1.80 ಕೋಟಿ ಮೌಲ್ಯದ ವಸ್ತು ವಶ

7

1.80 ಕೋಟಿ ಮೌಲ್ಯದ ವಸ್ತು ವಶ

Published:
Updated:

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿರುವ ನಗರದ ಕೇಂದ್ರ ವಿಭಾಗದ ಪೊಲೀಸರು ಸುಮಾರು ಎರಡೂವರೆ ಕೆ.ಜಿ ಚಿನ್ನಾಭರಣ ಸೇರಿದಂತೆ 1.80 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.`ಒಟ್ಟು 80 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿರುವ ಸಿಬ್ಬಂದಿ 66 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 27 ಕೆ.ಜಿ ಬೆಳ್ಳಿ ವಸ್ತುಗಳು, 13 ಲಕ್ಷ ನಗದು, 17 ಕಾರು ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಒಂದು ತಿಂಗಳ ಅವಧಿಯಲ್ಲಿ ಹೆಚ್ಚು ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿರುವ ಸಿಬ್ಬಂದಿಗೆ ಒಂದು ಲಕ್ಷ ನಗದು ಬಹುಮಾನ ನೀಡಲಾಗುತ್ತದೆ ಎಂದರು.ನಕಲಿ ಕೀ ಬಳಸಿ ಚಿನ್ನಾಭರಣ ಅಂಗಡಿಯಲ್ಲಿ ಕಳವು ಮಾಡಿದ್ದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿರುವ ಹಲಸೂರುಗೇಟ್ ಪೊಲೀಸರು 13 ಲಕ್ಷ ನಗದು, 260 ಗ್ರಾಂ ಚಿನ್ನದ ಗಟ್ಟಿ ಮತ್ತು 20 ಕೆ.ಜಿ ತೂಕದ ಬೆಳ್ಳಿ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.ಮಹಾರಾಷ್ಟ್ರ ಮೂಲದ ಶೇಖರ್ (21), ತುಷಾರ್ (24), ಇಂದ್ರಜಿತ್ (26) ಮತ್ತು ಭಾರತಿನಗರದ ಅನಿಲ್ (22) ಬಂಧಿತರು. ಆರೋಪಿಗಳು ನಗರ್ತ ಪೇಟೆಯಲ್ಲಿರುವ ಎಸ್.ಬಿ.ರಿಫೈನರಿ ಹೆಸರಿನ ಚಿನ್ನಾಭರಣ ಮಳಿಗೆಯಲ್ಲಿ ಆಭರಣ ಹಾಗೂ ಹಣವನ್ನು ಕಳವು ಮಾಡಿದ್ದರು. ನಂತರ ಆ ಆಭರಣಗಳನ್ನು ರಾಜಾಜಿನಗರದ ಇಂದ್ರಜಿತ್ ಎಂಬ ಚಿನ್ನಾಭರಣ ವ್ಯಾಪಾರಿಗೆ ಮಾರಿದ್ದರು. ಈ ಸಂಬಂಧ ಮಳಿಗೆಯ ಮಾಲೀಕ ಯಶವಂತ್ ಅವರು ದೂರು ಕೊಟ್ಟಿದ್ದರು ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ ತಿಳಿಸಿದರು. ಆ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದ ಅನಿಲ್ ಇತರೆ ಆರೋಪಿಗಳ ಜತೆ ಸೇರಿ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದ.ಎಸ್.ಬಿ.ರಿಫೈನರಿ ಮಳಿಗೆಯ ಕಟ್ಟಡದ ನಾಲ್ಕನೇ ಮಹಡಿಯ ಮೆಟ್ಟಿಲುಗಳ ಬಳಿ ಅಳವಡಿಸಿರುವ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಆರೋಪಿಗಳ ದೃಶ್ಯ ದಾಖಲಾಗಿತ್ತು. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.ಡಿಸಿಪಿ ರಮೇಶ್ ಅವರ ಮಾರ್ಗದರ್ಶನದಲ್ಲಿ ಎಸಿಪಿಗಳಾದ ಡಿ.ದೇವರಾಜ್, ಎಂ.ಕೆ.ಸೋಲಭೇಶ್ವರಪ್ಪ, ಕೆ.ಎನ್.ಜಿತೇಂದ್ರನಾಥ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೂರ್ವ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry