ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಯಾತ್ರಿಗಳ ಸಾವು

ಸಿಂದಗಿ ಬಳಿ ಭೀಕರ ಅಪಘಾತ
Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಸಿಂದಗಿ: ವಿಜಾಪುರ- ಜೇವರ್ಗಿ ಹೆದ್ದಾರಿಯ ಚಿಕ್ಕಸಿಂದಗಿ ಹತ್ತಿರ ಸೋಮವಾರ ಮಧ್ಯಾಹ್ನ ಖಾಸಗಿ ಬಸ್ ಹಾಗೂ ಕ್ರೂಸರ್ ಜೀಪ್ ಮಧ್ಯೆ ಡಿಕ್ಕಿ ಸಂಭವಿಸಿ ಮಹಾರಾಷ್ಟ್ರದ 18 ಜನ ಮೃತಪಟ್ಟಿದ್ದಾರೆ. ಇವರೆಲ್ಲ ಕ್ರೂಸರ್‌ನಲ್ಲಿದ್ದವರು.

ಸಾಂಗ್ಲಿ ಜಿಲ್ಲೆ ಕವಟೆಮಹಂಕಾಳ ತಾಲ್ಲೂಕಿನ ಢಪಳಾಪೂರ, ಕೊಕಳಾ, ಜತ್ತ ಮತ್ತು ಜತ್ತ ತಾಲ್ಲೂಕಿನ ಬಾಗೇವಾಡಿ ಗ್ರಾಮದ 22 ಜನ ಕ್ರೂಸರ್‌ನಲ್ಲಿ ಗುಲ್ಬರ್ಗ ಜಿಲ್ಲೆ ಗಾಣಗಾಪುರದ ದತ್ತ ದೇವಸ್ಥಾನಕ್ಕೆ ಹೋಗಿ, ತಮ್ಮೂರಿಗೆ ವಾಪಸ್ಸಾಗುತ್ತಿದ್ದರು. ಆಗ ಈ ದುರಂತ ಸಂಭವಿಸಿತು. ಮೃತರಲ್ಲಿ 10 ವರ್ಷ ವಯಸ್ಸಿನ ಬಾಲಕಿ, ಮೂವರು ಮಹಿಳೆಯರು ಸೇರ್ದ್ದಿದು, ಗುರುತು ಪತ್ತೆಯಾಗಿಲ್ಲ. ಆದರೆ ಹೆಚ್ಚಿನವರು 40-50 ವರ್ಷದ ಆಸುಪಾಸಿನವರು. ಬಸ್‌ನಲ್ಲಿದ್ದ ಮೂವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

ಡಿಕ್ಕಿಯ ರಭಸಕ್ಕೆ ಜೀಪು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕೆಲ ಮೃತದೇಹಗಳು ಜೀಪ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಎರಡು ದೇಹಗಳಿಂದ ರುಂಡ ಬೇರ್ಪಟ್ಟಿದ್ದವು. ಕೆಲವು ಛಿದ್ರ-ಛಿದ್ರವಾಗಿ ರಸ್ತೆಯಲ್ಲಿ ಬಿದ್ದಿದ್ದವು.

`ಭಾನುವಾರ ಸಂಜೆ 6ಕ್ಕೆ ಗಾಣಗಾಪುರ ತಲುಪಿದ್ದೆವು. ಸೋಮವಾರ ಮಧ್ಯಾಹ್ನ 12ರ ಆರತಿ ಮುಗಿಸಿಕೊಂಡು ಊಟ ಮಾಡಿ ಅಲ್ಲಿಂದ ಹೊರಟಿದ್ದೆವು. ಜೀಪ್‌ನಲ್ಲಿ ಹಿಂದೆ ಕುಳಿತಿದ್ದ ನಾನು ನಿದ್ರೆಗೆ ಜಾರಿದ್ದೆ. ದೊಡ್ಡ ಶಬ್ದ ಬಂದಾಗ ಎಚ್ಚರವಾಯಿತು. ಆ ಕ್ಷಣದವರೆಗೆ ನನ್ನೊಂದಿಗಿದ್ದವರೆಲ್ಲ ಇಲ್ಲವಾಗಿದ್ದರು' ಎಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಚಂದ್ರಕಾಂತ ಶಿಂಧೆ ಹೇಳಿದರು.

`ಪ್ರತಿ ಹುಣ್ಣಿಮೆಗೆ ನಮ್ಮೂರಿನ ಜನ ಗಾಣಗಾಪುರಕ್ಕೆ ಜೀಪ್‌ನಲ್ಲಿ ಬರುತ್ತಾರೆ. ಜತ್ತ ಪಟ್ಟಣದ ಜೀಪ್‌ನವರು ಪ್ರಯಾಣ ವೆಚ್ಚವಾಗಿ ನಮ್ಮಿಂದ ತಲಾ 350 ರೂಪಾಯಿ ಪಡೆದಿದ್ದರು' ಎಂದರು.

`ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದವರು ಒಂದೇ ಕುಟುಂಬದವರಲ್ಲ. ಗಾಣಗಾಪುರದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮವೂ ಇರಲಿಲ್ಲ. ದೇವರ ದರ್ಶನಕ್ಕೆ ಹೋಗಿ ಬರುವುದಾಗಿ ಭಾನುವಾರ ಮಧ್ಯಾಹ್ನ 12ಕ್ಕೆ ಊರಿನಿಂದ ಪ್ರಯಾಣ ಬೆಳೆಸಿದ್ದರು. ಜತ್ತ ತಾಲ್ಲೂಕು ಬಾಗೇವಾಡಿಯ ಮಚೇಂದ್ರ ಮಹಾರಾಜ್, ಕೊಕಳೆ ಗ್ರಾಮದ ಶಿವಾ ಮಾಳಿ, ದತ್ತಾ ಮೇಸ್ತ್ರಿ ಕುಂಬಾರ, ಮಾರುತಿ ಶೆರೆಗಾರ ಅವರು ಜೀಪ್‌ನಲ್ಲಿದ್ದರು' ಎಂದು ಸಾಂಗ್ಲಿ ಜಿಲ್ಲೆಯ ಕೊಕಳಾ ಗ್ರಾಮದಲ್ಲಿರುವ ಸುನೀತಾ ಶಿಂಧೆ (ಅಪಘಾತದಲ್ಲಿ ಗಾಯಗೊಂಡಿರುವ ಚಂದ್ರಕಾಂತ ಶಿಂಧೆ ಅವರ ಪತ್ನಿ) ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ'ಗೆ ತಿಳಿಸಿದರು.

`ಮಧ್ಯಾಹ್ನ 2.45ರ ಸುಮಾರು ಈ ಅಪಘಾತ ಸಂಭವಿಸಿದೆ. ಮೃತರ ಊರವರು ಬಂದ ನಂತರವಷ್ಟೇ ಹೆಸರು ಗೊತ್ತಾಗಲಿವೆ' ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಫ್.ಎ. ಟ್ರಾಸ್ಗರ್ ತಿಳಿಸಿದರು.

`ಗಾಯಾಳುಗಳನ್ನು ವಿಜಾಪುರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದ್ದು, ಆತ ಪರಾರಿಯಾಗಿದ್ದಾನೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT