17ಕ್ಕೆ ಹೊಂಬುಜ ಸ್ವಾಮೀಜಿ ಪಟ್ಟಾಭಿಷೇಕ

7

17ಕ್ಕೆ ಹೊಂಬುಜ ಸ್ವಾಮೀಜಿ ಪಟ್ಟಾಭಿಷೇಕ

Published:
Updated:
17ಕ್ಕೆ ಹೊಂಬುಜ ಸ್ವಾಮೀಜಿ ಪಟ್ಟಾಭಿಷೇಕ

ಶಿವಮೊಗ್ಗ: ಹೊಂಬುಜ ಜೈನಮಠದ ದೇವೇಂದ್ರ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಪೀಠದ ನೂತನ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಧರ್ಮಕೀರ್ತಿ ಸ್ವಾಮೀಜಿ ಅವರ ಪಟ್ಟಾಭಿಷೇಕ ಮಹೋತ್ಸವ ನ.14ರಿಂದ 17ರವರೆಗೆ ನೆರವೇರಲಿದೆ.14ರಂದು ಸಂಜೆ 4ಕ್ಕೆ ಧರ್ಮಕೀರ್ತಿ ಸ್ವಾಮೀಜಿ ಅವರ ಪುರ ಪ್ರವೇಶವಾಗಲಿದೆ. ಸಂಜೆ 6ಕ್ಕೆ ಸ್ವಾಗತ ಹಾಗೂ ಸಭಾ ಕಾರ್ಯಕ್ರಮಗಳು ನಡೆಯಲಿವೆ. 15ರಂದು ಮುಂಜಾನೆ 6ರಿಂದ ಪಾರ್ಶ್ವನಾಥ ತೀರ್ಥಂಕರರ ಬಸದಿಯಲ್ಲಿ ನವ ಕಳಸಾಭಿಷೇಕ ಸಹಿತ 24 ತೀರ್ಥಂಕರರ ಆರಾಧನೆ ನಡೆಯಲಿದೆ. ಸಂಜೆ 6ಕ್ಕೆ ಧಾರ್ಮಿಕ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊಂಬುಜ ಜೈನಮಠ ಆಡಳಿತ ಮಂಡಳಿ ಗೌರವಾಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.16ರಂದು ಮುಂಜಾನೆ 6ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 4.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ.ಹಂ.ಪ. ನಾಗರಾಜಯ್ಯ ವಿಶೇಷ ಉಪನ್ಯಾಸ ನೀಡುವರು. ತದನಂತರ ಭಕ್ತಿ, ಸುಗಮ ಸಂಗೀತ ಹಾಗೂ ನೃತ್ಯರೂಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.17ರಂದು ಮುಂಜಾನೆ 11.15ಕ್ಕೆ ನೂತನ ಸ್ವಾಮೀಜಿಯ ಪಟ್ಟಾಭಿಷೇಕ ನಡೆಯಲಿದೆ. ಮಧ್ಯಾಹ್ನ 3.15ಕ್ಕೆ ಸ್ವಾಮೀಜಿಯ ಪಲ್ಲಕ್ಕಿ ಉತ್ಸವ, ಸಂಜೆ 5.15ಕ್ಕೆ ನೂತನ ಸ್ವಾಮೀಜಿ ಅವರಿಂದ ಉಪನ್ಯಾಸ ಕಾರ್ಯಕ್ರಮವಿದೆ. ರಾತ್ರಿ 9ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸೇರಿದಂತೆ ವಿವಿಧ ಜೈನಮಠಗಳ ಸ್ವಾಮೀಜಿಗಳು ಪಾಲ್ಗೊಳ್ಳುವರು ಎಂದು ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಹೊಸನಗರದ ಹೊಂಬುಜ ಕ್ಷೇತ್ರದಲ್ಲಿ ನಡೆಯುವ ಮಹೋತ್ಸವಕ್ಕೆ ಸರ್ವ ಧರ್ಮದವರೂ ಆಗಮಿಸುತ್ತಿದ್ದು, ಮಹಾರಾಷ್ಟ್ರ, ತಮಿಳುನಾಡು ಹಾಗೂ ಉತ್ತರಭಾರತದ ಕೆಲ ರಾಜ್ಯಗಳಿಂದಲೂ ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುವರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಸ್ಥಳೀಯ ಶಾಸಕ ಕಿಮ್ಮನೆ ರತ್ನಾಕರ ಅತಿಥಿಗಳಾಗಿ ಭಾಗವಹಿಸುವರು ಎಂದರು.ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಹೊಂಬುಜ ಗ್ರಾಮದ ಈಶ್ವರ, ಬಿಲ್ಲೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಹೊಂಬುಜ ಜೈನಮಠ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಕೆ. ಜಯವರ್ಮರಾಜ ಬಳ್ಳಾಲ್, ಆಡಳಿತ ಮಂಡಳಿ ಸದಸ್ಯ ಎಸ್. ಜಿತೇಂದ್ರಕುಮಾರ್, ಮಹೋತ್ಸವ ಮಾಧ್ಯಮ ಸಂಯೋಜಕ ಅಮೃತ ಮಲ್ಲ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry