17ರಂದು `ಗುಲ್ಬರ್ಗ ಬಂದ್'

7
ತೊಗರಿಗೆ ಬೆಂಬಲ ಬೆಲೆ; ಮಂಡಳಿಗೆ ಆವರ್ತ ನಿಧಿ

17ರಂದು `ಗುಲ್ಬರ್ಗ ಬಂದ್'

Published:
Updated:

ಗುಲ್ಬರ್ಗ: ಪ್ರತಿ ಕ್ವಿಂಟಲ್ ತೊಗರಿಗೆ 5,000 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಹಾಗೂ ರೈತರಿಂದ ತೊಗರಿ ಖರೀದಿಸಲು ತೊಗರಿ ಅಭಿವೃದ್ಧಿ ಮಂಡಳಿಗೆ 100 ಕೋಟಿ ರೂಪಾಯಿ ಆವರ್ತ ನಿಧಿ ನೀಡುವಂತೆ ಒತ್ತಾಯಿಸಿ 17ರಂದು `ಗುಲ್ಬರ್ಗ ಬಂದ್'ಗೆ ಕರೆ ನೀಡಲಾಗಿದೆ.ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಎಚ್‌ಕೆಸಿಸಿಐ), ತೊಗರಿ ಬೆಳೆಗಾರರು ಮತ್ತು ಉತ್ಪಾದಕರು, ಆಹಾರಧಾನ್ಯ ಮತ್ತು ಬೀಜ ವರ್ತಕರ ಸಂಘದ ಪ್ರತಿನಿಧಿಗಳು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು. “ತೊಗರಿಯತ್ತ ಸರ್ಕಾರ ಗಮನಹರಿಸುವಂತೆ ಒತ್ತಾಯಿಸಿ ಎರಡು ಹಂತಗಳ ಹೋರಾಟ ನಡೆಸಿದ ಬಳಿಕ ಮೂರನೇ ಹಂತವಾಗಿ ಈ ಹೋರಾಟ ಕೈಗೆತ್ತಿಕೊಳ್ಳಲಾಗಿದೆ” ಎಂದು ಹೇಳಿದರು.ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ಹಲವು ಸಂಘಟನೆಗಳ ಪ್ರತಿನಿಧಿಗಳು ಬೆಳಗಾವಿಗೆ ಹೋಗಿ ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಮನವಿ ಸಲ್ಲಿಸಿದರೂ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, “ಬೆಳಗಾವಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಮುಖ್ಯಮಂತ್ರಿಗಳು ಲೋಕಾಭಿರಾಮವಾಗಿ ಮಾತಾಡುತ್ತ ಬೇಡಿಕೆಗೆ ಸ್ಪಂದಿಸುವುದಾಗಿ ಹೇಳಿದರು. ಈ ಕುರಿತು ಸಂಪುಟ ಉಪಸಮಿತಿ ರಚಿಸಿ, ಪರಿಶೀಲಿಸುವುದಾಗಿ ನೀಡಿದ ಭರವಸೆ ಈಡೇರಿಲ್ಲ” ಎಂದರು.ಕಳೆದ ವರ್ಷ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ 500 ರೂಪಾಯಿಗಳನ್ನು ಬೆಂಬಲ ಬೆಲೆ ಜತೆಗೆ ಕೊಟ್ಟಿತ್ತು. ಆದರೆ ಈ ವರ್ಷ ಅದನ್ನು ಕೈಬಿಟ್ಟಿದೆ. ವ್ಯಾಪಾರಿಗಳಿಗೆ ಅನುಕೂಲವಾಗುವಂಥ ಆಮದು ನೀತಿಯನ್ನು ಕೇಂದ್ರ ಅನುಸರಿಸುತ್ತಿದ್ದು, ಇದರಿಂದಾಗಿ ರೈತರ ಬದುಕು ಸಂಕಷ್ಟಕ್ಕೆ ಈಡಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. “ಇದೇ ಭಾಗದವರಾದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಕಾಳಜಿವಹಿಸಿ, ಬೆಂಬಲ ಬೆಲೆ ಜತೆಗೇ 500 ರೂಪಾಯಿ ಕೊಡುವಂತೆ ಪ್ರಯತ್ನಿಸಬೇಕು. ವಿದೇಶದಿಂದ ಆಮದು ಮಾಡುವ ಬೇಳೆಕಾಳು ಮೇಲೆ ಶೇ 50ರಷ್ಟು ಆಮದು ಸುಂಕ ವಿಧಿಸಬೇಕು” ಎಂದು ಆಗ್ರಹಿಸಿದರು.ಬೆಲೆ ಅಸ್ಥಿರತೆ: ಸರ್ಕಾರಿ ಸಂಸ್ಥೆಗಳ ಮೂಲಕ ಆಮದು ಮಾಡಿಕೊಳ್ಳುವುದು ಹಾಗೂ ವ್ಯಾಪಾರಿಗಳಿಗೆ ಆಮದಿಗೆ ಅವಕಾಶ ಕಲ್ಪಿಸುವುದರಿಂದ ಬೆಲೆ ಅಸ್ಥಿರತೆ ಉಂಟಾಗುತ್ತಿದೆ ಎಂದು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ ವಿಶ್ಲೇಷಿಸಿದರು. “ಸರ್ಕಾರ ಆಮದು ಮಾಡಿಕೊಳ್ಳುವ ಬೇಳೆ ಕಾಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ವಿತರಿಸಲಾಗುತ್ತಿದೆ. ನಮ್ಮ ರೈತರಿಗೆ ಆರ್ಥಿಕ ಪ್ರಯೋಜನ ಕಲ್ಪಿಸಲು ತೊಗರಿ ಮಂಡಳಿಗೆ ಬಡ್ಡಿರಹಿತವಾಗಿ ನೂರು ಕೋಟಿ ರೂಪಾಯಿ ನೀಡಿ, ಮಾರುಕಟ್ಟೆ ಪ್ರವೇಶಿಸಲು ಅನುವು ಮಾಡಿಕೊಡಬೇಕು” ಎಂದೂ ಆಗ್ರಹಿಸಿದರು.ಇದಕ್ಕೆ ಸಹಮತ ವ್ಯಕ್ತಪಡಿಸಿದ ದಾಲ್‌ಮಿಲ್ ಒಕ್ಕೂಟದ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ, “ಹೊರದೇಶದಿಂದ ಬರುವ ತೊಗರಿಬೇಳೆಯಲ್ಲಿ ಪೋಷಕಾಂಶ ಇರುವುದಿಲ್ಲ; ಆದರೆ ನಮ್ಮಲ್ಲಿ ಬೆಳೆಯುವ ತೊಗರಿ ಹಲವು ಬಗೆಯ ಪ್ರೋಟೀನ್ ಮತ್ತಿತರ ಪೋಷಕಾಂಶದಿಂದ ಸಮೃದ್ಧವಾಗಿರುತ್ತದೆ” ಎಂದರು. ಮಾಜಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಪ್ರಸ್ತುತ ಪ್ರತಿ ದಿನ ಸುಮಾರು 5,000 ಕ್ವಿಂಟಲ್‌ನಷ್ಟು ತೊಗರಿ ಮಾರುಕಟ್ಟೆಗೆ ಬರುತ್ತಿದೆ. ಈಗಲೇ ಸರ್ಕಾರ ನಿರ್ಧಾರ ತೆಗೆದುಕೊಂಡು ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಬಂದ್: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೃಷಿ ಸಚಿವರಿಗೆ ರೈತರ ಸಂಕಷ್ಟ ವಿವರಿಸಲಾಗಿದೆ. ಬೆಲೆ ನಿಗದಿ ಕುರಿತು ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಚಿಸಲಾದ ಉಪ ಸಮಿತಿಯು ತನ್ನ ಕೆಲಸದಲ್ಲಿ ವಿಳಂಬ ಮಾಡುತ್ತಿದೆ. ಹೀಗಾಗಿ ಹಲವು ಹಂತದ ಹೋರಾಟಗಳಿಗೆ ಸರ್ಕಾರ ಸ್ಪಂದಿಸದ ಪರಿಣಾಮ, ಇದೇ 17ರಂದು ಗುಲ್ಬರ್ಗ ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು, ಸಾರ್ವಜನಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಂದ್ ಯಶಸ್ವಿಗೊಳಿಸಬೇಕು ಎಂದು ಎಲ್ಲ ಪ್ರತಿನಿಧಿಗಳು ಮನವಿ ಮಾಡಿದರು. ಎಚ್‌ಕೆಸಿಸಿಐ ಗೌರವಕಾರ್ಯದರ್ಶಿವ ಬಸವರಾಜ ಹಡಗಿಲ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry