175 ಶಿಕ್ಷಕರ ಕೊರತೆ; 19 ಏಕೋಪಾಧ್ಯಾಯ ಶಾಲೆ!

ಸೋಮವಾರ, ಜೂಲೈ 22, 2019
27 °C
ಹರಪನಹಳ್ಳಿ ತಾಲ್ಲೂಕಿನ ಮೂರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ

175 ಶಿಕ್ಷಕರ ಕೊರತೆ; 19 ಏಕೋಪಾಧ್ಯಾಯ ಶಾಲೆ!

Published:
Updated:

ಹರಪನಹಳ್ಳಿ: ತಾಲ್ಲೂಕಿನ ವಿವಿಧ ಕಡೆ ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 175 ಶಿಕ್ಷಕರ ಹುದ್ದೆಗಳ ಖಾಲಿ ಉಳಿದಿದ್ದು, ಈ  ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ.2011-12ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ, ಕ್ಲಸ್ಟರ್ ನಿಯೋಜನೆ, ಅಕಾಲಿಕ ನಿಧನ, ಸ್ವಯಂನಿವೃತ್ತಿ ಸೇರಿದಂತೆ 19 ಶಾಲೆಗಳು ಶಿಕ್ಷಕರ ಕೊರತೆ ಎದುರಿಸಿ ಏಕೋಪಾಧ್ಯಾಯ ಶಾಲೆಗಳಾಗಿ ಪರಿವರ್ತನೆಗೊಂಡಿವೆ. ಈ ಪೈಕಿ, ಮೂರು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ! ಅನ್ಯ ಶಾಲೆಯ ಶಿಕ್ಷಕರನ್ನು ನಿಯೋಜನೆ ಮೂಲಕ ಇಲ್ಲಿಗೆ ಕಳುಹಿಸಲಾಗುತ್ತಿದೆ ಎಂಬ ಆಘಾತಕಾರಿ ಅಂಶವನ್ನು ಶಿಕ್ಷಣ ಇಲಾಖೆಯ ಮೂಲಗಳೇ ಖಚಿತಪಡಿಸಿವೆ.ಡಾ.ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊಂದಿರುವ ಈ ತಾಲ್ಲೂಕಿನಲ್ಲಿ 132 ಕಿರಿಯ ಹಾಗೂ 136 ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 268 ಪ್ರಾಥಮಿಕ ಶಾಲೆಗಳು ಇವೆ. ಈ ಪೈಕಿ, 10 ಪದವೀಧರೇತರ ಮುಖ್ಯ ಶಿಕ್ಷಕರ ಹುದ್ದೆ, 16 ಮುಖ್ಯ ಶಿಕ್ಷಕರ ಹುದ್ದೆ, 132 ಸಹ ಶಿಕ್ಷಕರ ಹುದ್ದೆ ಖಾಲಿ ಉಳಿದಿವೆ.ನಾಲ್ವರು ಶಿಕ್ಷಕರು ಉನ್ನತ ಶಿಕ್ಷಣದ ವ್ಯಾಸಂಗದ ಮೇಲೆ ರಜೆಯಲ್ಲಿದ್ದಾರೆ. ಉರ್ದು ಪ್ರಾಥಮಿಕ ಶಾಲೆಯ 7 ಹುದ್ದೆಗಳು , ದೈಹಿಕ ಶಿಕ್ಷಣ ಶಿಕ್ಷಕರ 6 ಹುದ್ದೆಗಳೂ ಖಾಲಿ ಇವೆ. ಒಟ್ಟಾರೆ 175 ಮಂದಿ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ.ಹಾರಕನಾಳು ಸಣ್ಣ ತಾಂಡ, ಭೀಮ್ಲಾತಾಂಡ ಹಾಗೂ ಗಿರಿಯಾಪುರ ತಾಂಡಗಳ ಬುಡಕಟ್ಟು ಸಮುದಾಯದ ಮಕ್ಕಳು ಕಲಿಯುತ್ತಿರುವ ಪ್ರಾಥಮಿಕ ಶಾಲೆಗಳಲ್ಲಿ ಎರಡು ವರ್ಷಗಳಿಂದಲೂ ಒಬ್ಬರೂ ಕಾಯಂ ಶಿಕ್ಷಕರೇ ಇಲ್ಲ. ಇನ್ನೂ ವಿಚಿತ್ರ ಸಂಗತಿ ಎಂದರೆ, ಭೀಮ್ಲಾ ತಾಂಡ ಗ್ರಾಮ ಎಂಬ ಪುಟ್ಟ ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಶಿಕ್ಷಣ ಕಳೆದ ಶೈಕ್ಷಣಿಕ ಸಾಲಿನಲ್ಲಿ `ಅತಿಥಿ ಶಿಕ್ಷಕರ' ಉಸ್ತುವಾರಿಕೆ ನಡೆಯಿತು ಎಂಬುದು ಇಲಾಖೆಯ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ವ್ಯಥೆಪಡುತ್ತಾರೆ ತೆಲಿಗಿ ಮಂಜುನಾಥ.ಏಕೋಪಾಧ್ಯಾಯ ಶಾಲೆ: ಇಲಾಖೆ ಮೂಲಗಳ ಪ್ರಕಾರ ಹನುಮಗೊಂಡನಹಳ್ಳಿ, ವಡೇರಹಳ್ಳಿ, ಕೊರಚರಹಟ್ಟಿ, ಕಣವಿ, ಐ. ಬೇವಿನಹಳ್ಳಿ, ಗುರುಶಾಂತನಹಳ್ಳಿ, ಅಡವಿ ಮಲ್ಲಾಪುರ, ನರೆಬೊಮ್ಮನಹಳ್ಳಿ, ಗುಳೇದಹಟ್ಟಿ ತಾಂಡಾ, ಯರಬಾಳು, ಈಶಾಪುರ, ನೆಲಗೊಂಡನಹಳ್ಳಿ, ದ್ಯಾಪನಾಯಕನಹಳ್ಳಿ, ಯರಬಳ್ಳಿ ತಾಂಡ, ನಿಟ್ಟೂರು ಬಸಾಪುರ ಹಾಗೂ ಪಟ್ಟಣದ ಮಹಾತ್ಮ ಗಾಂಧಿ ಆಶ್ರಯ ಕಾಲೊನಿಯ ಪ್ರಾಥಮಿಕ ಶಾಲೆಗಳಲ್ಲಿ ವರ್ಗಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ಶಿಕ್ಷಕರ ಹುದ್ದೆಗಳು ತೆರವಾಗಿವೆ. ಈ ಹಿನ್ನೆಲೆಯಲ್ಲಿ ಅವು ಏಕೋಪಾಧ್ಯಾಯ ಶಾಲೆಗಳಾಗಿ ಮಾರ್ಪಾಡಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry