18ನೇ ಬಾರಿಗೆ ದಾಖಲೆಯ ಮುಂದೂಡಿಕೆ

7

18ನೇ ಬಾರಿಗೆ ದಾಖಲೆಯ ಮುಂದೂಡಿಕೆ

Published:
Updated:

ರಾಮನಗರ: ಜಿಲ್ಲಾ ಪಂಚಾಯಿತಿ ಭವನದಲ್ಲಿ ಮಂಗಳವಾರ ನಡೆಯಬೇಕಿದ್ದ ಜಿ.ಪಂ ಸಾಮಾನ್ಯ ಸಭೆಯು ಕೋರಂ ಕೊರತೆಯಿಂದ ರದ್ದಾಗಿ, ಇದೇ 18ಕ್ಕೆ ಮುಂದೂಡಲ್ಪಟ್ಟಿತು.ಜಿ.ಪಂ ಅಧ್ಯಕ್ಷ ಕೆ.ಮುದ್ದುರಾಜ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಾಮಾನ್ಯ ಸಭೆ ನಿಗದಿಯಾಗಿತ್ತು. ಆದರೆ ಮಧ್ಯಾಹ್ನ 12.20 ಗಂಟೆಯಾದರೂ ಸಭೆ ನಡೆಸಲು ಅಗತ್ಯವಿರುವಷ್ಟು ಸದಸ್ಯರು ಹಾಜರಾಗಲಿಲ್ಲ.ಸಾಮಾನ್ಯ ಸಭೆಗೆ ಜೆಡಿಎಸ್‌ನ ಎಲ್ಲ ಸದಸ್ಯರೂ ಹಾಜರಾಗಿದ್ದರು. ಆದರೆ ಕಾಂಗ್ರೆಸ್ ಸದಸ್ಯರು ಹಾಜರಾಗಲಿಲ್ಲ. ಒಟ್ಟು 22 ಸದಸ್ಯರಿರುವ ಜಿ.ಪಂನಲ್ಲಿ ಸಾಮಾನ್ಯ ಸಭೆ ನಡೆಸಲು 18 ಮಂದಿ ಸದಸ್ಯರ ಅಗತ್ಯವಿದೆ. ಆದರೆ ಜಿ.ಪಂ ಅಧ್ಯಕ್ಷ, ಉಪಾಧ್ಯಕ್ಷರೂ ಸೇರಿದಂತೆ ಜೆಡಿಎಸ್‌ನ 12 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರೂ ಸೇರಿದಂತೆ 15 ಜನ ಸಭೆಯಲ್ಲಿ ಹಾಜರಿದ್ದರು. ಆದರೆ ಕಾಂಗ್ರೆಸ್ ಸದಸ್ಯರು ಗೈರಾಗಿದ್ದರಿಂದ ಕೋರಂ ಕೊರತೆ ಉಂಟಾಗಿ ಸಭೆ ನಡೆಯಲಿಲ್ಲ.ಸಭೆಯನ್ನು ಇದೇ 18 ರಂದು ನಡೆಸಲಾಗುವುದು ಎಂದು ಘೋಷಿಸಿದ ಜಿ.ಪಂ ಅಧ್ಯಕ್ಷ ಮುದ್ದುರಾಜ್ ಯಾದವ್ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿ, `ಜಿ.ಪಂನ ಕೆಲ ಜನಪ್ರತಿನಿಧಿಗಳು ಉದ್ದೇಶಪೂರ್ವಕವಾಗಿ ಸಭೆಗೆ ಹಾಜರಾಗಿಲ್ಲ. ಜಿಲ್ಲೆಯ ಅಭಿವೃದ್ಧಿ ಅವರಿಗೆ ಬೇಡವಾಗಿದೆ. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆಂದು ದಿನಪೂರ್ತಿ ಇಲ್ಲಿಯೇ ಕಳೆಯುವಂತಾಗಿದೆ. ಅವರ ಅಮೂಲ್ಯ ಸಮಯ ವ್ಯಯವಾಗಿದೆ' ಎಂದು ದೂರಿದರು.`ಜಿ.ಪಂ ಆಡಳಿತದಲ್ಲಿ, ಅಭಿವೃದ್ಧಿ ವಿಷಯದಲ್ಲಿ ಲೋಪ, ಬರ ನಿರ್ವಹಣೆಯಲ್ಲಿ ಲೋಪ ಇದ್ದರೆ ಅದನ್ನು ಸಭೆಯಲ್ಲಿ ಕುಳಿತು ಚರ್ಚಿಸಬಹುದಿತ್ತು. ನಮ್ಮಲ್ಲಿ ದೌರ್ಬಲ್ಯಗಳಿದ್ದರೆ ಅದನ್ನು ಸಭೆಯಲ್ಲಿ ತಿಳಿಸಿ ತಿದ್ದಬಹುದಿತ್ತು. ಆದರೆ ಅವರು ಹಾಗೆ ಮಾಡದೆ, ವಿರೋಧ ಪಕ್ಷದ ಸದಸ್ಯರು ಸಭೆಗೆ ಹಾಜರಾಗದಿರುವುದು ಸರಿಯಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.`ಮಂಗಳವಾರ ನಡೆಯಬೇಕಿದ್ದ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ, ಬರ, ಕುಡಿಯುವ ನೀರಿನ ವಿಷಯವನ್ನು ಚರ್ಚಿಸಲಾಗುತ್ತಿತ್ತು. ಆದರೆ ಈ ಬಗ್ಗೆ ಕಾಂಗ್ರೆಸ್ ಸದಸ್ಯರಿಗೆ ಆಸಕ್ತಿ ಇಲ್ಲದ ಕಾರಣ ಅವರ‌್ಯಾರು ಸಭೆಗೆ ಬಂದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಸಭೆಯಲ್ಲೂ ಕಾಂಗ್ರೆಸ್ ಸದಸ್ಯರು ಇದೇ ವರ್ತನೆ ಮುಂದುವರೆಸಬಹುದು ಎಂಬ ಅನುಮಾನ ಇದೆ. ಹಾಗಾಗಿ ಮುಂದಿನ ಸಭೆಗೆ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಸಂಸದರನ್ನು ಸಭೆಗೆ ಆಹ್ವಾನಿಸಿ, ನಿಗದಿತ ಕೋರಂ ಪಡೆದು ಸಭೆ ನಡೆಲು ಚಿಂತಿಸಲಾಗಿದೆ ಎಂದು ಅವರು ಹೇಳಿದರು.ಕಾಂಗ್ರೆಸ್ ಸದಸ್ಯರ ಉತ್ತರ: ಜಿಲ್ಲಾ ಪಂಚಾಯಿತಿ ಭವನಕ್ಕೆ ಬಂದಿದ್ದರೂ, ಸಾಮಾನ್ಯ ಸಭೆಗೆ ಬಾರದೆ ಕಾಂಗ್ರೆಸ್ ಸದಸ್ಯರು ಪ್ರತ್ಯೇಕ ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸದಸ್ಯ ಇಕ್ಬಾಲ್ ಹುಸೇನ್, ರಂಗಸ್ವಾಮಿ, ವೆಂಕಟೇಶಪ್ಪ ಅವರು ಮಾತನಾಡಿ, ಜಿ.ಪಂ ಅಧ್ಯಕ್ಷರು ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವುದೇ ವಿಷಯಗಳು ಚರ್ಚೆಗೆ ಇರಲಿಲ್ಲ. ಕೇವಲ ಲಿಂಕ್ ಡಾಕ್ಯುಮೆಂಟ್ ಅನುಮೋದನೆ ಪಡೆಯಲು ಹಾಗೂ ಜಿ.ಪಂ ಅಭಿವೃದ್ಧಿ ಅನುದಾನವಾಗಿ ಬಂದಿರುವ ಎರಡು ಕೋಟಿ ರೂಪಾಯಿ ಹಂಚಿಕೆಗೆ ಅನುಮೋದನೆ ಪಡೆಯುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು ಎಂದು ದೂರಿದರು.ಜಿ.ಪಂ. ಅಭಿವೃದ್ಧಿ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ನಾಲ್ಕು ತಿಂಗಳಲ್ಲಿ ನಾಲ್ಕು ಬಾರಿ ತಿದ್ದುಪಡಿ ಮಾಡಲಾಗಿದೆ. ಇದರಲ್ಲಿ ಜಿ.ಪಂನ ಎಲ್ಲ ಸದಸ್ಯರಿಗೂ ಸರಿಯಾಗಿ ಅನುದಾನ ಹಂಚಿಕೆ ಮಾಡಿಲ್ಲ. ಕಾಂಗ್ರೆಸ್ ಸದಸ್ಯರನ್ನು ಕಡೆಗಣಿಸಲಾಗಿದೆ. ಒಟ್ಟು 22 ಸದಸ್ಯರಲ್ಲಿ ಕಾಂಗ್ರೆಸ್‌ನ 10 ಸದಸ್ಯರಿದ್ದೇವೆ. ಅನುದಾನ ಹಂಚಿಕೆ ಸಂದರ್ಭದಲ್ಲಿ ನಮ್ಮ ಕ್ಷೇತ್ರಗಳ ಅಭಿವೃದ್ಧಿಗೂ ಒತ್ತು ನೀಡಬೇಕಾದದ್ದು ಜಿ.ಪಂ ಅಧ್ಯಕ್ಷರ ಕರ್ತವ್ಯ. ಆದರೆ ಅವರು ಹಾಗೆ ಮಾಡದೆ ಜೆಡಿಎಸ್ ಸದಸ್ಯರ ಕ್ಷೇತ್ರಗಳಿಗೆ ಒತ್ತು ನೀಡಿದ್ದಾರೆ ಎಂದು ಆರೋಪಿಸಿದರು.ಇಷ್ಟ್ಲ್ಲೆಲಾ ಅಸಮಾಧಾನದ ನಡುವೆಯೂ ಸಭೆಯಲ್ಲಿ ಪಾಲ್ಗೊಳ್ಳಲು ಬಯಸಿ, ಪೂರ್ವಭಾವಿ ಸಭೆ ನಡೆಸಲಾಗುತ್ತಿತ್ತು. ಇನ್ನೇನು ಸಾಮಾನ್ಯ ಸಭೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಸಭೆಯನ್ನು ರದ್ದುಪಡಿಸಿ, ಮುಂದೂಡಲಾಗಿದೆ ಎಂದು ಗೊತ್ತಾಯಿತು ಎಂದು ಅವರು ಪ್ರತಿಕ್ರಿಯಿಸಿದರು.

ಲ್ಯಾಪ್‌ಟಾಪ್ ಖರೀದಿ ಅವ್ಯವಹಾರ

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ಲ್ಯಾಪ್‌ಟಾಪ್ ಒದಗಿಸುವ ರಾಜ್ಯ ಸರ್ಕಾರದ ಯೋಜನೆಗೆ ಸಂಬಂಧಿಸಿದಂತೆ ರಾಮನಗರ ಜಿ.ಪಂನಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಪಂಚಾಯಿತಿಯ ಕಾಂಗ್ರೆಸ್ ಸದಸ್ಯ ಇಕ್ಬಾಲ್ ಹುಸೇನ್, ರಂಗಸ್ವಾಮಿ, ವೆಂಕಟೇಶಪ್ಪ ದೂರಿದರು.

ಜಿಲ್ಲೆಯಲ್ಲಿ ಒಟ್ಟು 100 ಲ್ಯಾಪ್‌ಟಾಪ್‌ಗಳ ಖರೀದಿ ನಡೆದಿದ್ದು, ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ. 2007ರ ಮಾದರಿಯ ತಲಾ 23ರಿಂದ 24 ಸಾವಿರ ರೂಪಾಯಿ ಬೆಲೆಯ ಲ್ಯಾಪ್‌ಟಾಪ್ ಅನ್ನು ಜಿಲ್ಲಾ ಪಂಚಾಯಿತಿ ಸುಮಾರು ತಲಾ 40 ಸಾವಿರ ರೂಪಾಯಿಗೆ ಖರೀದಿಸಿದೆ ಎಂದು ಅವರು ಆರೋಪಿಸಿದರು. ಅಲ್ಲದೆ `ಫ್ಯಾಬ್ರಿಕೇಟರ್' ಸಂಸ್ಥೆಯಿಂದ ಲ್ಯಾಪ್‌ಟಾಪ್‌ನ `ಕೊಟೇಷನ್' ಪಡೆಯಲಾಗಿದೆ ಎಂದು ಅವರು ದೂರಿದರು. ಈ ಬಗ್ಗೆ ಮುಂದಿನ ಸಭೆಯಲ್ಲಿ ಸಮಗ್ರ ತನಿಖೆಗೆ ಆಗ್ರಹಿಸುವುದಾಗಿ ಅವರು ಹೇಳಿದರು.

ರದ್ದಾದ ಸಭೆಗೆ ರೂ 50 ಸಾವಿರ ಖರ್ಚು

ಕೋರಂ ಕೊರತೆಯಿಂದ ಮಂಗಳವಾರ ರದ್ದಾದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಅಂದಾಜು ರೂ 50 ಸಾವಿರ ಖರ್ಚಾಗಿದೆ ಎಂದು ತಿಳಿದು ಬಂದಿದೆ.

ಸದಸ್ಯರ ಟಿ.ಎ/ಡಿ.ಎ ಹಾಗೂ ಸಭೆಗೆಂದು ಆಯೋಜಿಸಲಾಗಿದ್ದ ಊಟೋಪಚಾರಕ್ಕೆ ಈ ಹಣ ಖರ್ಚಾಗಿದೆ ಎಂದು ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry