ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1627 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಪ್ರಕಟ

ಮುಳುಗಡೆ ಸಂತ್ರಸ್ತರ ಪುನರ್ವಸತಿಗೆ ನವನಗರ ಯುನಿಟ್‌–3 ನಿರ್ಮಾಣ
Last Updated 7 ಡಿಸೆಂಬರ್ 2013, 9:21 IST
ಅಕ್ಷರ ಗಾತ್ರ

ಬಾಗಲಕೋಟೆ: ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸುವುದರಿಂದ ಮುಳುಗಡೆ­ಯಾಗುವ 523 ರಿಂದ 525 ಮೀಟರ್‌ ವರೆಗಿನ ಹಳೆ ಬಾಗಲಕೋಟೆ ಸಂತ್ರಸ್ತ­ರಿಗೆ ಪುನರ್ವಸತಿ ಕಲ್ಪಿಸಲು ಈಗಾಗಲೇ ಕಾಯ್ದಿರಿಸಲಾಗಿದ್ದ 3,600 ಎಕರೆ ಭೂಮಿ­ಯಲ್ಲಿ 1,627 ಎಕರೆ ಭೂಸ್ವಾಧೀನಕ್ಕೆ ಸದ್ದುಗದ್ದಲವಿಲ್ಲದೇ 4/1 ಅಧಿಸೂಚನೆ ಹೊರಡಿಸಲಾಗಿದೆ.

ಮುಚಖಂಡಿ ಗ್ರಾಮದ 254 ಖಾತೆದಾರರ 830 ಎಕರೆ ಭೂಮಿ ಸ್ವಾಧೀನಕ್ಕೆ ನವೆಂಬರ್‌ 22 ರಂದು ಹಾಗೂ ಬಾಗಲಕೋಟೆ ವ್ಯಾಪ್ತಿಯ 322 ಖಾತೆದಾರರ 799 ಎಕರೆ ಭೂಮಿ ಸ್ವಾಧೀನಕ್ಕೆ ನವೆಂಬರ್‌ 30­ರಂದು ಅಧಿಸೂಚನೆ ಹೊರಡಿಸಿದ್ದು, ವಿದ್ಯಾಗಿರಿಯಲ್ಲಿರುವ ಬಿಟಿಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಯ ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸ­ಲಾಗಿದೆ.

1894ರ ಭೂಸ್ವಾಧೀನ ಕಾಯ್ದೆ ಕಲಂ 17ರ ಪ್ರಕಾರ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಅಧಿಸೂಚನೆ ಪ್ರಕಟವಾದ ಬಳಿಕ ಉದ್ದೇಶಿತ ಭೂಮಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದಂತೆ ಭೂ ಮಾಲೀಕರಿಗೆ ಸೂಚನೆ ನೀಡಲಾಗಿದೆ.

ಅಧಿಸೂಚನೆ ಪ್ರಕಟವಾದ ಬಳಿಕ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೇ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೇ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನಿರ್ಧರಿಸುವಾಗ ಪರಿಗಣಿಸ­ಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಗೊಂದಲಕ್ಕೆ ಮುಕ್ತಿ: ಹಳೆ ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ನಡುವೆ ಇರುವ 3600 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿ­ಕೊಳ್ಳುವ ಬಗ್ಗೆ ಸಾಕಷ್ಟು ಪರ–ವಿರೋಧ ಅಭಿಪ್ರಾಯಗಳು ವ್ಯಕ್ತ­ವಾಗಿದ್ದವು ಅಲ್ಲದೇ, ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ಕೆಲವರು ಕಾನೂನು ಹೋರಾಟವನ್ನೂ ನಡೆಸಿದ್ದರು.

ಭೂ ಮಾಲೀಕರ ವಿರೋಧ ಮತ್ತು ರಾಜಕೀಯ ಲಾಭಿ ದೊಡ್ಡ ಪ್ರಮಾಣ­ದಲ್ಲಿ ನಡೆದಿದ್ದ ಕಾರಣ ಉದ್ದೇಶಿತ 3600 ಎಕರೆ ಭೂಮಿಯಲ್ಲಿ 1627 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತದೆಯೋ, ಇಲ್ಲವೊ ಎಂಬ ಗೊಂದಲ ಉಂಟಾ­ಗಿತ್ತು. ಆದರೆ, ಇದೀಗ ಬಿಟಿಡಿಎ 1627 ಎಕರೆ ಭೂಸ್ವಾಧೀನಕ್ಕೆ ಅಧಿಕೃತ ಅಧಿ­ಸೂಚನೆ ಹೊರಡಿಸುವ ಮೂಲಕ ಗೊಂದಲಕ್ಕೆ ಮುಕ್ತಿ ಹಾಡಿದೆ.

ನಗರಗಳ ನಡುವೆ ಬೆಸುಗೆ: ಹಳೆ­ನಗರ, ನವನಗರದ ಮತ್ತು ವಿದ್ಯಾಗಿರಿ ನಡುವೆ ಖಾಲಿ ಇರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಯುನಿಟ್ 3 ಅನ್ನು ಅಭಿವೃದ್ಧಿ ಪಡಿಸುವುದರಿಂದ ಮೂರು ತುಂಡು­ಗಳಾಗಿ ಪ್ರತ್ಯೇಕ­ವಾಗಿರುವ ಬಾಗಲ­ಕೋಟೆ­­­­ಯನ್ನು ಏಕ ನಗರವಾಗಿ ಬೆಸೆಯಲು ಅನುಕೂಲ­ವಾದಂತಾಗಿದೆ.

ಸಂತ್ರಸ್ತರಿಗೆ ಸೂಕ್ತವೇ
 ಹಳೆನಗರ, ನವನಗರದ ಮತ್ತು ವಿದ್ಯಾಗಿರಿ ನಡುವೆ ಖಾಲಿ ಇರುವ ಭೂಮಿಯಲ್ಲಿ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಅಷ್ಟೊಂದು ಸೂಕ್ತ­ವಾಗಿಲ್ಲ, ಮನೆಗೆ ಅಡಿಪಾಯ ಹಾಕುವುದಕ್ಕೇ ಅಧಿಕ ವೆಚ್ಚ ಮಾಡಬೇಕಾಗುತ್ತದೆ, ಇದು ಸಂತ್ರಸ್ತರಿಗೆ ಹೊರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಹಳೆ ಬಾಗಲಕೋಟೆಯ ದಡ್ಡೇನವರ ಆಸ್ಪತ್ರೆ ಕ್ರಾಸ್‌ನಿಂದ ವಿದ್ಯಾಗಿರಿ ಸಮೀಪದ ಮಹಾರಾಜ ಗಾರ್ಡನ್‌ ವರೆಗೆ ಬಾಗಲಕೋಟೆ ಸಿಮೆಂಟ್‌ ಕಾರ್ಖಾನೆಯ ಧೂಳು ವ್ಯಾಪಿಸು­ವುದರಿಂದ ಈ ಪ್ರದೇಶದಲ್ಲಿ ಯುನಿಟ್‌–3 ಅನ್ನು ನಿರ್ಮಾಣ ಮಾಡುವುದರಿಂದ ಸಂತ್ರಸ್ತರಿಗೆ ಭವಿಷ್ಯದಲ್ಲಿ ಸಮಸ್ಯೆ­ಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. 

ಎನ್‌ಎ ಭೂಮಿಗೂ ಅಧಿಸೂಚನೆ
ಬಿಟಿಡಿಎ ಅಧಿಸೂಚನೆ ಹೊರಡಿಸಿ­ರುವ 1627 ಎಕರೆ ಭೂಮಿಯಲ್ಲಿ ಈಗಾಗಲೇ ಕೆಲವರು ಕೃಷಿ ಭೂಮಿ­ಯನ್ನು ಕೃಷಿಯೇತರ ಭೂಮಿಯನ್ನಾಗಿ (ಎನ್‌ಎ) ಮಾರ್ಪಡಿಸಿಕೊಂಡು ಕಟ್ಟಡ ನಿರ್ಮಾಣದಲ್ಲೂ ನಿರತವಾಗಿದ್ದಾರೆ. ಆದರೆ, ಬಿಟಿಡಿಎ ಹೊರಡಿಸಿರುವ 4/1 ಅಧಿಸೂಚನೆಯಲ್ಲಿ ಎನ್‌ಎ ಆಗಿರುವ ಭೂಮಿಯೂ ಸೇರಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

ಪ್ರಭಾವಿಗಳ ಭೂಮಿ: ಬಿಟಿಡಿಎ ಭೂಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿ­ಸಿರುವ 1627 ಎಕರೆ ಭೂಮಿ­ಯಲ್ಲಿ ಸಾಮಾನ್ಯ ರೈತರಿಗಿಂತ ಹೆಚ್ಚಾಗಿ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರು, ಪ್ರತಿಷ್ಠಿತ ವೈದ್ಯರು ಮತ್ತು ಶ್ರೀಮಂತರ ನೂರಾರು ಎಕರೆ ಜಮೀನು ಇರುವುದರಿಂದ ಹಾಗೂ ಸರ್ಕಾರದ ಮಟ್ಟದಲ್ಲಿ ದೊಡ್ಡ ಮಟ್ಟದ ಲಾಬಿ ನಡೆಸುವ ಸಾಧ್ಯತೆ ಇರುವುದರಿಂದ ಭೂಸ್ವಾಧೀನ ಸುಲಭ ಸಾಧ್ಯವೇ ಎಂಬುದು ಇದೀಗ ಕುತೂಹಲ ಕೆರಳಿಸಿದೆ.

ಭೂಸ್ವಾಧೀನ ಆತಂಕ ಬೇಡ: ಪಾಟೀಲ
ಬಾಗಲಕೋಟೆ:
ಯೂನಿಟ್‌ 3 ನಿರ್ಮಾಣಕ್ಕೆ ಅಗತ್ಯವಿರುವ 1627 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು 1894ರ ಭೂಸ್ವಾಧೀನ ಕಾಯ್ದೆ ಅನ್ವಯ 4/1 ಅಧಿಸೂಚನೆ ಹೊರಡಿಸಿರುವ ಬಗ್ಗೆ ಭೂ ಮಾಲೀಕರು ಆತಂಕ ಪಡುವ ಅಗತ್ಯವಿಲ್ಲ. ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ನೂತನ ಭೂಸ್ವಾಧೀನ ಕಾಯ್ದೆ ಅನ್ವಯವೇ ಪರಿಹಾರ ಸಿಗಲಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಪ್ರಧಾನ ವ್ಯವಸ್ಥಾಪಕ ಅಧಿಕಾರಿ ಎ.ಎನ್.ಪಾಟೀಲ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.

ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಹಳೆಯ ಅಂದರೆ, 1894ರ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ನೀಡಲಾಗುತ್ತದೆ ಎಂದು ಕೆಲವರು ವ್ಯಕ್ತಪಡಿಸಿರುವ ಆತಂಕದಲ್ಲಿ ಹುರುಳಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT