17ರಂದು ಗುಲ್ಬರ್ಗ ಬಂದ್‌ಗೆ ನಿರ್ಧಾರ

7

17ರಂದು ಗುಲ್ಬರ್ಗ ಬಂದ್‌ಗೆ ನಿರ್ಧಾರ

Published:
Updated:

ಗುಲ್ಬರ್ಗ: ಕಳಪೆ ಮಟ್ಟದ ತೊಗರಿ ಬೇಳೆ ವಿದೇಶದಿಂದ ಆಮದು ಆಗುತ್ತಿದ್ದು, ಈಗಿರುವ ತೆರಿಗೆ ಪದ್ಧತಿ ಕೂಡ ಅವೈಜ್ಞಾನಿಕವಾಗಿದೆ. ಇದನ್ನು ತಡೆಯುವ ಶಕ್ತಿ ಕೇಂದ್ರ ಸರ್ಕಾರಕ್ಕಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ರೈತರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದರು.ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ಪಕ್ಷಗಳ ಮುಖಂಡರ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದರು.ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ್ ಮಾತನಾಡಿ, ತೊಗರಿ ಪ್ಯಾಕೇಜ್ ನೀಡುವ ಅಧಿಕಾರ ತೊಗರಿ ಮಂಡಳಿಗಿದ್ದು, ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗೆ ಇದೆ. ತೊಗರಿ ಖರೀದಿಗಾಗಿ ರೂ. 100 ಕೋಟಿ ಹಣ ನೀಡಬೇಕು ಎಂಬ ವರದಿಯನ್ನು ಜಿಲ್ಲಾಧಿಕಾರಿಯೇ ನೀಡಬೇಕಿದೆ. ಹೀಗಾಗಿ ಅವರು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದರು.

ವಿಧಾನ ಪರಿಷತ್‌ನ ಮಾಜಿ ಉಪ ಸಭಾಪತಿ ಬಿ.ಆರ್. ಪಾಟೀಲ ಮಾತನಾಡಿ, ತೊಗರಿ ಬೆಳೆಗಾರರ ಈ ಸಂಕಷ್ಟಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದ್ದು, ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಪಾಟೀಲ ತೇಲ್ಕೂರ್, ಎಪಿಎಂಸಿ ಅಧ್ಯಕ್ಷ ಎಸ್. ಬಗಲಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ್, ಸುರೇಶ ಸಜ್ಜನ್, ಅರುಣಕುಮಾರ ಪಾಟೀಲ, ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ ತಮ್ಮ ಬೆಂಬಲ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಿ ಚವ್ಹಾಣ, ಶಿವಕುಮಾರ ಘಂಟಿ, ಚಂದ್ರಶೇಖರ ತಳ್ಳಳ್ಳಿ, ಸುರೇಶ ಬಡಿಗೇರ್, ಬಸವರಾಜ ಹಡಗಿಲ್, ಮಲ್ಲಿಕಾರ್ಜುನ ಶಾಬಾದಿ, ದಾಲ್‌ಮಿಲ್ ಅಸೋಸಿಯೇಶನ್ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಅಧ್ಯಕ್ಷತೆ ವಹಿಸಿ ಸಭೆಯ ನಿರ್ಣಯ ಪ್ರಕಟಿಸಿದರು.ತೊಗರಿ ಆವರ್ತ ನಿಧಿಗೆ ಒತ್ತಾಯ

ಗುಲ್ಬರ್ಗ: ತೊಗರಿ ಬೆಲೆ ಸ್ಥಿರತೆಗಾಗಿ ಹಾಗೂ ತೊಗರಿಯ ರಕ್ಷಣಾತ್ಮಕ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಕ್ಕೆ ರಾಜ್ಯ ಸರ್ಕಾರವು ಆವರ್ತ ನಿಧಿಯಿಂದ ಕರ್ನಾಟಕ ತೊಗರಿ ಮಂಡಳಿಗೆ ರೂ 100 ಕೋಟಿ ಬಡ್ಡಿರಹಿತ ಸಹಾಯ ಒದಗಿಸಬೇಕು ಎಂದು ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ (ಎಚ್‌ಕೆಸಿಸಿಐ) ಗುರುವಾರ ಕರೆಯಲಾಗಿದ್ದ ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರ ಸಭೆಯು ಒತ್ತಾಯಿಸಿತು.

ಈ ಸಂಬಂಧ ವಿವಿಧ ಪಕ್ಷ ಹಾಗೂ ಸಂಘ-ಸಂಸ್ಥೆಗಳ ಮುಖಂಡರನ್ನು ಒಳಗೊಂಡ ನಿಯೋಗದೊಂದಿಗೆ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ನಾಳೆ (ಶುಕ್ರವಾರ) ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಲು ಇದೇ 10ರಂದು ಬೆಳಗಾವಿಗೆ ನಿಯೋಗದೊಂದಿಗೆ ತೆರಳಲಾಗುವುದು. ತೊಗರಿಗೆ ರೂ 5,000 ಬೆಂಬಲ ಬೆಲೆ ನೀಡುವಂತೆ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಿಗೆ ಮನವಿ ಮಾಡಲು ನಿರ್ಧರಿಸಲಾಯಿತು.ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದಿದ್ದಲ್ಲಿ ಡಿ. 17ರಂದು ಗುಲ್ಬರ್ಗ ಬಂದ್ ಕರೆ ನೀಡುವುದರ ಜೊತೆಗೆ ರೈತರ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry