16 ಲಕ್ಷ ಉದ್ಯೋಗ ಸೃಷ್ಟಿ ಅಸೋಚಾಂ

ಸೋಮವಾರ, ಮೇ 27, 2019
29 °C

16 ಲಕ್ಷ ಉದ್ಯೋಗ ಸೃಷ್ಟಿ ಅಸೋಚಾಂ

Published:
Updated:

ಆರೋಗ್ಯ ಶುಶ್ರೂಷೆ, ಹೋಟೆಲ್, ಐಟಿ, ಮಾಧ್ಯಮ ಕ್ಷೇತ್ರ

ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷ ದೇಶದ ಆರ್ಥಿಕ ಪರಿಸ್ಥಿತಿ ಮಂಕಾಗಿದ್ದರೂ, ಆರೋಗ್ಯ ಶುಶ್ರೂಷೆ, ಹೋಟೆಲ್ ಉದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ಕ್ಷೇತ್ರದಲ್ಲಿ 16 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ವಾಣಿಜ್ಯೋದ್ಯಮ ಸಂಘಟನೆ `ಅಸೋಚಾಂ~ ಹೇಳಿದೆ.ಈ ನಾಲ್ಕೂ ಕ್ಷೇತ್ರಗಳೂ ಸೇರಿದಂತೆ ಸುದ್ದಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರ ಮಾತ್ರ ಈಗಿನ ಕಳಾಹೀನ ಆರ್ಥಿಕ ಪರಿಸ್ಥಿತಿಯಲ್ಲಿಯೂ ಹೆಚ್ಚು ಸಂಕಷ್ಟಕ್ಕೊಳಗಾಗಿಲ್ಲ. ಹಾಗಾಗಿಯೇ ಈ ಕ್ಷೇತ್ರಗಳಲ್ಲಿ 16 ಲಕ್ಷ ಉದ್ಯೋಗಾವಕಾಶಗಳು ಬರಲಿವೆ ಎಂದು `ಅಸೋಚಾಂ~ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಆರೋಗ್ಯ ಶುಶ್ರೂಷೆ, ಐಟಿ ಮತ್ತು ಐಟಿ ಆಧಾರಿತ ಸೇವೆಗಳ ಕ್ಷೇತ್ರ ಹೆಚ್ಚು ಮೇಲ್ಮುಖವಾಗಿ ಪ್ರಗತಿ ಕಾಣಲಿದ್ದರೆ, ಇವುಗಳನ್ನು ಹೋಟೆಲ್ ಉದ್ಯಮ ಮತ್ತು ಸುದ್ದಿ ಮಾಧ್ಯಮ ಕ್ಷೇತ್ರ ಹಿಂಬಾಲಿಸಲಿವೆ. ಈ ಪ್ರಮುಖ ಕ್ಷೇತ್ರಗಳ ಎಲ್ಲ ಹಂತದಲ್ಲಿಯೂ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತಿವೆ ಎಂದು ರಾವತ್ ಹೇಳಿದ್ದಾರೆ.ಆರೋಗ್ಯ ಶುಶ್ರೂಷೆಯ ಕ್ಷೇತ್ರವೊಂದೇ 4.5 ಲಕ್ಷ ಮಂದಿಗೆ ಉದ್ಯೋಗ ಒದಗಿಸಲಿದೆ. ಐಟಿ ಮತ್ತು ಐಟಿ ಆಧಾರಿತ ಸೇವೆಗಳ ವಲಯದಿಂದ 3.8 ಲಕ್ಷ ಮಂದಿಗೆ ನೌಕರಿ ದೊರೆಯಲಿದೆ. ಪ್ರವಾಸೋದ್ಯಮ ಕ್ಷೇತ್ರವೂ ಸದ್ಯ ಮೇಲ್ಮುಖವಾಗಿದ್ದು, ಇಲ್ಲಿಯೂ ಈ ವರ್ಷ 3.7 ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಸುದ್ದಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರ 3.5 ಲಕ್ಷ ನೌಕರಿ ಒದಗಿಸಲಿದೆ ಎಂದು `ಅಸೋಚಾಂ~ ಅಧ್ಯಯನ ವರದಿ ತಿಳಿಸಿದೆ.ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್ ಚಟುವಟಿಕೆಗಳು ಈಗಲೂ ಆಶಾದಾಯಕವಾಗಿಯೇ ಇವೆ. ಇದೇ ಪ್ರವೃತ್ತಿ ಮುಂದಿನ 6ರಿಂದ 12 ತಿಂಗಳವರೆಗೂ ಮುಂದುವರಿಯಲಿದೆ ಎಂದು ವರದಿ ತಿಳಿಸಿದೆ.ಇನ್ನೊಂದೆಡೆ ಆರ್ಥಿಕ ಸಂಕಷ್ಟದ ಪರಿಣಾಮಗಳನ್ನು ಸೂಕ್ಷ್ಮ ವಲಯಗಳಾದ ವಿಮಾನ ಯಾನ, ಹಣಕಾಸು, ರಿಯಲ್ ಎಸ್ಟೇಟ್ ಮತ್ತು ಜವಳಿ ಕ್ಷೇತ್ರ ಅನುಭವಿಸುತ್ತಾ ನರಳುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry