ಭಾನುವಾರ, ಏಪ್ರಿಲ್ 11, 2021
25 °C

18ರಂದು ಪ್ರಧಾನಿ ಭೇಟಿ: ಸಚಿವ ಕತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರ ನಿರ್ವಹಣೆಗೆ ಅನುದಾನ ಬಿಡುಗಡೆಗೊಳಿಸದೇ ಇದ್ದರೆ ರೈತರಿಗೆ ಬೆಳೆ ನಷ್ಟ ಪರಿಹಾರ ಕೊಡುವುದು ಅಸಾಧ್ಯ. ಈಗಾಗಲೇ ರೂ 11,200 ಕೋಟಿ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇದೇ 18ರಂದು ಮತ್ತೊಮ್ಮೆ ನಿಯೋಗದಲ್ಲಿ ತೆರಳಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ಬಿಡುಗಡೆಗೆ ಕೋರಲಾಗುವುದು ಎಂದು ರಾಜ್ಯ ಕೃಷಿ ಸಚಿವ ಉಮೇಶ ಕತ್ತಿ ಹೇಳಿದರು.ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬರದಿಂದ ಶೇ 50ರಷ್ಟು ಬೆಳೆ ನಷ್ಟವಾಗಿದೆ. ರಾಜ್ಯ ಸರ್ಕಾರವು ರೈತರು ಸಹಕಾರ ಸಂಸ್ಥೆಗಳಲ್ಲಿ ಪಡೆದಿದ್ದ ರೂ 3,800 ಕೋಟಿ  ಸಾಲ ಮನ್ನಾ ಮಾಡಿದೆ. ಬರ ಪರಿಸ್ಥಿತಿ ನಿವಾರಣೆಗೆ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದರು.ರಾಷ್ಟ್ರೀಯ ವಿಪತ್ತು ನಿಧಿಯಡಿ ರೂ 386 ಕೋಟಿ ಕೇಂದ್ರ ನೀಡಿದೆ. ಇದು  ರಾಜ್ಯಕ್ಕೆ ದೊರಕಿಸಬೇಕಾದ ಪೂರ್ವ ನಿರ್ಧರಿತ ಮೊತ್ತ. ಕೇಂದ್ರ ವಿಶೇಷ ಕಾಳಜಿಯಿಂದ ದೊರಕಿಸಿರುವ ಮೊತ್ತವೇನೂ ಅಲ್ಲ. ಬರ ಪರಿಹಾರಕ್ಕೆ ರೂ 14 ಕೋಟಿ ಮಾತ್ರ ಕೊಡಲಾಗಿದೆ ಎಂದು ವಿವರಿಸಿದರು.ಬರ ನಿರ್ವಹಣೆಗೆ ರಾಜ್ಯಗಳಿಗೆ ಅನುದಾನ ಕಲ್ಪಿಸುವಲ್ಲಿ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮಹಾರಾಷ್ಟ್ರಕ್ಕೆ ಬರ ನಿರ್ವಹಣೆಗೆ ರೂ  750 ಕೋಟಿ ನೆರವು ನೀಡಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಮಳೆ ಇಲ್ಲದೆ ಮೇವಿನ ಕೊರತೆ ಹೆಚ್ಚಾಗಿದೆ. ಸದ್ಯ 11 ವಾರಗಳಿಗೆ ಆಗುವಷ್ಟು ಮೇವು ರಾಜ್ಯದಲ್ಲಿ ಸಂಗ್ರಹವಿದೆ. ಕೆಲವೆಡೆ ಮಳೆ ಬಿದ್ದ ಪ್ರದೇಶದಲ್ಲಿ ಹುಲ್ಲು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ 1.40 ಕೋಟಿ ಜಾನುವಾರು ಇವೆ. ಪ್ರತಿ ತಿಂಗಳು 20 ಲಕ್ಷ ಮೆಟ್ರಿಕ್ ಟನ್ ಮೇವು ಬೇಕು. ಈಗಿರುವ ಮೇವು ಸಾಕಾಗುವುದಿಲ್ಲ. ಇತರ ರಾಜ್ಯಗಳಿಂದ ಮೇವು ತರಿಸಲು ಪ್ರಯತ್ನ ನಡೆದಿದೆ ಎಂದರು.ಪ್ರವಾಸ ಬೇಡ: ಬರಗಾಲ ಇರುವುದರಿಂದ ಶಾಸಕರು, ಸಚಿವರು ವಿದೇಶ ಪ್ರವಾಸಕ್ಕೆ ಕೈಗೊಳ್ಳುವುದಕ್ಕಿಂತ ಕೈ ಬಿಡುವುದೇ ಲೇಸು. ಖಾತೆ, ಇಲಾಖೆ ಬಗ್ಗೆ ಹೆಚ್ಚಿನ ಜ್ಞಾನ, ಅಧ್ಯಯನಕ್ಕೆ ಹೊರಡುವವರಿದ್ದರೆ ಹೋಗಬಹುದು. ಬರ ಇದೆ ಎಂದು ಮದುವೆ ಮತ್ತೊಂದು ಕಾರ್ಯ ಯಾವುದೂ ನಿಂತಿಲ್ಲ. ಎಲ್ಲವೂ ನಡೆದಿದೆ ಎಂದು ತಿಳಿಸಿದರು.ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡಿ ಅನುಕೂಲ ಕಲ್ಪಿಸುವ ಕೇಂದ್ರ ಯುಪಿಎ ಸರ್ಕಾರ ನಿರ್ಧಾರ ಸ್ವಾಗತಾರ್ಹ. ವಿಜಾಪುರದಲ್ಲಿ ಮುಖ್ಯಮಂತ್ರಿಗಳು ನೀಡಿದ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ವಿಜಾಪುರ ಜಿಲ್ಲೆಯೂ ಅಭಿವೃದ್ಧಿಯಲ್ಲಿ ಹಿನ್ನಡೆ ಹೊಂದಿರುವ ಪ್ರದೇಶ. ಆದ್ದರಿಂದ ಕೇಂದ್ರಕ್ಕೆ ಮನವಿ ಮಾಡುವ ಭರವಸೆ ನೀಡಿರಬಹುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.