ಬುಧವಾರ, ಮೇ 25, 2022
29 °C

16 ದಿನಗಳ ಬಳಿಕ ಕೆಲಸಕ್ಕೆ ಮರಳಿದ ಸರ್ಕಾರಿ ನೌಕರರು.ಆಂಧ್ರ ವಿಧಾನಸಭೆಯಲ್ಲಿ ಸುಗಮ ಕಲಾಪ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ/ ಐಎಎನ್‌ಎಸ್): ಒಂದು ವಾರಕ್ಕೂ ಹೆಚ್ಚು ಕಾಲದಿಂದ ವಿವಾದಾತ್ಮಕವಾಗಿರುವ ಪ್ರತ್ಯೇಕ ತೆಲಂಗಾಣ ರಚನೆ ವಿಚಾರಕ್ಕೆ ಬಲಿಯಾಗಿದ್ದ ಆಂಧ್ರ ವಿಧಾನಸಭೆಯ ಅಧಿವೇಶನವು ಶನಿವಾರ ಸುಗಮವಾಗಿ ನಡೆಯಿತು.ತೆಲಂಗಾಣ ಪ್ರಾಂತ್ಯದ ಶಾಸಕರ ಮುಂದುವರಿದ ಸದನ ಬಹಿಷ್ಕಾರದ ನಡುವೆಯೇ ಈ ಸಾರಿಯ ಬಜೆಟ್ ಅಧಿವೇಶನದಲ್ಲಿ ಇದೇ ಮೊದಲ ಬಾರಿ ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ ಕಲಾಪಗಳು ಜರುಗಿದವು.ಆದರೆ, ಬೇಸಿಗೆಯಲ್ಲಿ ಉಂಟಾಗುವ ವಿದ್ಯುತ್ ಅಭಾವವನ್ನು ನೀಗಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಟಿಡಿಪಿ ಮತ್ತು ಸಿಪಿಎಂ ಶಾಸಕರು ಸಭಾತ್ಯಾಗ ಮಾಡಿದರು.ಇದರಿಂದ 294 ಸದಸ್ಯ ಬಲದ ಆಂಧ್ರ ವಿಧಾನ ಸಭೆಯಲ್ಲಿ ಕೇವಲ 50 ಮಂದಿ ಮಾತ್ರ ಹಾಜರಿದ್ದರು. ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಕೆಲಹೊತ್ತು ಮಾತ್ರವೇ ಸದನದಲ್ಲಿ ಕಾಣಿಸಿಕೊಂಡರು. ಪ್ರತಿಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಸತತ ಎರಡನೇ ದಿನವಾದ ಇಂದೂ ಗೈರು ಹಾಜರಿದ್ದರು.ಕಳೆದ ಒಂದು ವಾರದಿಂದ ಆಂಧ್ರ ವಿಧಾನ ಸಭೆಯಲ್ಲಿ ತೆಲಂಗಾಣ ಪರ ಮತ್ತು ವಿರೋಧಿ ಗುಂಪಿನವರು ಜೋರಾಗಿ ಗದ್ದಲ ನಡೆಸಿದ್ದರಿಂದ ಕಲಾಪ ನಡೆಸಲು ಆಗದೇ ಪದೇ ಪದೇ ಸದನವನ್ನು ಮುಂದೂಡಲಾಗಿತ್ತು.ಕೆಲಸಕ್ಕೆ ಮರಳಿದ ನೌಕರರು: ತೆಲಂಗಾಣ ಪ್ರಾಂತ್ಯದಲ್ಲಿ ಕಳೆದ 16 ದಿನಗಳಿಂದ ಅಸಹಕಾರ ಚಳವಳಿ ನಡೆಸುತ್ತಿದ್ದ ಸರ್ಕಾರಿ ನೌಕರರು ಶನಿವಾರ ಕೆಲಸಕ್ಕೆ ಹಾಜರಾದರು. ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜಧಾನಿ ಹೈದರಾಬಾದ್ ಸೇರಿದಂತೆ ಸುತ್ತಮುತ್ತಲಿನ ಒಂಬತ್ತು ಜಿಲ್ಲೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ನೌಕರರು ಈ ಚಳವಳಿ ನಡೆಸುತ್ತಿದ್ದರು.ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಮತ್ತು ತೆಲಂಗಾಣ ನೌಕರರ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಮುಖಂಡರೊಂದಿಗೆ ಶುಕ್ರವಾರ ನಡೆದ ಮಾತುಕತೆಯ ಹಿನ್ನೆಲೆಯಲ್ಲಿ ಈ ಚಳವಳಿಯನ್ನು ಕೈಬಿಡಲಾಗಿದೆ.

ಆದರೆ, ಅಸಹಕಾರ ಚಳವಳಿಯನ್ನು ತಾತ್ಕಾಲಿಕವಾಗಷ್ಟೇ ಹಿಂದಕ್ಕೆ ಪಡೆಯಲಾಗಿದೆ ಎಂದಿರುವ ಜೆಎಸಿ, ಸರ್ಕಾರ ನೀಡಿರುವ ಭರವಸೆಯಿಂದ ಹಿಂದೆ ಸರಿದರೆ ಮತ್ತೆ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ.ಸರ್ಕಾರಿ ನೌಕರರು ನಡೆಸಿದ ಈ ಚಳವಳಿಯಿಂದಾಗಿ ದಿನವೊಂದಕ್ಕೆ ರೂ 80-100 ಕೋಟಿಗಳ ನಷ್ಟ ಉಂಟಾಗಿದೆ. ತೆಲಂಗಾಣ ರಚನೆಗೆ ಲೋಕಸಭೆಯಲ್ಲಿ ಮಸೂದೆ ಮಂಡನೆ, ತೆಲಂಗಾಣ ಪ್ರಾಂತ್ಯದಲ್ಲಿ ನೇಮಕಾತಿಯಲ್ಲಿ ಮತ್ತು ಶಿಕ್ಷಣದಲ್ಲಿ ನಡೆದಿರುವ ಅನ್ಯಾಯಗಳನ್ನು ಸರಿಪಡಿಸಲು ನಿವೃತ್ತ ನ್ಯಾಯಮೂರ್ತಿಗಳ ಆಯೋಗ ರಚನೆ ಸೇರಿದಂತೆ ಹಲವು ಬೇಡಿಕೆಗಳನ್ನು ಜೆಎಸಿ ಮುಂದಿಟ್ಟಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.