17ರಿಂದ ರೈತ- ಕೃಷಿ ಕಾರ್ಮಿಕರ ಸಮ್ಮೇಳನ

7

17ರಿಂದ ರೈತ- ಕೃಷಿ ಕಾರ್ಮಿಕರ ಸಮ್ಮೇಳನ

Published:
Updated:

ಗುಲ್ಬರ್ಗ: ರೈತ-ಕೃಷಿ ಕಾರ್ಮಿಕರ ಪ್ರಥಮ ರಾಜ್ಯ ಸಮ್ಮೇಳನವನ್ನು ಇದೇ 17 ಮತ್ತು 18ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ರೈತ-ಕೃಷಿ ಕಾರ್ಮಿಕರ ಸಂಘಟನೆ (ಆರ್.ಕೆ.ಎಸ್) ಅಧ್ಯಕ್ಷ ಡಾ. ಟಿ.ಎಸ್.ಸುನೀತ್‌ಕುಮಾರ್ ಹೇಳಿದರು.ಸೋಮವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಂದು ಚಿಕ್ಕಲಾಲ್‌ಬಾಗ್‌ದಿಂದ ಮೆರವಣಿಗೆ ನಡೆಸಲಾಗುವುದು. ಬಳಿಕ 11.30ಕ್ಕೆ ಬನ್ನಪ್ಪ ಪಾರ್ಕ್‌ನಲ್ಲಿ ಬಹಿರಂಗ ಅಧಿವೇಶನ ನಡೆಸಲಾಗುತ್ತಿದೆ. ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು, ಕೃಷಿ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಕೃಷಿ ಎಂಬುದು ದಿನದಿಂದ ದಿನಕ್ಕೆ ದುಬಾರಿ ಆಗುತ್ತಿದೆ. ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರಕುತ್ತಿಲ್ಲ. ರೈತರಿಗೆ ನೀಡಿದ ಸಬ್ಸಿಡಿಯನ್ನು ಸರ್ಕಾರ ಕಡಿತ ಮಾಡುತ್ತಿವೆ. ರೈತರ ಸ್ಥಿತಿ ಗಂಭೀರವಾಗಿದೆ.ಜಾಗತೀಕರಣ, ಉದಾರೀಕರಣದ ಹೊಡೆತಕ್ಕೆ ದೇಶದಲ್ಲಿ ಎರಡೂವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಕರ್ನಾಟಕದ ಸ್ಥಾನ ಮೂರನೆಯದ್ದಾಗಿದೆ. ಇದು ರೈತರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಮಾರಕ ನೀತಿಯ ಪ್ರತಿಫಲ ಎಂದ ಅವರು, ಎಪಿಎಂಸಿ ಕಾಯ್ದೆ, ಬೀಜ ಕಾಯ್ದೆ, ವಿಶೇಷ ಆರ್ಥಿಕ ವಲಯ (ಎಸ್‌ಇಝೆಡ್) ಸೇರಿದಂತೆ ವಿವಿಧ ಪ್ರಯತ್ನಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬದುಕನ್ನು ಸಂಕಟಕ್ಕೆ ತಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬರಗಾಲ ಬವಣೆ: ಭೀಕರ ಬರಗಾಲ ಉಂಟಾಗಿ ಮೂರು ತಿಂಗಳು ಕಳೆದಿದ್ದರೂ ಮೇವು, ಕುಡಿಯಲು ನೀರು ಸಮಸ್ಯೆ ಪರಿಹಸಿರಲು ಸಾಧ್ಯವಾಗಿಲ್ಲ. ಕೆಲಸವಿಲ್ಲದೇ ಜನತೆ ಗುಳೇ ಹೋಗುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಾಲ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಬರ ಪೀಡಿತ ಪ್ರದೇಶಗಳಲ್ಲಿ ಶೀಘ್ರ ಬರಪರಿಹಾರ ಕಾಮಗಾರಿ ಕೈಗೊಳ್ಳಬೇಕು, ಗೋಶಾಲೆ, ಮೇವು ಮತ್ತು ನೀರಿನ ವ್ಯವಸ್ಥೆ ಮಾಡಬೇಕು, ಬೆಳೆಗೆ ಯೋಗ್ಯ ಬೆಂಬಲ ಬೆಲೆ ನಿಗದಿ ಮಾಡಬೇಕು, ಬೀಜ, ರಸಗೊಬ್ಬರ, ರಾಸಾಯನಿಕಗಳನ್ನು ಸಬ್ಸಿಡಿ ದರದಲ್ಲಿಯೇ ನೀಡಬೇಕು ಕೃಷಿ ಯೋಗ್ಯ ಭೂಮಿ ಸ್ವಾಧೀನ ಕೈಬಿಡಬೇಕು ಎಂಬುದೂ ಸೇರಿದಂತೆ 15 ಬೇಡಿಕೆಗಳ ಈಡೇರಿಕೆಗೆ ಈ ರಾಜ್ಯ ಸಮ್ಮೇಳನದಲ್ಲಿ ಚರ್ಚೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಸುನೀತ್‌ಕುಮಾರ್ ಹೇಳಿದರು.ಎಸ್‌ಯುಸಿಐ ಜಿಲ್ಲಾ ಸಮಿತಿಯ ಮುಖಂಡರಾದ ವಿ.ಜಿ.ದೇಸಾಯಿ, ಗೌಸ್ ಪಟೇಲ್ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry