ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ರಿಂದ 25ರ ವರೆಗೆ ದಸರಾ ಫಲಪುಷ್ಪ ಪ್ರದರ್ಶನ:ಲಕ್ಷ ಗುಲಾಬಿಯ ಆನೆಗಾಡಿ ಆಕರ್ಷಣೆ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಉತ್ಸವಕ್ಕೆ ಎರಡೇ ದಿನ ಬಾಕಿ ಉಳಿದಿದ್ದು, ಅರಮನೆಗಳ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಜಿಲ್ಲಾಡಳಿತ ರಚಿಸಿರುವ ವಿವಿಧ ದಸರಾ ಉಪ ಸಮಿತಿಗಳೂ ಭರ್ಜರಿ ಸಿದ್ಧತೆ ನಡೆಸಿವೆ.

ಆಹಾರ ಮೇಳ, ಮಹಿಳಾ, ರೈತ ದಸರಾ ಸೇರಿದಂತೆ ದಸರೆಯ ಆಕರ್ಷಣೆಗಳು ಅನೇಕ. ಇವೆಲ್ಲವುಗಳಿಗೆ ಪೈಪೋಟಿ ಎಂಬಂತೆ ಜಿಲ್ಲಾ ತೋಟಗಾರಿಕೆ ಇಲಾಖೆ ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆ ಪಕ್ಕದ ಕರ್ಜನ್ ಉದ್ಯಾನದಲ್ಲಿ ವೈವಿಧ್ಯಮಯ ಫಲಪುಷ್ಪಗಳ ಪ್ರದರ್ಶನ ಹಮ್ಮಿಕೊಳ್ಳುತ್ತಿದ್ದು, ಅರಮನೆ ಸಂಗೀತಗಾರರನ್ನು ಒಳಗೊಂಡ `ಆನೆಗಾಡಿ~ ಮಾದರಿಯನ್ನು ಒಂದು ಲಕ್ಷ ಗುಲಾಬಿ ಹೂಗಳಲ್ಲಿ ನಿರ್ಮಿಸಲಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ.ಎಸ್.ರಾಜು, `ಅ. 16 ರಿಂದ 25ರ ವರೆಗೆ ಫಲಪುಷ್ಪ ಪ್ರದರ್ಶನ ಇರುತ್ತದೆ. ಈ ಬಾರಿ ಆನೆಗಾಡಿಯಲ್ಲಿ ಸಂಗೀತ ಉಪಕರಣಗಳಾದ ವೀಣೆ, ತಬಲ, ಕೊಳಲು, ಮೃದಂಗ, ತಂಬೂರಿ, ಖಂಜಿರಾ, ಮೋರ್ಚಿಂಗ್, ಹಾರ್ಮೋನಿಯಂ ಮತ್ತು ಸ್ಯಾಕ್ಸೋಫೋನ್‌ಗಳನ್ನು ಅಳವಡಿಸಲಾಗುತ್ತದೆ. ಗಾಡಿ ಎತ್ತರ ಎಂಟು ಅಡಿ, ಆನೆ ಅದಕ್ಕಿಂತಲೂ ಎತ್ತರವಾಗಿರುತ್ತದೆ~ ಎಂದರು.

 `ಆನೆಗಾಡಿಗೆ ಗುಲಾಬಿ ಹೂಗಳ ಜತೆಗೆ ವಿವಿಧ ಬಗೆಯ ಆರ್ಕಿಡ್ ಹಾಗೂ ಇತರ ವಿದೇಶಿ ಮೂಲದ ಹೂವುಗಳಿಂದ ಅಲಂಕರಿಸಲಾಗುವುದು. ಹೂವಿನಲ್ಲಿ ಅರಳಲಿರುವ ಶಿವಲಿಂಗ ಮತ್ತೊಂದು ಪ್ರಮುಖ ಆಕರ್ಷಣೆಯಾಗಲಿದೆ. ಊಟಿ, ಕೆ.ಆರ್.ಎಸ್, ತೋಟಗಾರಿಕೆ ಇಲಾಖೆಯ ವಿವಿಧ ವಿಭಾಗಗಳು, ಮೈಸೂರು ಮಹಾನಗರ ಪಾಲಿಕೆ, ವಿವಿಧ ಕಾರ್ಖಾನೆಗಳು, ಸಂಘ-ಸಂಸ್ಥೆಗಳು ಸುಮಾರು 45 ವಿವಿಧ ಬಗೆಯ ತರಕಾರಿ, ಹೂ ಮತ್ತು ಎಲೆ ಜಾತಿಯ ಗಿಡಗಳನ್ನು ಪ್ರದರ್ಶಿಸಲಿದ್ದಾರೆ. ಒಟ್ಟು 35 ರಿಂದ 40 ಸಾವಿರ ಹೂವಿನ ಕುಂಡಗಳನ್ನು ಪ್ರದರ್ಶನಕ್ಕೆ ಇಡಲಾಗುವುದು~ ಎಂದು ಹೇಳಿದರು.

`ಸಾರ್ವಜನಿಕರಿಗೆ ತೋಟಗಾರಿಕೆಯಲ್ಲಿ ಆಸಕ್ತಿ ಮೂಡಿಸಲು ಫಲಪುಷ್ಪ ಪ್ರದರ್ಶನದ ಆವರಣದಲ್ಲಿ ತರಕಾರಿ ಕೆತ್ತನೆ, ಪುಷ್ಪ ರಂಗೋಲಿ, ಇಕೆಬಾನ, ಛಾಯಾಚಿತ್ರಗ್ರಹಣ, ಚಿತ್ರಕಲೆ, ಪರಿಸರ ಛಾಯಾಚಿತ್ರ ಮತ್ತು ಭಾರತೀಯ ಪುಷ್ಪ ಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ಅ. 16 ರಂದು ಸಂಜೆ 5 ಗಂಟೆಗೆ ತೋಟಗಾರಿಕೆ ಸಚಿವ ಎಸ್.ಎ.ರವೀಂದ್ರನಾಥ್ ಚಾಲನೆ ನೀಡಲಿದ್ದಾರೆ~ ಎಂದು ತಿಳಿಸಿದರು.

2007 ರಲ್ಲಿ ನಂದಿ, 2008 ರಲ್ಲಿ ಅಂಬಾರಿ, 2009 ರಲ್ಲಿ ಮಹಿಷಾಸುರ, 2010ರಲ್ಲಿ ಗಂಢಬೇರುಂಡ ಹಾಗೂ 2011ರಲ್ಲಿ ಚಾಮರಾಜ ಒಡೆಯರ್ ಅವರ ಪ್ರತಿಮೆಯನ್ನು ತೋಟಗಾರಿಕೆ ಇಲಾಖೆ ಗುಲಾಬಿ ಹೂಗಳಲ್ಲಿ ನಿರ್ಮಿಸಿತ್ತು.

ಮುಖ್ಯಾಂಶಗಳು
ಏನಿದು ಆನೆಗಾಡಿ?

ಮಹಾರಾಜರ ಕಾಲದಲ್ಲಿ ಅರಮನೆ ಸಂಗೀತಗಾರರು ಅರಮನೆಗೆ ಮಾತ್ರ ಸೀಮಿತರಾಗಿದ್ದರು. ಜನರಿಗೂ ಅವರನ್ನು ಪರಿಚಯಿಸುವ ಉದ್ದೇಶದಿಂದ `ಆನೆಗಾಡಿ~ಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಕರೆದೊಯ್ಯುವ ಸಂಪ್ರದಾಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ನಾಂದಿ ಹಾಡಿದ್ದರು.

ವೀಣೆ ಸುಬ್ಬಣ್ಣ, ವೀಣೆ ಶೇಷಣ್ಣ, ವೀಣೆ ವೆಂಕಟಗಿರಿ, ವಯೋಲಿನ್ ಶಿವರುದ್ರಪ್ಪ, ಮೃದಂಗ ಕಿಟ್ಟಣ್ಣ ಅವರು ಆರಂಭದ ದಿನಗಳಲ್ಲಿ `ಆನೆಗಾಡಿ~ಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT