18ದೇವತೆಗಳು 1 ಸಿನಿಮಾ

7

18ದೇವತೆಗಳು 1 ಸಿನಿಮಾ

Published:
Updated:
18ದೇವತೆಗಳು 1 ಸಿನಿಮಾ

ಇದು ಒಂದು ದೇವರ ಸಿನಿಕಥನವಲ್ಲ. ಬರೋಬ್ಬರಿ ಹದಿನೆಂಟು ಶಕ್ತಿ ದೇವತೆಗಳು ತೆರೆಯ ಮೇಲೆ ಅವತರಿಸಲಿದ್ದಾರೆ. ಸವದತ್ತಿ ಎಲ್ಲಮ್ಮನಿಂದ ಹಿಡಿದು, ಮೈಸೂರು ಚಾಮುಂಡೇಶ್ವರಿವರೆಗೆ ರಾಜ್ಯದ  ಎಲ್ಲಾ ಪ್ರಮುಖ ದೇವತೆಗಳಿಗೂ ಚಿತ್ರದಲ್ಲಿ ಸ್ಥಾನವಿದೆ. ಅಂದಹಾಗೆ `ಆದಿಪರಾಶಕ್ತಿ' ಎಂಬುದು ಚಿತ್ರದ ಹೆಸರು. ಸಾಮಾಜಿಕ, ಪ್ರಯೋಗಾತ್ಮಕ ಚಿತ್ರಗಳಲ್ಲಿ ಹೆಸರು ಮಾಡಿರುವ ವೇಮಗಲ್ ಜಗನ್ನಾಥರಾವ್ ಚಿತ್ರದ ನಿರ್ದೇಶಕರು. ವೈವಿಧ್ಯಮಯ ಚಿತ್ರಗಳನ್ನು ಅರಸಿ ಹೊರಟ ಅವರು ಈ ಬಾರಿ ಆಯ್ಕೆಮಾಡಿಕೊಂಡಿರುವುದು ಭಕ್ತಿ ಪ್ರಧಾನ ಕತೆಯನ್ನು. ಒಂದು ಕೋಮಿನ ದೇವತೆಯ ಬದಲು ಎಲ್ಲಾ ದೇವಿಯರ ಸಂಕ್ಷಿಪ್ತ ಪರಿಚಯ ಮಾಡಿಸಲು ಅವರು ಹೊರಟಿದ್ದಾರೆ. ಒಂದು ಹಾಡಿನಲ್ಲಿ ಇಬ್ಬರು ದೇವತೆಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಅಲ್ಲಿಗೆ ಕನಿಷ್ಠ ಎಂದರೂ ಒಂಬತ್ತು ಹಾಡುಗಳು, ಭಕ್ತಿಸುಧೆಯ ಜತೆಗೆ ಗಾನ ಸುಧೆಯೂ ಇದೆಯೆಂದಾಯಿತು.ಚಿತ್ರದಲ್ಲಿ ಸಾಮಾಜಿಕ ಅಂಶಗಳೂ ಇವೆಯಂತೆ. ನಾಸ್ತಿಕ ಪತಿ, ಭಕ್ತೆ ಹೆಂಡತಿಯ ನಡುವೆ ನಡೆಯುವ ಸಂಘರ್ಷ ಚಿತ್ರದ ಮತ್ತೊಂದು ಘಟ್ಟದಲ್ಲಿದೆ. ನಾಸ್ತಿಕತೆ ಸೋತು ದೈವಿಶಕ್ತಿ ಗೆಲ್ಲುತ್ತದೆ ಎಂಬುದು ಚಿತ್ರದ ಸರ್ವ ಸಾರಾಂಶ. ನಟ ಜೈಜಗದೀಶ್ ನಾಸ್ತಿಕನಾಗಿ ಕಾಣಿಸಿಕೊಂಡರೆ ಅವರ ಪತ್ನಿಯಾಗಿ ವಿನಯಾಪ್ರಸಾದ್ ತೆರೆಯ ಮೇಲೆ ಮೂಡುತ್ತಿದ್ದಾರೆ. ದಶಕಗಳ ಹಿಂದೆ ತೆರೆಕಂಡಿದ್ದ `ಭೂಮಿಗೆ ಬಂದ ಭಗವಂತ' ಚಿತ್ರದಲ್ಲಿ ಕೂಡ ಜೈ ಅವರಿಗೆ ನಾಸ್ತಿಕನ ಪಾತ್ರವಿತ್ತು.

ಅಲ್ಲಿನ ಹಿಂಸೆ ಇಲ್ಲಿಲ್ಲವಂತೆ. ಹಿರಿಯ ನಟ ಉಮೇಶ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅಂದಹಾಗೆ `ಆದಿಪರಾಶಕ್ತಿ' ಯಾರು? ಹದಿನೆಂಟು ದೇವತೆಯರ ಪಾತ್ರಗಳನ್ನು ಯಾರ‌್ಯಾರು ನಿರ್ವಹಿಸಲಿದ್ದಾರೆ ಎಂಬುದು ಇನ್ನೂ ಇತ್ಯರ್ಥವಾಗಿಲ್ಲ.

ಇಡೀ ಹದಿನೆಂಟು ಶ್ರೀಕ್ಷೇತ್ರಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಮುಂದಾಗಿದೆ. ಒಟ್ಟು ಮೂವತ್ತು ದಿನಗಳ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸಬೇಕು ಎಂಬುದು ನಿರ್ದೇಶಕರ ಆಸೆ. ಫೆಬ್ರುವರಿ ಅಥವಾ ಮಾರ್ಚ್ ವೇಳೆಗೆ ಚಿತ್ರ ತೆರೆಗೆ ಬರಲಿದೆಯಂತೆ. ಕತೆ ಛಲಪತಿ ಅವರದ್ದು. ಶ್ರೀಚಂದ್ರು ಬರೆದಿರುವ ಹಾಡುಗಳಿಗೆ ಆರ್. ದಾಮೋದರ್ ಹಾಗೂ ಸುಜಾತದತ್ ಸಂಗೀತ ನೀಡುತ್ತಿದ್ದಾರೆ.ಪೌರಾಣಿಕ ಚಿತ್ರಗಳಿಗೆ ಇದು ಸಕಾಲವೇ ಎಂಬ ಪ್ರಶ್ನೆಗೆ ನಿರ್ದೇಶಕರದು ಬೇರೆಯದೇ ಉತ್ತರ. ಎಲ್ಲಾ ಹದಿನೆಂಟು ಕ್ಷೇತ್ರಗಳನ್ನು ತೋರಿಸುವುದರಿಂದ ಆ ಭಾಗದ ಜನರೆಲ್ಲಾ ಚಿತ್ರದ ಪ್ರೇಕ್ಷಕರಾಗುತ್ತಾರೆ ಎಂಬ ನಂಬಿಕೆ ಅವರದು. ಹಾಗೆಂದೇ ಆಯಾ ಭಾಗಕ್ಕೆ ತಕ್ಕಂತೆ ಚಿತ್ರದ ಪೋಸ್ಟರ್‌ಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ.

ಬೇರೊಂದು ಚಿತ್ರವನ್ನು ಮನಸ್ಸಿಗೆ ತಂದುಕೊಂಡಿದ್ದ ನಿರ್ಮಾಪಕ ಕೆ.ಎಸ್. ಮಹೀಂದರ್ ದೇವರ ಆಶೀರ್ವಾದದಿಂದ ಈ ಚಿತ್ರದತ್ತ ಚಿತ್ತ ಹರಿಸಿದ್ದಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry