16 ವರ್ಷದಿಂದ ಹಾಸಿಗೆ ಹಿಡಿದವನಿಗೆ ಕಂಕಣ ಭಾಗ್ಯ

7

16 ವರ್ಷದಿಂದ ಹಾಸಿಗೆ ಹಿಡಿದವನಿಗೆ ಕಂಕಣ ಭಾಗ್ಯ

Published:
Updated:
16 ವರ್ಷದಿಂದ ಹಾಸಿಗೆ ಹಿಡಿದವನಿಗೆ ಕಂಕಣ ಭಾಗ್ಯ

ಚೆನ್ನೈ: ಆ ಕಟ್ಟಿಗೆಯ ಮಂಚವೇ ಆತನಿಗೆ ಕಳೆದ 16 ವರ್ಷಗಳಿಂದ ಸರ್ವಸ್ವ ಎನಿಸಿದೆ. ದಿಢೀರನೇ, ವಿಚಿತ್ರ ರೀತಿಯ ಕಾಯಿಲೆ ಒಕ್ಕರಿಸಿದ ಪರಿಣಾಮ ಆತನೀಗ ಜೀವಂತ ಶವ. ಆದರೆ ಯುವತಿಯೊಬ್ಬಳು ಬೀರಿದ ಮಂದಹಾಸದಿಂದಾಗಿ ಆತನ ಈ ನರಕಯಾತನೆಯ ಬದುಕಿನಲ್ಲಿ ಬೆಳಕು ಮೂಡುವಂತಾಗಿದೆ.ಇಲ್ಲಿ ಹೇಳಹೊರಟಿರುವುದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಪಲ್ಲಿಯಾಡಿ ಎಂಬ ಗ್ರಾಮದ ಮನೆಯೊಂದರಲ್ಲಿ ಹಾಸಿಗೆ ಹಿಡಿದ 26 ವರ್ಷದ ವಿಜಯಕುಮಾರ್ ಎಂಬಾತನ ಸಂಕಷ್ಟದ ಬದುಕು ಬದಲಾದ ಬಗ್ಗೆ. ಕಳೆದುಹೋದ ತನ್ನ ನಗುವನ್ನು 19 ವರ್ಷದ ಯುವತಿಯೊಬ್ಬಳು ಮರಳಿತರಲಿದ್ದಾಳೆ ಎಂಬುದನ್ನು ವಿಜಯಕುಮಾರ್ ಬಹುಶಃ ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಆದರೆ ಮಂಜುಷಾ ವಿಜಯಕುಮಾರ್ ಬಾಳಿಗೆ ಬೆಳಕಾಗಿ ಬಂದಿದ್ದಾಳೆ.ಕೇವಲ 10ನೇ ತರಗತಿ ವರೆಗೆ ಓದಿರುವ ಮಂಜುಷಾ ಗುರುವಾರ ವಿಜಯಕುಮಾರ್ ಅವರನ್ನು ಸರಳವಾಗಿ ಮದುವೆಯಾಗುವ ಮೂಲಕ ಮಾಸಿಹೋಗಿದ್ದ ವಿಜಯಕುಮಾರ್ ಬದುಕಿಗೆ ಹೊಸ ರೂಪ ನೀಡಿದ ಕೀರ್ತಿಗೆ ಪಾತ್ರಳಾದಳು.ಜಾರ್ಜ್ ವಿಲಿಯಂ, ಅಣ್ಣಮ್ಮಾಳ್ ದಂಪತಿಗೆ ವಿಜಯಕುಮಾರ್ ಹಾಗೂ ಜಯಕುಮಾರ್ ಅವಳಿಗಳಾಗಿ ಜನಿಸಿದ್ದು, ಐದನೇ ತರಗತಿವರೆಗೆ ಈ ಇಬ್ಬರೂ ಆರೋಗ್ಯವಾಗಿಯೇ ಇದ್ದರು. ಆದರೆ ಒಂದು ದಿನ ದಿಢೀರಾಗಿ ಒಕ್ಕರಿಸಿದ ವಿಚಿತ್ರ ಕಾಯಿಲೆ ಈ ಇಬ್ಬರನ್ನು ಹಾಸಿಗೆಯಿಂದ ಮೇಲೆಳದಂತೆ ಮಾಡಿತು.`ಚೆನ್ನೈ ಸೇರಿದಂತೆ ಹಲವು ಕಡೆ ದೊಡ್ಡ ದೊಡ್ಡ ವೈದ್ಯರನ್ನು ಸಂಪರ್ಕಿಸಿದರೂ ರೋಗದ ಕಾರಣ ನಿಗೂಢವಾಗಿದೆ. ನಮ್ಮ ಪಾಲಕರು ನಮಗಾಗಿ ಸಾಕಷ್ಟು ಖರ್ಚು ಮಾಡಿದ್ದರೂ ಪ್ರಯೋಜನವಾಗಿಲ್ಲ~ ಎಂದು ಜಯಕುಮಾರ್ ಹೇಳಿದರು.  ಗ್ರಾಮದ ಮನೆಯೊಂದನ್ನು ಬಿಟ್ಟು ಈ ಕುಟುಂಬಕ್ಕೆ ಬೇರೆ ಆಧಾರ ಇಲ್ಲ. ತಮಿಳುನಾಡಿನ ಸಮಾಜ ಕಲ್ಯಾಣ ಇಲಾಖೆ ಈ ಅವಳಿಗಳಿಗೆ ಮಾಸಿಕ ಒಂದು ಸಾವಿರ ರೂ ಪಿಂಚಣಿ ನೀಡುತ್ತಿದೆ.ಮೂಲತಃ ಕೇರಳದವರಾದ ಮಂಜುಷಾ ಕುಟುಂಬ ಹಲವು ವರ್ಷಗಳಿಂದ ವಿಜಯಕುಮಾರ್ ಮನೆಯ ಸಮೀಪದಲ್ಲೇ ವಾಸವಾಗಿದ್ದು, ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಪರಸ್ಪರ ಪರಿಚಯವಾಗಿದೆ. `ಆತನ ನೋವನ್ನು ವಾಸಿಮಾಡಲು ನಾನು ಆಗಾಗ ವಿಜಯಕುಮಾರ್ ಬಳಿ ತೆರಳುತ್ತಿದ್ದು ಕೊನೆಗೆ ಆತನನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದೆ~ ಎಂದು ಮಂಜುಷಾ ತಿಳಿಸಿದರು.`ಕರುಣೆ ಹಾಗೂ ಪ್ರೀತಿಗಾಗಿ ಪರಸ್ಪರ ಹಂಬಲಿಸುತ್ತಿದ್ದ ಎರಡು ಜೀವಗಳು ಒಂದಾಗಿರುವ ಅಪರೂಪದ ಕ್ಷಣ ಇದಾಗಿದೆ~ ಎಂದು  ವಿಜಯಕುಮಾರ್ ಕಿರಿಯ ಸಹೋದರ ಜಯಕುಮಾರ್ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry