ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ಕ್ಕೆ ಜೆಡಿಎಸ್ ಸಮಾವೇಶ

Last Updated 14 ಜನವರಿ 2011, 6:55 IST
ಅಕ್ಷರ ಗಾತ್ರ

ತುಮಕೂರು:  ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳನ್ನು ಅಭಿನಂದಿಸಲು ಜೆಡಿಎಸ್ ಜ. 17ರಂದು ಸಮಾವೇಶ ಏರ್ಪಡಿಸಿದೆ.ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಿರುವುದನ್ನು ಮತದಾರರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾರರಿಗೂ ಕೃತಜ್ಞತೆ ಸಲ್ಲಿಸುವ ಜತೆಗೆ ಪಕ್ಷದ ವಿಜೇತ ಮತ್ತು ಪರಾಜಿತ ಅಭ್ಯರ್ಥಿಗಳನ್ನು ಅಭಿನಂದಿಸಲಾಗುತ್ತಿದೆ. ಸಮಾವೇಶದಲ್ಲಿ ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ನಿಂಗಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ಯಾರ ಹೆಸರನ್ನು ಅಂತಿಮಗೊಳಿಸಿಲ್ಲ. ಅಧ್ಯಕ್ಷ ಆಕಾಂಕ್ಷಿಗಳ ಪಟ್ಟಿಯಲ್ಲಿ ಬಹಳಷ್ಟು ಹೆಸರುಗಳಿವೆ. ವಿದ್ಯಾವಂತರು, ಪ್ರಾಮಾಣಿಕವಾಗಿ ಕೆಲಸ ಮಾಡಲು ಬಯಸುವಂತಹವರನ್ನು ಗುರುತಿಸಲಾಗುವುದು. ಒಂದೆರಡು ದಿನಗಳಲ್ಲಿ ಮುಖಂಡರು ಸಭೆ ಸೇರಿ ಚರ್ಚಿಸಲಿದ್ದೇವೆ. ಪಕ್ಷದ ವರಿಷ್ಠರು ಸೂಚಿಸುವ ವ್ಯಕ್ತಿಯನ್ನು ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ನಲ್ಲಿ ಯಾವುದೇ ಬಣಗಳಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಮಾಜಿ ಸಚಿವ ಚೆನ್ನಿಗಪ್ಪ ಮತ್ತು ನಮ್ಮ ನಡುವೆ ಉತ್ತಮ ಸಂಬಂಧವಿದೆ. ಅಧ್ಯಕ್ಷ ಸ್ಥಾನ ಬದಲಾವಣೆಯ ಪ್ರಶ್ನೆಯೇ ಉದ್ಭವಿಸಿಲ್ಲ. ಸಾಮೂಹಿಕ ನಾಯಕತ್ವ, ಪರಿಶ್ರಮದಿಂದ ಈ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ಲಭಿಸಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹೆಬ್ಬೂರಿನಲ್ಲಿಯೂ ಗೆಲುವು ದಕ್ಕಿದರೂ ಅದು ಸಮಾಧಾನ ನೀಡಿಲ್ಲ. ಅದು ಹೇಳಿಕೊಳ್ಳುವಂತಹ ಗೆಲುವು ಅಲ್ಲ. ಹೆಬ್ಬೂರು- ಗೂಳೂರು ಏತ ನೀರಾವರಿಗೆ ಹೋರಾಟ ಆರಂಭಿಸಿದ್ದು ನಾವು. ಆದರೆ, ಅದರ ಪ್ರತಿಫಲ ಬಿಜೆಪಿಯ ಖಾತೆಗೆ ಜಮಾ ಆಯಿತು. ಇದು ಕೂಡ ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷದ ಹಿನ್ನಡೆಗೆ ಕಾರಣ ಎಂದು ನಿಂಗಪ್ಪ ವಿಶ್ಲೇಷಿಸಿದರು.

ಮಾಜಿ ಶಾಸಕ ಕೆ.ಷಡಕ್ಷರಿ ಜೆಡಿಎಸ್ ಸೇರುತ್ತಾರೆ ಎನ್ನುವುದು ಊಹಾಪೋಹ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದರೆ ಪಕ್ಷ ಸೇರಲು ಯಾರೇ ಬಂದರೂ ಮುಕ್ತಮನಸ್ಸಿನಿಂದ ಸ್ವಾಗತಿಸುವುದಾಗಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಸದಸ್ಯ ವೈ.ಎಚ್.ಹುಚ್ಚಯ್ಯ, ತಾ.ಪಂ.ಸದಸ್ಯ ಮಂಜುನಾಥ್, ಮುಖಂಡರಾದ ವಿಜಯಕುಮಾರ್, ವೆಂಕಟೇಶ್, ಸುಲ್ತಾನ್ ಮಹಮದ್, ವಕ್ತಾರ ಮಲ್ಲಿಕಾರ್ಜುನಯ್ಯ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT