17ರಂದು ಕಚೇರಿಗಳಿಗೆ ಬೀಗಮುದ್ರೆ

7

17ರಂದು ಕಚೇರಿಗಳಿಗೆ ಬೀಗಮುದ್ರೆ

Published:
Updated:

ಬೆಂಗಳೂರು: ರಾಜ್ಯದಲ್ಲಿ  ಕೆಳ ಹಂತದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ವಿರೋಧಿಸಿ ಇದೇ 17ರಂದು ಎಲ್ಲ ತಾಲ್ಲೂಕು ಕಚೇರಿಗಳಿಗೆ ಬೀಗಮುದ್ರೆ ಹಾಕಿ  ಪ್ರತಿಭಟನೆ ನಡೆಸಲಾಗುವುದು ಎಂದು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಹೇಳಿದರು.`ಯುವ ಸಂಘರ್ಷ ಅಭಿಯಾನ~ದ ಭಾಗವಾಗಿ ಭ್ರಷ್ಟಾಚಾರ ಹತ್ತಿಕ್ಕಲು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಗೂ ಬೀಗ ಹಾಕಿ ಪ್ರತಿಭಟನೆ ಮಾಡಿದ್ದೇವೆ. ಎರಡನೇ ಹಂತವಾಗಿ ಈಗ ತಾಲ್ಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. `ಲೋಕಾಯುಕ್ತರ ನೇಮಕ ಇನ್ನೂ ಆಗಿಲ್ಲ. ಇದರಿಂದ ಸ್ಥಳೀಯ ಮಟ್ಟದ ಸರ್ಕಾರಿ ಅಧಿಕಾರಿಗಳನ್ನು ಕೇಳುವವರೇ ಇಲ್ಲವಾಗಿದೆ.ವ್ಯಾಪಕವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಾರ್ವಜನಿಕರು ಚಿಕ್ಕಪುಟ್ಟ ಕೆಲಸ ಮಾಡಿಸಿಕೊಳ್ಳಬೇಕಿದ್ದರೂ ಲಂಚ ಕೊಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇದನ್ನು ವಿರೋಧಿಸಿ ಅಂದು ಬೆಳಿಗ್ಗೆ 10.30ಕ್ಕೆ ಎಲ್ಲ ತಾಲ್ಲೂಕು ಕಚೇರಿಗಳಿಗೆ ಏಕಕಾಲಕ್ಕೆ ಬೀಗ ಹಾಕಲಾಗುವುದು~ ಎಂದರು.`ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಅರ್ಹ ಹೆಣ್ಣುಮಕ್ಕಳಿಗೆ ಇದುವರೆಗೆ ಬಾಂಡ್ ವಿತರಿಸದೆ ಸರ್ಕಾರ ಗೊಂದಲ ಸೃಷ್ಟಿಸಿದೆ. ಕಡು ಬಡವರಿಗೆ ಇನ್ನೂ ಪಡಿತರ ಚೀಟಿ ವಿತರಣೆ ಆಗಿಲ್ಲ. ರೈತ ಸಮುದಾಯಕ್ಕೆ ಸಮರ್ಪಕ ವಿದ್ಯುತ್ ಕೊಟ್ಟಿಲ್ಲ. ಬಿತ್ತನೆ ಬೀಜ ಕೇಳುವ ರೈತರಿಗೆ ಲಾಠಿ ಪ್ರಹಾರ ಮಾಡಲಾಗುತ್ತಿದೆ. 22 ಖಾತೆಗಳನ್ನು ಮುಖ್ಯಮಂತ್ರಿ ಒಬ್ಬರೇ ನಿರ್ವಹಿಸುತ್ತಿದ್ದು, ಎಷ್ಟೋ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರೇ ಇಲ್ಲ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಪ್ರತಿಭಟನೆ ನಡೆಸಲಾಗುತ್ತಿದೆ~ ಎಂದು  ರಿಜ್ವಾನ್ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry