ಬುಧವಾರ, ಅಕ್ಟೋಬರ್ 16, 2019
22 °C

17ರಿಂದ ರೈತರಿಂದ ಉಪವಾಸ ಸತ್ಯಾಗ್ರಹ

Published:
Updated:

ಗುಲ್ಬರ್ಗ: ಪ್ರತಿ ಕ್ವಿಂಟಲ್ ತೊಗರಿಗೆ ರೂ. 4,500 ಬೆಂಬಲ ಬೆಲೆ ನಿಗದಿ, ಮಲ್ಲಾಬಾದ ಏತ ನೀರಾವರಿ ವಿಭಾಗ ಆರಂಭ ಹಾಗೂ ಕೋನ ಹಿಪ್ಪರಗಾ ಸರಡಗಿ ಬ್ಯಾರೇಜ್ ನಿರ್ಮಾಣಕ್ಕೆ ಆಗ್ರಹಿಸಿ ಜಿಲ್ಲಾ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಜೇವರ್ಗಿಯಲ್ಲಿ ಇದೇ 17ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ.ಸಮಿತಿಯ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಈ ಭಾಗದ ಪ್ರಮುಖ ಬೆಳೆಯಾದ ತೊಗರಿಯನ್ನು ಸರ್ಕಾರವೇ ಖರೀದಿಸಬೇಕು ಎಂದು ಆಗ್ರಹಿಸಿದ ಅವರು, ಹಲವು ವರ್ಷಗಳಿಂದ ರೈತರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪವಾದಾಗ, ವಾರದೊಳಗೆ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಭರವಸೆ ನೀಡಿದ್ದರು. ಆದರೆ ಈವರೆಗೂ ಕೇಂದ್ರ ಆರಂಭವಾಗಿಲ್ಲ.

 

ಕಳೆದ ವರ್ಷ ಮಾರುಕಟ್ಟೆಯಲ್ಲಿ ರೂ. 3,500 ದರ ಇದ್ದಾಗಲೂ ಸರ್ಕಾರ ರೂ. 4000 ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಕೇಂದ್ರಗಳನ್ನು ಆರಂಭಿಸಿತ್ತು. ಈ ಸಲ ಮಳೆ ಕೊರತೆಯಿಂದಾಗಿ ಇಳುವರಿ ಕಡಿಮೆಯಿದ್ದು, ಬೆಲೆ ಕುಸಿದರೆ ರೈತರಿಗೆ ಅಪಾರ ನಷ್ಟವಾಗಲಿದೆ ಎಂದು ಕೇದಾರಲಿಂಗಯ್ಯ ಕಳವಳ ವ್ಯಕ್ತಪಡಿಸಿದರು.“ತೊಗರಿ ಇಳುವರಿಯು ಮಾರುಕಟ್ಟೆಗೆ ಬರುವಾಗ ಪ್ರತಿ ವರ್ಷ ಬೆಲೆ ಕುಸಿಯುತ್ತದೆ. ಆದರೆ ಈ ಬಗ್ಗೆ ಸರ್ಕಾರ ತಕ್ಷಣ ಪರಿಹಾರ ನೀಡುವುದಿಲ್ಲ ಎಂಬುದು ನಮಗೆ ನೋವು ಮೂಡಿಸುವ ಸಂಗತಿಯಾಗಿದೆ” ಎಂದು ಅವರು ಹೇಳಿದರು.ಏತ- ಬ್ಯಾರೇಜ್: ಸತತ 15 ವರ್ಷಗಳ ಹೋರಾಟದ ಫಲವಾಗಿ ಮಲ್ಲಾಬಾದ ಏತ ನೀರಾವರಿ ಯೋಜನೆ ಆರಂಭವಾಗಿದೆ. ಇದಕ್ಕಾಗಿ ಎಂಟು ಕಡೆ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಸ್ಥಳ ಗುರುತಿಸಿದೆ.ಕಾಮಗಾರಿ ಚುರುಕುಗೊಳಿಸಲು ಮಲ್ಲಾಬಾದ ಏತ ನೀರಾವರಿ ಯೋಜನೆ ವಿಭಾಗ ಹಾಗೂ ಮೂರು ಉಪ ವಿಭಾಗಗಳನ್ನು ಆರಂಭಿಸಬೇಕು. ಎಲ್ಲ ಕೆಲಸ ಒಮ್ಮೆಗೇ ಆರಂಭಿಸಿದರೆ, ಯೋಜನೆ ಬೇಗ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು. ಕೋನ ಹಿಪ್ಪರಗಾ- ಸರಡಗಿ ಬ್ಯಾರೇಜ್‌ಗೆ ಸೇತುವೆ ನಿರ್ಮಿಸಿ, ಆ ಗ್ರಾಮಗಳ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದೂ ಅವರು ಒತ್ತಾಯಿಸಿದರು.ಈ ಮೂರು ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ. 17ರಂದು 11 ರೈತರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ. ಸಾವಿರಾರು ರೈತರು ಈ ಸತ್ಯಾಗ್ರಹಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.

ಮುಖಂಡರಾದ ಸೈಯದ್ ಪಟೇಲ್, ಗೌತಮ ಗೋಳಾ, ಸಿದ್ದು ಇತರರು ಉಪಸ್ಥಿತರಿದ್ದರು.

Post Comments (+)