17 ಸಾವಿರ ಪೌರ ಕಾರ್ಮಿಕರ ಸೇವೆ ಕಾಯಂ: ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ

7

17 ಸಾವಿರ ಪೌರ ಕಾರ್ಮಿಕರ ಸೇವೆ ಕಾಯಂ: ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ

Published:
Updated:

ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 17 ಸಾವಿರ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವಂತೆ ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ರಾಜ್ಯದ ವಿವಿಧ ನಗರಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವಂತೆ ಕೋರಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರ ಮಹಾ ಸಂಘ 2006ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಈವರೆಗೂ ಸರ್ಕಾರ ಆಕ್ಷೇಪಣಾ ಹೇಳಿಕೆ ಸಲ್ಲಿಸಿಲ್ಲ.

ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿತು. ಸರ್ಕಾರ ಈವರೆಗೂ ಆಕ್ಷೇಪಣಾ ಹೇಳಿಕೆ ಸಲ್ಲಿಸದ ವಿಷಯ ತಿಳಿದ ನ್ಯಾಯಪೀಠ ತೀವ್ರ ಅಸಮಾಧಾನ ಹೊರಹಾಕಿತು.

‘ಸರ್ಕಾರ ನಾಲ್ಕು ವಾರಗಳ ಒಳಗೆ ಆಕ್ಷೇಪಣಾ ಹೇಳಿಕೆ ಸಲ್ಲಿಸಬೇಕು. ತಪ್ಪಿದರೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರ ಖುದ್ದು ಹಾಜರಿಗೆ ಆದೇಶಿಸಲಾಗುವುದು ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು’ ಎಂದು ನ್ಯಾ.ಕೇಹರ್ ಎಚ್ಚರಿಕೆ ನೀಡಿದರು.

ಮತ್ತೊಂದು ಪ್ರಕರಣ: ದೇವನಹಳ್ಳಿ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಎಂ.ಎಸ್.ರಾಮಯ್ಯ ಕುಟುಂಬ ಸರ್ಕಾರಿ ಭೂಮಿ ಒತ್ತುವರಿ ಮಾಡಿದೆ ಎಂದು ದೂರಿ ಸ್ಥಳೀಯರು 2005ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲೂ ಈವರೆಗೆ ಸರ್ಕಾರ ಆಕ್ಷೇಪಣಾ ಹೇಳಿಕೆ ಸಲ್ಲಿಸಿಲ್ಲ. ಈ ಬಗ್ಗೆಯೂ ಹೈಕೋರ್ಟ್ ಗರಂ ಆಗಿದೆ.

ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠದಲ್ಲಿ ಶುಕ್ರವಾರ ಪ್ರಕರಣದ ವಿಚಾರಣೆ ನಡೆಯಿತು. ಪ್ರಕರಣಕ್ಕೆ ಸಂಬಂಧಿಸಿಂತೆ ನಾಲ್ಕು ವಾರಗಳಲ್ಲಿ ಆಕ್ಷೇಪಣಾ ಹೇಳಿಕೆ ಸಲ್ಲಿಸದಿದ್ದರೆ ಕಂದಾಯ ಆಯುಕ್ತರ ಖುದ್ದು ಹಾಜರಿಗೆ ಆದೇಶಿಸಲಾಗುವುದು ಮತ್ತು ರೂ 50 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry