17ಕ್ಕೂ ಹೆಚ್ಚು ಮುಸ್ಲಿಂರಿಗೆ ಟಿಕೆಟ್: ಪರಮೇಶ್ವರ್

7

17ಕ್ಕೂ ಹೆಚ್ಚು ಮುಸ್ಲಿಂರಿಗೆ ಟಿಕೆಟ್: ಪರಮೇಶ್ವರ್

Published:
Updated:

ತುಮಕೂರು: ಮುಸ್ಲಿಂ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಕಾಂಗ್ರೆಸ್ ಅಲ್ಪ ಸಂಖ್ಯಾತರ ಸಮಾವೇಶ ಆಯೋಜಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.ನಗರದಲ್ಲಿ ಡಿ.2ರಂದು ಸಮಾವೇಶ ನಡೆಯಲಿದ್ದು, ಡಿಸೆಂಬರ್‌ನಲ್ಲಿ ಬೆಳಗಾವಿ, ಗುಲ್ಬಾರ್ಗ ಮತ್ತು ಮೈಸೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಯಲಿದೆ. ತುಮಕೂರು ಸಮಾವೇಶಕ್ಕೆ 9 ಜಿಲ್ಲೆಗಳ 79 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತರು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಮುಸ್ಲಿಂ ಜನಾಂಗ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ದೇಶದ ಸಾಕ್ಷರತೆ ಪ್ರಮಾಣ ಶೇ 78ರಷ್ಟು ಇದ್ದು, ಮುಸ್ಲಿಂ ಜನಾಂಗದ್ದು ಶೇ 50ಕ್ಕಿಂತ ಕಡಿಮೆ ಇದೆ. ರಾಜ್ಯದಲ್ಲಿ ಶೇ 13ರಷ್ಟು ಮುಸ್ಲಿಮರು ಇದ್ದಾರೆ. ಆದರೆ ಅಧಿಕಾರ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ ಎಂದು ವಿವರಿಸಿದರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 17 ಮಂದಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಮಂದಿಗೆ ನೀಡಲಾಗುವುದು. ಆದರೆ ಬಿಜೆಪಿ ಒಬ್ಬರಿಗೂ ಟಿಕೆಟ್ ನೀಡಲಿಲ್ಲ. ಅಲ್ಲದೆ ಅಲ್ಪಸಂಖ್ಯಾತರ ಇಲಾಖೆಯನ್ನು ಇತರರಿಗೆ ನೀಡಲಾಗಿದೆ. ಕೆಪಿಎಸ್‌ಸಿಗೆ ಅಲ್ಪಸಂಖ್ಯಾತ ಸದಸ್ಯರನ್ನು ನೇಮಕ ಮಾಡಿಲ್ಲ. ಜೆಡಿಎಸ್ ಅಲ್ಪಸಂಖ್ಯಾತರನ್ನು ತಪ್ಪುದಾರಿಗೆ ಎಳೆಯುತ್ತಿದೆ. ಅಲ್ಪಸಂಖ್ಯಾತರಿಗೆ ಸುಳ್ಳು ಭರವಸೆ ನೀಡಿ ಮೋಸ ಮಾಡುತ್ತಿದೆ ಎಂದು ಆಪಾದಿಸಿದರು.

ರಾಜ್ಯದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಜನತೆ ಬೇಸತ್ತಿದ್ದು, ಬದಲಾವಣೆಗೆ ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಿದೆ.ಅಲ್ಲದೆ ಅಲ್ಪಸಂಖ್ಯಾತರ ಘಟಕ ಇಲ್ಲ ಎಂಬುದು ಸರಿಯಲ್ಲ. ಘಟಕವನ್ನು ಪುನರ್ ರಚನೆ ಮಾಡಲಾಗಿಲ್ಲ. ಹಿಂದಿನ ಪದಾಧಿಕಾರಿಗಳನ್ನು ಮುಂದುವರಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಚಾರ್ ಆಯೋಗ ನೇಮಕ ಮಾಡಿತ್ತು. ಆಯೋಗದ ವರದಿಯನ್ನು ಹಂತಹಂತವಾಗಿ ಜಾರಿ ಮಾಡಲಾಗುತ್ತಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕಡೆಗೆಣಿಸಿದೆ ಎಂಬುದು ಸುಳ್ಳು. ಅಲ್ಪಸಂಖ್ಯಾತರಿಗಾಗಿ ಕಾಂಗ್ರೆಸ್ ಹಲವು ಯೋಜನೆ ರೂಪಿಸಿದೆ ಎಂದು ಅವರು ಸಮರ್ಥಿಸಿಕೊಂಡರು.ಸಮ್ಮೇಳನದಲ್ಲಿ ಕೇಂದ್ರ ಸಚಿವ ರೆಹಮಾನ್‌ಖಾನ್, ಮಾಜಿ ಸಚಿವರಾದ ಸಿ.ಕೆ.ಜಾಫರ್ ಷರೀಫ್,         ಎಸ್.ಎಂ.ಕೃಷ್ಣ, ಸಿ.ಎಂ.ಇಬ್ರಾಹಿಂ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್, ಕಾರ್ಯದರ್ಶಿ ವಿ.ಹನುಮಂತರಾವ್, ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ಮುಂತಾದವರು ಭಾಗವಹಿಸುವರು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಟಿ.ಬಿ.ಜಯಚಂದ್ರ, ರೋಷನ್‌ಬೇಗ್, ಮಾಜಿ ಶಾಸಕರಾದ ಮಹಿಮಾ ಪಾಟೀಲ್, ಎಚ್.ಬಿ.ನಂಜೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಶಫೀಅಹ್ಮದ್, ನಗರಸಭೆ ಅಧ್ಯಕ್ಷೆ ದೇವಿಕಾ, ಮುಖಂಡರಾದ ರಫಿಕ್‌ಅಹ್ಮದ್, ಫೌಜುದಾರ್, ಭಾವಾ ಭಾಗವಹಿಸಿದ್ದರು.ಎಲ್ಲ 71 ಶಾಸಕರಿಗೂ ಟಿಕೆಟ್

ತುಮಕೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಈಗಿನ ಎಲ್ಲ 71 ಶಾಸಕರಿಗೂ ಟಿಕೆಟ್ ನೀಡಲಾಗುವುದು. ಉಳಿದಂತೆ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಆದೇಶವಿಲ್ಲದೆ ಏನೂ ನಡೆಯಲ್ಲ. ಎಲ್ಲವೂ ದೆಹಲಿಯ ಅಣತಿಯಂತೆಯೇ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.ನಗರಸಭೆ ಬಂಡಾಯ ಸದಸ್ಯರ ವಿರುದ್ಧ ಕ್ರಮ

ತುಮಕೂರು: ನಗರಸಭೆ ಅಧ್ಯಕ್ಷೆ ವಿರುದ್ಧ ಬಂಡಾಯ ಎದ್ದು ಅಧಿಕಾರದಿಂದ ಕೆಳಗಿಳಿಸಲು ಮುಂದಾಗಿರುವ ಕಾಂಗ್ರೆಸ್ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಿಗೆ ನೋಟಿಸ್ ನೀಡಲಿದೆ. ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬಂಡಾಯಕ್ಕೆ ಕಾರಣರಾದ ಉಪಾಧ್ಯಕ್ಷ ಅಸ್ಲಂಪಾಷಾ ಅವರನ್ನು ಪಕ್ಷದಿಂದ ಈ ಹಿಂದೆ ಹೊರ ಹಾಕಲಾಗಿತ್ತು. ಕ್ಷಮೆ ಕೋರಿ ಮತ್ತೆ ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.ಕಾಂಗ್ರೆಸ್ ಟಿಕೆಟ್‌ಗೆ ಮಹಾಪೂರ

ಚಿಕ್ಕನಾಯಕನಹಳ್ಳಿ: ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ಮಹಾಪೂರ ಹರಿದು ಬರುತ್ತಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಯಶಸ್ಸು ಸಿಗಲಿದೆ ಎಂದು ಪಕ್ಷದ ವೀಕ್ಷಕರಾದ ಮಹಿಮಾ ಪಟೇಲ್ ತಿಳಿಸಿದರು.ಗುರುವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಪಡೆದು ಮಾತನಾಡಿ, ಜಿಲ್ಲೆಯಲ್ಲಿ ಪಕ್ಷದ ಟಿಕೆಟ್‌ಗಾಗಿ ನೂಕು ನುಗ್ಗಲಿನ ವಾತಾವರಣ ಸೃಷ್ಟಿಯಾಗಿದ್ದು ಕನಿಷ್ಠ ಎಂಟು ಕ್ಷೇತ್ರದಲ್ಲಿ ಜಯಗಳಿಸಲಿದ್ದೇವೆ ಎಂದರು.ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾದ ಸಂತೋಷ್ ಜಯಚಂದ್ರ, ರಾಜೇಂದ್ರ ರಾಜಣ್ಣ, ಡಾ.ಪರಮೇಶ್ವರಪ್ಪ, ಬುಕ್ಕಾಪಟ್ಟಣದ ಆರ್.ರಾಮಚಂದ್ರಯ್ಯ ತಮ್ಮ ಬೆಂಬಲಿಗರೊಂದಿಗೆ ಅರ್ಜಿ ಸಲ್ಲಿಸಿದರೆ, ಕ್ಯಾಪ್ಟನ್ ಸೋಮಶೇಖರ್, ಎಸ್.ರಹಮತ್‌ಉಲ್ಲಾ, ಯಳನಡು ಸಿದ್ದರಾಮಯ್ಯ, ಟಿ.ಆರ್.ವಾಸುದೇವ್, ಎಚ್‌ಬಿಎಸ್ ನಾರಾಯಣಗೌಡ, ಡಿ.ಎ.ಗೋಪಾಲ್, ಸಾದರಹಳ್ಳಿ ಮಲ್ಲಿಕಾರ್ಜುನಯ್ಯ, ಕೆ. ಶಿವಣ್ಣ ಅರ್ಜಿ ಸಲ್ಲಿಸಿದರು.ವೀಕ್ಷಕರಾದ ಐವಾನ್ ನಿಗ್ಲಿ ಜತೆ ಕೆಪಿಸಿಸಿ ಪದಾಧಿಕಾರಿಗಳಾದ ನೂರ್‌ಜಹಾನ್, ಶ್ರಿನಿವಾಸ್ ಮುಂತಾದವರಿದ್ದರು.ಕಾಂಗ್ರೆಸ್ ವೀಕ್ಷಕರಿಂದ ಅರ್ಜಿ ಸ್ವೀಕಾರ

ತುರುವೇಕೆರೆ: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷಿಗಳಿಂದ ಗುರುವಾರ ಪಟ್ಟಣದಲ್ಲಿ ಕಾಂಗ್ರೆಸ್ ವೀಕ್ಷಕರು ಅರ್ಜಿ ಸ್ವೀಕರಿಸಿದರು.ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ಮುಖಂಡ ಚೌದ್ರಿ ರಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜ್, ಬಿ.ಎಸ್.ವಸಂತಕುಮಾರ್, ಗೀತಾ ರಾಜಣ್ಣ, ಗೋವಿಂದರಾಜ್‌ಗೌಡ, ತಿರುಮಲೇಗೌಡ, ಎಂ.ಎಸ್.ಪರಮೇಶ್, ಡಿ.ಕೆ.ನಂಜೇಗೌಡ, ಡಿ.ಎಸ್.ಗಂಗಾಧರಗೌಡ, ಎಂ.ವಿಶ್ವೇಶ್ವರಯ್ಯ, ಡಿ.ಕೆ.ತಿಮ್ಮೇಗೌಡ, ಪ್ರವೀಣ್‌ಗೌಡ, ಟಿ.ಎಂ.ಗೌಡ, ಬೆಟ್ಟಸ್ವಾಮಿಗೌಡ, ವೆಂಕಟೇಶಮೂರ್ತಿ, ಉಗ್ರೇಗೌಡ ಅವರು ವೀಕ್ಷಕರಿಗೆ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry