17ರ ನಂತರ ಬಿಜೆಪಿ ಪ್ರಚಾರ ಸಭೆ

7

17ರ ನಂತರ ಬಿಜೆಪಿ ಪ್ರಚಾರ ಸಭೆ

Published:
Updated:
17ರ ನಂತರ ಬಿಜೆಪಿ ಪ್ರಚಾರ ಸಭೆ

ಬೆಂಗಳೂರು: ಇದೇ 17ರ ಬಳಿಕ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಆಯೋಜಿಸಲು ಸೋಮವಾರ ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಇಡೀ ದಿನ ನಡೆದ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ನಿಗಮ-ಮಂಡಳಿಗಳ ಅಧ್ಯಕ್ಷರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಭಾಗವಹಿಸಿದ್ದರು. ಸಂಜೆ ನಡೆದ ಸಭೆಯಲ್ಲಿ ಶಾಸಕರು ಮತ್ತು ಸಂಸದರು ಹಾಜರಿದ್ದರು.ರಾಜ್ಯ ವಿಧಾನಸಭೆಗೆ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ. ಬಜೆಟ್ ಮಂಡಿಸಿದ ಬಳಿಕ ನೇರವಾಗಿ ಜನರ ಬಳಿಗೆ ತೆರಳಲು ಬಿಜೆಪಿ ನಿರ್ಧರಿಸಿದೆ. ಜನಪ್ರಿಯ ಬಜೆಟ್ ಮಂಡಿಸಿ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.`ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಬಿಜೆಪಿ ತೊರೆದಿರುವುದರಿಂದ ಪಕ್ಷದ ನೈತಿಕ ಬಲ ಹೆಚ್ಚಿದೆ. ಅವಕಾಶವಾದಿಗಳು ಮತ್ತು ಕಳಂಕಿತರು ಪಕ್ಷ ಬಿಟ್ಟಿರುವುದರಿಂದ ಪಕ್ಷಕ್ಕೆ ಒಳಿತೇ ಆಗಿದೆ' ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.`ಕೆಲವರು ಪಕ್ಷವನ್ನು ಬಿಟ್ಟು ಹೋಗಿರುವುದರಿಂದ ಕಾರ್ಯಕರ್ತರಲ್ಲಿ ಇದ್ದ ಗೊಂದಲ ನಿವಾರಣೆ ಆಗಿದೆ. ಅವಕಾಶವಾದಿಗಳನ್ನು ಮೊದಲೇ ಗುರುತಿಸಿ, ಕ್ರಮ ತೆಗೆದುಕೊಂಡಿದ್ದರೆ ಪಕ್ಷ ಇನ್ನೂ ಹೆಚ್ಚು ಸದೃಢವಾಗಿ ಇರುತ್ತಿತ್ತು' ಎಂದರು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, `ಎಲ್ಲ 224 ಕ್ಷೇತ್ರಗಳಿಗೂ ಬಿಜೆಪಿಗೆ ಒಳ್ಳೆಯ ಅಭ್ಯರ್ಥಿಗಳು ಸಿಗುವ ವಿಶ್ವಾಸ ಇದೆ. 130 ಕಡೆ ಗೆಲ್ಲುವ ಪೂರ್ಣ ವಿಶ್ವಾಸ ಇದೆ' ಎಂದು ಹೇಳಿದರು.ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಜೆಪಿ ಸೇರಿದವರ ಕ್ಷೇತ್ರಗಳ ಬಗ್ಗೆ ಬೆಳಿಗ್ಗೆ ನಡೆದ ಪಕ್ಷದ ವಿಶೇಷ ಸಭೆಯಲ್ಲಿ ಮಾಹಿತಿ ಸಂಗ್ರಹಿಸಿದರು. ಅಲ್ಲಿ ಪರ್ಯಾಯವಾಗಿ ಯಾರನ್ನು ಕಣಕ್ಕೆ ಇಳಿಸಿದರೆ ಗೆಲುವು ಸಾಧಿಸಬಹುದು ಎಂಬುದರ ಬಗ್ಗೆಯೂ ಚರ್ಚಿಸಲಾಗಿದೆ.ಸಂಜೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಉಪ ಮುಖ್ಯಮಂತ್ರಿ ಆರ್.ಅಶೋಕ ಹಾಗೂ ಸಚಿವರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry