ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18ಕ್ಕೆ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ

Last Updated 13 ಜುಲೈ 2012, 4:30 IST
ಅಕ್ಷರ ಗಾತ್ರ

ಹಿರಿಯೂರು: ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಸೇರಿದಂತೆ ದಲಿತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜುಲೈ 18 ಮತ್ತು 19ರಂದು ಎರಡು ದಿನ ಹಿರಿಯೂರಿನಿಂದ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿವರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಸ್ಥಾಪಿತ)ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ನಾಲ್ಕು ವರ್ಷಗಳ ಹಿಂದೆ ನಗರದ ಪ್ರವಾಸಿ ಮಂದಿರ ವೃತ್ತವನ್ನು ಅಭಿವೃದ್ಧಿ ಮಾಡುವ ಸಲುವಾಗಿ ಪರಮೇನಹಳ್ಳಿ ಸಮೀಪ ಇರುವ ವಿಎಸ್‌ಎಲ್ ಕಾರ್ಖಾನೆಯವರು ವೃತ್ತದ ಮಧ್ಯಭಾಗದಲ್ಲಿದ್ದ ಡಾ.ಅಂಬೇಡ್ಕರ್ ಹೆಸರಿನ ನಾಮಫಲಕವನ್ನು ಉರುಳಿಸಿದ್ದರು.
 
ಇದರ ವಿರುದ್ಧ ದಲಿತ ಸಂಘಟನೆಗಳು ಕಂಪೆನಿ ವಿರುದ್ಧ ಪ್ರತಿಭಟನೆ ನಡೆಸಿ, ಪೊಲೀಸರಿಗೆ ದೂರು ನೀಡಿದ್ದವು. ಆಗ ವೃತ್ತ ನಿರೀಕ್ಷಕರಾಗಿದ್ದ ಶ್ರೀನಿವಾಸ್ ಅವರು ದಲಿತ ಮುಖಂಡರು ಮತ್ತು ಕಂಪನಿ ಅಧಿಕಾರಿಗಳ ಸಭೆ ಕರೆದು, ವೃತ್ತದಲ್ಲಿ ನಾಮಫಲಕದ ಜತೆಗೆ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ನಿರ್ಮಿಸಿ ಕೊಡುವಂತೆ ಮಾತುಕತೆ ಸಂದರ್ಭದಲ್ಲಿ ಒಪ್ಪಂದಕ್ಕೆ ಬರಲಾಗಿತ್ತು.

ಕಂಪೆನಿಯವರು 2008ರ ಜುಲೈ 2ರಂದು ಪುರಸಭೆಗೆ ಪತ್ರ ಬರೆದು ಪ್ರವಾಸಿ ಮಂದಿರ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಪರವಾನಗಿ ಕೇಳಿದ್ದರು. ಜಿಲ್ಲಾಧಿಕಾರಿ ಅನುಮತಿ ಮೇರೆಗೆ 2008 ಜುಲೈ 21ರಂದು ಪರವಾನಗಿ ನೀಡಲಾಗಿತ್ತು ಎಂದು  ಎಂದು ಸಮಿತಿ ಅಧ್ಯಕ್ಷ ಕೆ. ತಿಮ್ಮರಾಜು ತಿಳಿಸಿದ್ದಾರೆ.

ದಲಿತ ಸಂಘಟನೆಗಳ ಜತೆ ನಡೆಸಿದ ಮಾತುಕತೆಯಂತೆ ವಿಎಸ್‌ಎಲ್ ಕಂಪೆನಿ ರಾಮನಗರ ಜಿಲ್ಲೆಯ ಬಿಡದಿಯ ಶಿಲ್ಪಿ ಅಶೋಕ್ ಗುಡಿಕಾರ್ ಅವರಿಂದ ಸುಮಾರು ್ಙ 5 ಲಕ್ಷ ವೆಚ್ಚದ ಕಂಚಿನ ಪ್ರತಿಮೆ ತಯಾರು ಮಾಡಿಸಿ, ಎರಡು ವರ್ಷದ ಹಿಂದೆಯೇ ತಂದಿರಿಸಲಾಗಿದೆ. ಎರಡು ವರ್ಷ ಕಳೆದರೂ ಪ್ರತಿಮೆ ಪ್ರತಿಷ್ಠಾಪನೆ ಮಾಡದಿರುವುದು ಸಂವಿಧಾನ ಶಿಲ್ಪಿಗೆ ಅಗೌರವ ಸೂಚಿಸಿದಂತೆ ಆಗಿದೆ. ಪ್ರಯುಕ್ತ ಸರ್ಕಾರದ ಗಮನ ಸೆಳೆಯಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಮ್ಮರಾಜು ತಿಳಿಸಿದ್ದಾರೆ.

ಇತರೆ ಬೇಡಿಕೆಗಳು: ಕತ್ತೆಹೊಳೆ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು. ಸುಜಲ ಜಲಾನಯನ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದ ಪರಿಶಿಷ್ಟ ಸಮುದಾಯದ ಬಾಲಕ ಸಂಪತ್‌ಕುಮಾರ್ ಕುಟುಂಬಕ್ಕೆ ್ಙ 5 ಲಕ್ಷ ಪರಿಹಾರ ನೀಡಬೇಕು.

ಆರ್‌ಟಿಇ ಕಾಯ್ದೆ ಉಲ್ಲಂಘನೆ ಮಾಡಿರುವ ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಯರದಕಟ್ಟೆ ಗ್ರಾಮದ ಗಿರಿಯಜ್ಜನ ಕಪಿಲೆಯ ಮುಂದಿನ ಹಳ್ಳದ ಸಮೀಪ ನಾಲ್ಕು ದಶಕಗಳಿಂದ ನೆಲೆಸಿರುವ ದಲಿತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು. ಇತರ ಬೇಡಿಕೆ ಈಡೇರಿಸಬೇಕೆನ್ನುವುದು ತಮ್ಮ ಹಕ್ಕೊತ್ತಾಯವಾಗಿದೆ ಎಂದು ಅವರು ಹೇಳಿದ್ದು, ಪಾದಯಾತ್ರೆಯಲ್ಲಿ ಅಂಬೇಡ್ಕರ್ ಅಭಿಮಾನಿಗಳು ಪಾಲ್ಗೊಳ್ಳವಂತೆ ಮನವಿ ಮಾಡಿದ್ದಾರೆ.

14ಕ್ಕೆ ಮುಖಂಡರ ಸಭೆ
ಚಳ್ಳಕೆರೆ:
ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಜಿ. ಸದಾಶಿವ ವರದಿಯನ್ನು ಸರ್ಕಾರ ಜಾರಿಗೊಳಿಸಿ ಇದುವರೆಗೂ ಅನ್ಯಾಯಕ್ಕೆ ಒಳಗಾಗಿದ್ದ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಮಾಡುವ ಸಲುವಾಗಿ ಇದೇ ಜುಲೈ 14ರಂದು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಾದಿಗ ಮುಖಂಡರ ಸಭೆ ಕರೆಯಲಾಗಿದೆ. ಅದ್ದರಿಂದ, ತಾಲ್ಲೂಕಿನ ಮಾದಿಗ ಮುಖಂಡರು, ವಿದ್ಯಾರ್ಥಿಗಳು, ಹೋರಾಟಗಾರರು, ಸರ್ಕಾರಿ ನೌಕರರು ಸಭೆಗೆ ಆಗಮಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಸಭೆಯಲ್ಲಿ ದಲಿತ ಮುಖಂಡ ಎಂ. ಜಯಣ್ಣ, ರಾಜ್ಯ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಕೆಪಿಸಿಸಿ ಸದಸ್ಯ ಡಾ.ಬಿ. ತಿಪ್ಪೇಸ್ವಾಮಿ, ಎಂ. ದುರುಗೇಶ್, ಎಂ. ಶಿವಮೂರ್ತಿ, ಬಿ.ಪಿ. ಪ್ರಕಾಶ ಮೂರ್ತಿ, ಹುಲ್ಲೂರು ಕುಮಾರಸ್ವಾಮಿ, ನಾರಾಯಣ ಮೂರ್ತಿ, ಓಂಕಾರಪ್ಪ ಮುಂತಾದವರು ಭಾಗವಹಿಸುವರು ಎಂದು ರುದ್ರಮುನಿ ತಿಳಿಸಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT