ಇಂದಿಗೂ ಸಂಶಯದಿಂದ ನೋಡುವವರಿದ್ದಾರೆ. ಆದರೆ, ಹೆಚ್ಚು ಸಾಮರ್ಥ್ಯವುಳ್ಳದ್ದನ್ನು ಹೇಗೆ? ಮಾಡಬಹುದು ಎಂಬುದನ್ನು ಮಾಡಿದ್ದೇವೆ’ ಎಂದರು. ನೆಲಮಟ್ಟಕ್ಕೆ ಹತ್ತಿಕೊಂಡಂತೆ ಇರುವ ಈ ಕಾರು ಬೀಜಾದಾಕಾರದಲ್ಲಿದ್ದು, ಅನಿಲ ಹೊರಸೂಸುವುದಿಲ್ಲ. ಸಾಮಾನ್ಯವಾಗಿ ಕಾರು ಒಂದು ಟನ್‌ಗಿಂತಲೂ ಹೆಚ್ಚಿನ ಭಾರವಾಗಿರುತ್ತವೆ. ಆದರೆ, ಈ ಕಾರಿನ ತೂಕ 200ಕೆಜಿ ಮಾತ್ರ ಇದೆ. ಆಸ್ಟ್ರೇಲಿಯಾದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಿದ ವೇಳೆ ಸಾಕಷ್ಟು ಜನರನ್ನು ಇದು ಆಕರ್ಷಿಸಿದೆ ಎಂದು ತಿಳಿಸಿದ್ದಾರೆ.‘ಕಾರು ತಯಾರಿಸಿರುವ ಹಿಂದಿನ ತಂತ್ರಜ್ಞಾನದ ಬಗ್ಗೆ ವಿವರಿಸಿದ ನಂತರ ಜನ ನಮ್ಮ ಯೋಚನೆಯನ್ನು ಇಷ್ಟಪಡುತ್ತಾರೆ. ಮತ್ತು ಇದನ್ನು ತಮ್ಮದಾಗಿಸಿಕೊಂಡು ಬಳಸಲು ಇಷ್ಟಪಡುತ್ತಾರೆ’ ಎಂದು ಜಿಯೊನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry