ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟ

ಕಾಂಗ್ರೆಸ್ ಮೊದಲ ಪಟ್ಟಿ: ನಗರದ 10 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು
Last Updated 5 ಏಪ್ರಿಲ್ 2013, 20:16 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಆಕಾಂಕ್ಷಿಗಳ ನಡುವಿನ ಪೈಪೋಟಿಯಿಂದ 10ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಘೋಷಣೆಯಾಗಿರುವ 18 ಕ್ಷೇತ್ರಗಳ ಪೈಕಿ ಕೆಲವು ಕಡೆ ಹೊಸ ಮುಖಗಳನ್ನು ಪರಿಚಯಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯವರಾದ ಡಾ.ಬಿ.ಎಲ್.ಶಂಕರ್ ಅವರಿಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ರಾಜಾಜಿನಗರ ಕ್ಷೇತ್ರದಲ್ಲಿ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆರ್.ಮಂಜುಳಾ ನಾಯ್ಡು ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಇತ್ತು.

ಬಸವನಗುಡಿ ಕ್ಷೇತ್ರದಲ್ಲಿ ಪ್ರೊ.ಬಿ.ಕೆ.ಚಂದ್ರಶೇಖರ್ ಅವರಿಗೆ ಟಿಕೆಟ್ ದೊರೆತಿದೆ. ಪಾಲಿಕೆ ಸದಸ್ಯ ಕೆ.ಚಂದ್ರಶೇಖರ್ ಸೇರಿದಂತೆ ಹಲವರು ಈ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕಿಳಿಯಲು ಪೈಪೋಟಿ ನಡೆಸಿದ್ದರು. ಯಲಹಂಕದಲ್ಲಿ ಎಂ.ಎನ್.ಗೋಪಾಲಕೃಷ್ಣ ಅವರಿಗೆ ಅವಕಾಶ ನೀಡಲಾಗಿದೆ.

ಪೈಪೋಟಿಯೇ ಅಡ್ಡಿ:
ಮಲ್ಲೇಶ್ವರ, ಕೆ.ಆರ್.ಪುರ, ಮಹದೇವಪುರ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿನಗರ, ಪದ್ಮನಾಭನಗರ, ಜಯನಗರ, ಸಿ.ವಿ.ರಾಮನ್‌ನಗರ, ಹೆಬ್ಬಾಳ ಮತ್ತು ಚಾಮರಾಜಪೇಟೆ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

ಎಐಸಿಸಿ ಹಾಗೂ ಕೇಂದ್ರ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರ ಸಂಬಂಧಿಗಳಿಗೆ ಟಿಕೆಟ್ ನೀಡಬೇಕೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಪರಿಶೀಲಿಸುತ್ತಿದೆ. ಈ ಕಾರಣಕ್ಕಾಗಿಯೇ ಮಲ್ಲೇಶ್ವರದ ಅಭ್ಯರ್ಥಿ ಹೆಸರನ್ನು ಪ್ರಕಟಿಸಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರ ಸಹೋದರ ಬಿ.ಕೆ.ಶಿವರಾಂ ಈ ಕ್ಷೇತ್ರದಲ್ಲಿ ಟಿಕೆಟ್ ಬಯಸಿದ್ದಾರೆ. ಅವರ ಹೆಸರನ್ನು ಮಾತ್ರ ಕೆಪಿಸಿಸಿ ಚುನಾವಣಾ ಸಮಿತಿ ಹಾಗೂ ಎಐಸಿಸಿ ನೇಮಿಸಿದ್ದ ಅಭ್ಯರ್ಥಿಗಳ ಆಯ್ಕೆ ಪರಿಶೀಲನಾ ಸಮಿತಿಗಳು ಶಿಫಾರಸು ಮಾಡಿದ್ದವು.

ಕೆ.ಆರ್.ಪುರದಲ್ಲಿ ಮಾಜಿ ಸಚಿವ ಎ.ಕೃಷ್ಣಪ್ಪ ಹಾಗೂ ಪಾಲಿಕೆ ಸದಸ್ಯ ಭೈರತಿ ಬಸವರಾಜು ಮಧ್ಯೆ ಪ್ರಬಲ ಪೈಪೋಟಿ ಇರುವ ಕಾರಣಕ್ಕೆ ಅಭ್ಯರ್ಥಿ ಆಯ್ಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಹೆಬ್ಬಾಳದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಟಿಕೆಟ್ ಬಯಸಿದ್ದರು. ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಮೊಮ್ಮಗ ಅಬ್ದುಲ್ ರೆಹಮಾನ್ ಷರೀಫ್ ಕೂಡ ಇದೇ ಕ್ಷೇತ್ರದಲ್ಲಿ ಟಿಕೆಟ್ ಬಯಸಿರುವುದರಿಂದ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿದೆ. ಮಹದೇವಪುರದಲ್ಲೂ ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳು ಇರುವುದು ವಿಳಂಬಕ್ಕೆ ಕಾರಣ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಂಸದೆ ತೇಜಸ್ವಿನಿ ಗೌಡ ಟಿಕೆಟ್ ಬಯಸಿದ್ದಾರೆ. ಸುಷ್ಮಾ ರಾಜಗೋಪಾಲ ರೆಡ್ಡಿ ಸೇರಿದಂತೆ ಹಲವರು ಇಲ್ಲಿ ಟಿಕೆಟ್‌ಗಾಗಿ ಪ್ರಬಲ ಲಾಬಿ ನಡೆಸುತ್ತಿದ್ದಾರೆ. ರಾಜರಾಜೇಶ್ವರಿನಗರದಲ್ಲಿ ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಪಿ.ಎನ್.ಕೃಷ್ಣಮೂರ್ತಿ, ಪಾಲಿಕೆ ಸದಸ್ಯ ಮುನಿರತ್ನ ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ನಡುವೆ ತೀವ್ರ ಪೈಪೋಟಿ ಇದೆ. ಮುನಿರತ್ನ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇತ್ತು. ಆದರೆ, ಅವರ ವಿರುದ್ಧ ಲೋಕಾಯುಕ್ತ ತನಿಖೆ ಬಾಕಿ ಇರುವುದನ್ನು ಕೆಲವರು ಹೈಕಮಾಂಡ್ ಗಮನಕ್ಕೆ ತಂದಿರುವ ಕಾರಣದಿಂದ ಘೋಷಣೆಯನ್ನು ತಡೆ ಹಿಡಿಯಲಾಯಿತು ಎಂದು ಮೂಲಗಳು ತಿಳಿಸಿವೆ.

ಪದ್ಮನಾಭನಗರದಲ್ಲಿ ಕಳೆದ ಬಾರಿ ಕಣಕ್ಕಿಳಿದಿದ್ದ ಗುರಪ್ಪನಾಯ್ಡು ಮತ್ತು ಯುವ ಕಾಂಗ್ರೆಸ್ ಮುಖಂಡ ಚೇತನ್ ಗೌಡ ಟಿಕೆಟ್‌ಗಾಗಿ ಹಟಕ್ಕೆ ಬಿದ್ದಿದ್ದಾರೆ. ಜಯನಗರದಲ್ಲಿ ವಿ.ಆರ್.ಸುದರ್ಶನ್, ಯು.ಬಿ.ವೆಂಕಟೇಶ್ ಮತ್ತು ಎಂ.ಸಿ.ವೇಣುಗೋಪಾಲ್ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಟಿಕೆಟ್ ನಿರಾಕರಿಸುತ್ತಿರುವ ಸುಳಿವು ದೊರೆತ ತಕ್ಷಣ ಪಕ್ಷದ ಮುಖಂಡರಿಗೆ ಪತ್ರ ಬರೆದಿದ್ದ ಸುದರ್ಶನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಸಿ.ವಿ.ರಾಮನ್‌ನಗರದಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿಗ ರಮೇಶ್ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇತ್ತು. ಆದರೆ, ಉಳಿದ ಆಕಾಂಕ್ಷಿಗಳಿಂದ ವಿರೋಧ ಹೆಚ್ಚುತ್ತಲೇ ಇರುವುದು ಅಭ್ಯರ್ಥಿಯನ್ನು ಘೋಷಿಸದಿರಲು ಕಾರಣ ಎನ್ನಲಾಗಿದೆ. ಚಾಮರಾಜಪೇಟೆಯಲ್ಲೂ ಆಕಾಂಕ್ಷಿಗಳ ನಡುವೆ ಸಹಮತ ಮೂಡಿಸಲು ಕಾಂಗ್ರೆಸ್ ಕಾದು ನೋಡುವ ತಂತ್ರದ ಮೊರೆಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT