ಗುರುವಾರ , ಫೆಬ್ರವರಿ 25, 2021
29 °C

16 ಸಾವಿರ ಗಣಕಗಳು ಬೆಕ್ಕು ಹಿಡಿದ ಕತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

16 ಸಾವಿರ ಗಣಕಗಳು ಬೆಕ್ಕು ಹಿಡಿದ ಕತೆ!

ಸ್ವಯಂ ಚಾಲಿತ ಕಾರು ಮತ್ತು ಛಾಯಾಗ್ರಹಣ ಮಾಡಬಲ್ಲ ಕನ್ನಡಕಗಳನ್ನು ಸೃಷ್ಟಿಸಿ ಈ ಹಿಂದೆ ಗೂಗಲ್‌ನ    ರಹಸ್ಯ ಎಕ್ಸ್ ಪ್ರಯೋಗಾಲಯ ಸುದ್ದಿ ಮಾಡಿತ್ತು. ಈಗ ಅದರದೇ ಸಂಶೋಧಕರ ಗುಂಪೊಂದು ಮಾನವ ಮೆದುಳನ್ನು ಅನುಕರಿಸುವ ತಂತ್ರಜ್ಞಾನ ರೂಪಿಸುತ್ತಿದೆ. ಇದು ಕಳೆದ ಕೆಲವು ವರ್ಷಗಳಿಂದ ಚಾಲ್ತಿಯಲ್ಲಿರುವ ಪ್ರಯೋಗ.ಗೂಗಲ್ ವಿಜ್ಞಾನಿಗಳು 16 ಸಾವಿರ ಕಂಪ್ಯೂಟರ್‌ಗಳನ್ನು ಪರಸ್ಪರ ಬೆಸೆದು ಒಂದು `ನರಮಂಡಲ~ ತಯಾರಿಸಿದರು. ಆ ಎಲ್ಲಾ `ಸಿಪಿಯು~ಗಳನ್ನು ಅಂತರ್ಜಾಲಕ್ಕೆ ಸಂಪರ್ಕ ಕಲ್ಪಿಸಲಾಯಿತು. ನಂತರ ಅಂತರ್ಜಾಲದಲ್ಲಿ 1 ಕೋಟಿ ಡಿಜಿಟಲ್ ಚಿತ್ರಗಳನ್ನು ಚೆಲ್ಲಿದರು. ಯಾವುದೋ ಒಂದರಲ್ಲಿ ಬೆಕ್ಕಿನ ಚಿತ್ರವಿತ್ತು. ಮನುಷ್ಯರು ಬೆಕ್ಕಿನ ಚಿತ್ರಗಳನ್ನು ಅಂತರ್ಜಾಲದಲ್ಲಿ ಜಾಲಾಡುವಂತೆ ಆ ನರಮಂಡಲವೂ ಬೆಕ್ಕಿನ ಚಿತ್ರವೊಂದನ್ನು ಪತ್ತೆ ಹಚ್ಚಿ ತೋರಿಸಿತು!ಹಾಗೆ ಆ ನರಮಂಡಲಕ್ಕೆ ಬೆಕ್ಕನ್ನು ಹುಡುಕು ಎಂದು `ತಿಳಿ ಹೇಳುವುದು~ ಹುಡುಗಾಟದ ಮಾತಾಗಿರಲಿಲ್ಲ. ಕಂಪ್ಯೂ  ಟಿಂಗ್‌ನ ಹೊರೆ ಇಳಿಸುವ ಹಾಗೂ ಲಕ್ಷಾಂತರ ದತ್ತಾಂಶಗಳನ್ನು ಸುಲಭವಾಗಿ ಹುಡುಕುವ ನಿಟ್ಟಿನಲ್ಲಿ ಇಡೀ ಸಂಶೋಧನೆ ಹೊಸ ತಲೆಮಾರಿನ ಕಂಪ್ಯೂಟರ್ ವಿಜ್ಞಾನದ ಪ್ರಗತಿಯ ಸೂಚಕವಾಗಿದೆ. ಬರುವ ದಿನಗಳಲ್ಲಿ ನಡೆಯಬಹುದಾದ ಯಂತ್ರ ದೃಷ್ಟಿ, ಗ್ರಹಿಕೆ, ಧ್ವನಿ ಗ್ರಹಣ ಹಾಗೂ ಭಾಷಾ ಮಾರ್ಪಾಡಿನ ಸಾಧ್ಯತೆಗಳಿಗೆ ಬರೆದ ಮುನ್ನುಡಿಯಂತಿದೆ.ಸಂಶೋಧಕರು ಬಳಸುತ್ತಿರುವ ಕಂಪ್ಯೂಟರ್ ವಿಜ್ಞಾನದ ಉಪಾಯಗಳು ಹೊಸತೇನೂ ಅಲ್ಲ. ಆದರೂ ಈ ಹಿಂದೆ ಸಾಧ್ಯವಾಗದ ಸಿಸ್ಟೆಂಗಳ ಅಧ್ಯಯನವನ್ನು ಇವು ಆಗು ಮಾಡಿವೆ. ಅಲ್ಲದೆ ಇಂಥ ಸಂಶೋಧನೆಗಳನ್ನು ಗೂಗಲ್ ವಿಜ್ಞಾನಿಗಳು ಒಬ್ಬರೇ ಮಾಡಿದ್ದಲ್ಲ. ಕಳೆದ ವರ್ಷ ಮೈಕ್ರೊಸಾಫ್ಟ್ ವಿಜ್ಞಾನಿಗಳು ಮಾನವ ಭಾಷೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಕಂಪ್ಯೂಟರ್ ಸಂಶೋಧನೆಯ ವರದಿ ಮಂಡಿಸಿದ್ದರು. ಇದಾದ ಬಳಿಕ ಈಗ ಬೆಕ್ಕುಗಳ ಸರದಿ.ಆ ಬೆಕ್ಕುಗಳನ್ನು ಹುಡುಕಲು ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನಿ ಆಂಡ್ರ್ಯೂ ವೈ. ನ್ಯಾಗ್ ಹಾಗೂ ಗೂಗಲ್ ಫೆಲೋ ಜೆಫ್ ಡೀನ್ ನೇತೃತ್ವದ ಸಂಶೋಧನಾ ತಂಡ ಸಿದ್ಧತೆ ನಡೆಸಿತು. 16 ಸಾವಿರ ಪ್ರೊಸೆಸರ್‌ಗಳನ್ನು ಜೋಡಿಸಿ ಅವುಗಳು ಕಾರ್ಯ ನಿರ್ವಹಿಸಲು 100 ಕೋಟಿ ಸಂಪರ್ಕಗಳನ್ನು ಒದಗಿಸಲಾಯಿತು. ಅವುಗಳ ತುಂಬೆಲ್ಲ ಯೂಟ್ಯೂಬ್‌ನಿಂದ ಹೊರತೆಗೆದ 1 ಕೋಟಿ ವಿಡಿಯೋಗಳ ಥಂಬ್‌ನೇಲ್ ಇಮೇಜ್‌ಗಳನ್ನು ಅಡ್ಡಾದಿಡ್ಡಿಯಾಗಿ ಹರಿಬಿಡಲಾಯಿತು.ಜೀವ ವಿಜ್ಞಾನಿಗಳು ಹೇಳುವ `ಮಿರರ್ ಥಿಯರಿ~ಯಂತೆ ನಿಗದಿತ ಚಿತ್ರವನ್ನು ಗುರುತಿಸಲು ಮೆದುಳಿನ ನ್ಯೂರಾನ್‌ಗಳು ತನ್ನಿಂತಾನೇ ತರಬೇತಿ ಪಡೆದಿರುತ್ತವೆ.ಇಂಥದ್ದೇ ಕಾರ್ಯ ಕಂಪ್ಯೂಟರ್‌ಗೆ ಸಾಧ್ಯವಾಗುವುದೇ ಎನ್ನುವುದನ್ನು ಗೂಗಲ್ ವಿಜ್ಞಾನಿಗಳು ಪರೀಕ್ಷಿಸುವ ಸಲುವಾಗಿ ಈ ಪ್ರಯೋಗ ನಡೆಸಿದರು.ಈಗಿನ ಅನೇಕ ವಾಣಿಜ್ಯ ಕಂಪ್ಯೂಟರ್‌ಗಳು ಮನುಷ್ಯನ ಮೇಲುಸ್ತುವಾರಿಯಲ್ಲಿ ನಡೆಯುತ್ತವೆ. ಅರ್ಥಾತ್ ಮನುಷ್ಯನ ಭಾಷೆಯನ್ನು ತನ್ನ ಭಾಷೆಗೆ ಪರಿವರ್ತಿಸಿಕೊಂಡು ಕೆಲಸ ನಿರ್ವಹಿಸುತ್ತವೆ. ಉದಾಹರಣೆಗೆ ಕಂಪ್ಯೂಟರ್‌ಗೆ ಕ್ಯಾಟ್ ಎನ್ನುವ ಪದದ ಮೂಲಕ ಆದೇಶ ನೀಡಿದಾಗ ಅಲ್ಲಿ ಬೆಕ್ಕಿನ ಚಿತ್ರ ಮೂಡುತ್ತದೆ.

 

ಒಂದು ವೇಳೆ ಮನುಷ್ಯನ ಚಿತ್ರಕ್ಕೆ `ಕ್ಯಾಟ್~ ಎಂದು ನಾಮಕರಣ ಮಾಡಿದ್ದರೂ ಮನುಷ್ಯನ ಚಿತ್ರವನ್ನೇ ಬೆಕ್ಕಿನ ಚಿತ್ರವೆಂದು ಭಾವಿಸಿ ತೋರಿಸುತ್ತವೆ. ಆದರೆ ಈ ಯಾವುದೇ ಆದೇಶಗಳನ್ನು ನೀಡದೆಯೇ ನಿಗದಿತ ಚಿತ್ರವೊಂದನ್ನು ಗುರುತಿಸುವ ಶಕ್ತಿ ಕಂಪ್ಯೂಟರ್‌ಗೆ ಸಾಧ್ಯ ಎನ್ನುವುದನ್ನು ಸಾಬೀತುಪಡಿಸಿದ್ದು ಗೂಗಲ್‌ನ ಈಗಿನ ಸಂಶೋಧನೆ.ಆಂಡ್ರ್ಯೂ ಹೇಳುವಂತೆ ಎಲ್ಲವನ್ನೂ ಆತ್ಯಂತಿಕವಾಗಿ ಪಡೆಯುವ ಬದಲು ಒಂದಷ್ಟು ಟನ್ ದತ್ತಾಂಶವನ್ನು ಕಂಪ್ಯೂಟರ್ ನರಮಂಡಲಕ್ಕೆ ಒದಗಿಸಿ `ನೀನೇ ಹುಡುಕು ಎಂದು ಹೇಳಲಾಯಿತು.`ತರಬೇತಿ ವೇಳೆ ಇದೇ ಬೆಕ್ಕಿನ ಚಿತ್ರ ಎಂದು ನಾವು ಹೇಳಿರಲಿಲ್ಲ. ಅದು ಬೆಕ್ಕಿನ ಪರಿಕಲ್ಪನೆಯನ್ನು ಹುಡುಕಿತು~ ಎನ್ನುವ ಡೀನ್, ಬೆಕ್ಕಿನ ಪಾರ್ಶ್ವ ಚಿತ್ರಗಳನ್ನೂ ಕೊಟ್ಟು ಹೊರಬರುವ ಪರಿಣಾಮವನ್ನು ನಿರೀಕ್ಷಿಸಬೇಕಿತ್ತು ಎಂಬ ಇನ್ನೊಂದು ಮಗ್ಗಲ ಬಗ್ಗೆಯೂ ಅವರು ಆಲೋಚನೆ ಹರಿಸುತ್ತಾರೆ. ಗೂಗಲ್ ಮೆದುಳು ಮೊದಲು ತನ್ನ ಮೆಮೊರಿ(ಸ್ಮರಣೆಯ) ಕೇಂದ್ರಗಳಿಂದ ಕೆಲವು ಚಿತ್ರಗಳನ್ನು ಹೊಂದಿಸಿ ತನ್ನದೇ ಆದ ಕಲ್ಪನೆಯ ಬೆಕ್ಕಿನ ಚಿತ್ರವೊಂದನ್ನು ರೂಪಿಸಿಕೊಂಡಿತು. ನಂತರ ಅದು ಗಣನಾ ವಿಧಾನದ ಸಹಾಯ ಪಡೆದು ಅಲ್ಲಿ ಚೆಲ್ಲಾಡಿದ ಡಿಜಿಟಲ್ ಇಮೇಜ್‌ಗಳಲ್ಲಿ ಅಂಥದೇ ಚಿತ್ರ ಎಲ್ಲಿ ಸಿಗುತ್ತದೆ ಎಂಬುದನ್ನು ಪತ್ತೆ ಹಚ್ಚಿತು. ಇದು ಮೆದುಳಿನ ದೃಶ್ಯ ಕವಚದಲ್ಲಿ ನಡೆಯವ ಕ್ರಿಯೆಗೆ ಸಮ ಎನ್ನುವುದು ವಿಜ್ಞಾನಿಗಳ ಪ್ರತಿಪಾದನೆ.ಜೈವಿಕ ಮೆದುಳಿಗೆ ಹೋಲಿಸಿದರೆ ಈ ಕಾರ್ಯ ಅಷ್ಟೇನೂ ಗಹನವಲ್ಲದಿದ್ದರೂ ಗೂಗಲ್ ಸಂಶೋಧನೆಯ ಪ್ರಯೋಗಕ್ಕೊಳಪಟ್ಟ `ನರಮಂಡಲ~ ತನ್ನ ಗಣನಾ ವಿಧಾನವನ್ನು ಹೆಚ್ಚು ಪರಿಪಕ್ವಗೊಳಿಸಿಕೊಂಡಿರುವುದಂತೂ ನಿಜ.ಜಾರ್ಜಿಯಾ ಟೆಕ್ ಕಾಲೇಜ್ ಆಫ್ ಕಂಪ್ಯೂಟಿಂಗ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಡೇವಿಡ್ ಎ.ಬಾಡರ್ ಪ್ರಕಾರ ಹೊಸ ಸಂಶೋಧನೆಗಳು ಕಂಪ್ಯೂಟರ್ ಹಾಗೂ ಮಾನವ ಮೆದುಳಿನ ಅಂತರವನ್ನು ತಗ್ಗಿಸುತ್ತಿವೆ. `ಈ ದಶಕದ ಅಂತ್ಯದ ವೇಳೆಗೆ ಮನುಷ್ಯನ ಮೆದುಳಿನ ಪೂರ್ಣ ದೃಶ್ಯ ಕವಚವನ್ನು ಹೋಲುವ ಕಂಪ್ಯೂಟರ್ ಸಿದ್ಧಪಡಿಸಲು ಸಾಧ್ಯವಾಗಲಿದೆ~ ಎನ್ನುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.