17 ರಂದು ತುಲಾ ಸಂಕ್ರಮಣ: ಸಿದ್ಧತೆಗೆ ಡಿಸಿ ಸೂಚನೆ

7

17 ರಂದು ತುಲಾ ಸಂಕ್ರಮಣ: ಸಿದ್ಧತೆಗೆ ಡಿಸಿ ಸೂಚನೆ

Published:
Updated:

 ಮಡಿಕೇರಿ: ತಲಕಾವೇರಿಯಲ್ಲಿ ಅ.17 ರಂದು ಮುಂಜಾನೆ ಜರುಗುವ  ತುಲಾ ಸಂಕ್ರಮಣ ತೀರ್ಥೋದ್ಭವ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ಪೂರ್ವಭಾವಿ ಸಿದ್ಧತೆಗಳನ್ನು  ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಸೂಚಿಸಿದ್ದಾರೆ.ನಗರದ ಕೋಟೆ ವಿಧಾನ ಸಭಾಂಗಣದಲ್ಲಿ ಬುಧವಾರ ನಡೆದ ತಲಕಾವೇರಿ ತೀರ್ಥೋದ್ಭವ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಪ್ರತಿ ವರ್ಷದಂತೆ ಈ ವರ್ಷವು ಸಹ ಭಕ್ತಾಧಿಗಳಿಗೆ ಶುದ್ದ ಕುಡಿಯುವ ನೀರು, ಬಸ್ ಸೌಲಭ್ಯ, ತಾತ್ಕಾಲಿಕ ಶೌಚಾಲಯ, ತುರ್ತು ಚಿಕಿತ್ಸಾ ವ್ಯವಸ್ಥೆ, ಬೆಳಕು, ಸ್ವಚ್ಚತೆ ಮತ್ತಿತರ ಮೂಲ ಸೌಲಭ್ಯ ಕಲ್ಪಿಸಲು ಕ್ರಮವಹಿಸಬೇಕೆಂದರು.ತುಲಾ ಸಂಕ್ರಮಣ ಜಾತ್ರೆ ಸಂದರ್ಭದ ವಿದ್ಯುತ್ ವ್ಯತ್ಯಯವಾಗದಂತೆ ಸೆಸ್ಕ್ ಕಾರ್ಯಪಾಲಕ ಅಭಿಯಂತರರು ಕ್ರಮವಹಿಸಬೇಕು. ಭಕ್ತಾಧಿಗಳಿಗೆ ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ವ್ಯವಸ್ಥೆಮಾಡುವಂತೆ ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕರಿಗೆ ಸೂಚನೆ ಮಾಡಿದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಗೇರಿ ಅವರು ಮಾತನಾಡಿ, ಪ್ರತಿ ವರ್ಷದಂತೆಯೇ ಈ ವರ್ಷವೂ ಸೂಕ್ತ ಬಂದೋಬಸ್ತ್ ಮಾಡಲಾಗುವುದು ಎಂದು ತಿಳಿಸಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ತಲಾಕಾವೇರಿಯಲ್ಲಿ 3-4 ಕಡೆ ಅನ್ನಸಂತರ್ಪಣೆ ಮಾಡುವುದರಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.ಅರ್ಚಕ ನಾರಾಯಣಾಚಾರ ಅವರು ಮಾತನಾಡಿ, ಮಡಿಕೇರಿ-ತಲಾಕಾವೇರಿ ರಸ್ತೆ ತುಂಬಾ ಹದಗೆಟ್ಟಿದ್ದು ಜಾತ್ರೆಯೊಳಗೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಲಹೆ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ರಾಜಾರಾವ್, ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಲಕ್ಷ್ಮೇಗೌಡ ಅವರು ಮಾತನಾಡಿದರು.ಮತ್ತೋಬ್ಬ ಸದಸ್ಯರಾದ ಕೋಡಿ ಚಂದ್ರಶೇಖರ್, ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಅವರು ನಾನಾ ಸಲಹೆ ನೀಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಕುಮಾರ್, ಲೋಕಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಗಜಾನನ ಪ್ರಸಾದ್, ಸೆಸ್ಕ್ ಕಾರ್ಯಪಾಲಕ ಅಭಿಯಂತರ ಸೋಮರಾಜು ಹಾಗೂ  ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry