18ಕ್ಕೆ ವಿಚಾರಣೆ ಮುಂದೂಡಿಕೆ: ಬಿಎಸ್ವೈ ಜಾಮೀನಿಗೆ ಸಿಬಿಐ ಆಕ್ಷೇಪ
ಬೆಂಗಳೂರು: ಜಿಂದಾಲ್ ಸಮೂಹದಿಂದ ಸಂಶಯಾಸ್ಪದ ರೀತಿಯಲ್ಲಿ ಹಣ ಪಡೆದ ಆರೋಪ ಹೊತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕೋರ್ಟ್ನಿಂದ ಶುಕ್ರವಾರವೂ ಜಾಮೀನು ಸಿಗಲಿಲ್ಲ.
ಜಾಮೀನು ಅರ್ಜಿ ವಜಾಗೊಳಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಯಡಿಯೂರಪ್ಪ ಸೇರಿದಂತೆ ಇನ್ನಿತರ ಆರೋಪಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಸೋಮವಾರಕ್ಕೆ (ಜೂನ್ 18) ಮುಂದೂಡಿದರು.
ಶುಕ್ರವಾರ ಸುಮಾರು ಎರಡೂವರೆ ಗಂಟೆಗಳ ಕಾಲ ವಾದ, ಪ್ರತಿವಾದಗಳನ್ನು ನ್ಯಾಯಮೂರ್ತಿಗಳು ಆಲಿಸಿದರು.
ಸಿಬಿಐ ಆಕ್ಷೇಪಣೆ: ಯಡಿಯೂರಪ್ಪನವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡದಂತೆ ನ್ಯಾಯಾಲಯವನ್ನು ಸಿಬಿಐ ಕೋರಿದೆ.
`ಯಡಿಯೂರಪ್ಪ ರಾಜಕೀಯ ಪ್ರಭಾವಿಗಳು. ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಇವರ ಕೈಕೆಳಗೆ ಕೆಲಸ ಮಾಡಿರುವ ಕೆಲವು ಅಧಿಕಾರಿಗಳೇ ಈ ಪ್ರಕರಣದ ಪ್ರಮುಖ ಸಾಕ್ಷಿಗಳೂ ಹೌದು. ಆದುದರಿಂದ ತನಿಖೆ ವೇಳೆ ಆ ಸಾಕ್ಷಿಗಳ ಮೇಲೆ ಇವರು ಪ್ರಭಾವ ಬೀರುವ ಸಾಧ್ಯತೆ ಇದೆ.
`ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ 409ನೇ ಕಲಮಿನ ಅಡಿ ದೂರು ದಾಖಲು ಮಾಡಲಾಗಿದೆ. ಇದು ಜೀವಾವಧಿ ಶಿಕ್ಷೆಗೂ ಗುರಿಪಡಿಸಬಹುದಾದ ಆರೋಪ. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯನ್ನು ವಜಾ ಮಾಡಬೇಕು~ ಎಂದು ಸಿಬಿಐ ಕೋರಿದೆ.
ಮಧ್ಯಂತರ ಜಾಮೀನು: ವಿಚಾರಣೆ ಮುಗಿಯುವವರೆಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಯಡಿಯೂರಪ್ಪ ಮಧ್ಯಂತರ ಮನವಿ (ಐ.ಎ) ಸಲ್ಲಿಸಿದ್ದಾರೆ.
ಇದಕ್ಕೂ ಲಿಖಿತ ಆಕ್ಷೇಪಣೆ ಸಲ್ಲಿಸಿರುವ ಸಿಬಿಐ, ಈ ರೀತಿಯ ಜಾಮೀನಿಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಅಡಿ ಅವಕಾಶ ಇಲ್ಲ. ಆದುದರಿಂದ ಮಧ್ಯಂತರ ಜಾಮೀನು ನೀಡಬಾರದು ಎಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.