ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18ರಿಂದ ಕಳಸಾ–ಬಂಡೂರಿ ನಾಲಾ ಪ್ರದೇಶಕ್ಕೆ ಭೇಟಿ

ಮಹಾದಾಯಿ ಜಲ ವಿವಾದ ನ್ಯಾಯಮಂಡಳಿ ತಂಡ
Last Updated 14 ಡಿಸೆಂಬರ್ 2013, 4:06 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾದಾಯಿ ಜಲ ವಿವಾದ ನ್ಯಾಯಮಂಡಳಿಯ ತಂಡ ಇದೇ 18 ರಿಂದ 22ರ ವರೆಗೆ ಕಳಸಾ– ಬಂಡೂರಿ ನಾಲಾ ತಿರುವು ಯೋಜನಾ ಪ್ರದೇಶಕ್ಕೆ ಭೇಟಿ ನೀಡಲಿದೆ. ಈ ಹಿನ್ನೆಲೆಯಲ್ಲಿ ಮಹಾದಾಯಿ ನದಿ ನೀರಿನ ಬಳಕೆ ಕುರಿತು ನ್ಯಾಯಮಂಡಳಿ ಎದುರು ಸಮರ್ಥವಾಗಿ ವಾದ ಮಂಡಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಸತ್ಯಮೂರ್ತಿ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿಯ ಹಳೆಯ ಕಟ್ಟಡದಲ್ಲಿ ಶುಕ್ರವಾರ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಪೂರ್ವ ಸಿದ್ಧತೆ ಸಭೆ ನಡೆಸಿದ ಅವರು, ನ್ಯಾಯಮಂಡಳಿ ತಂಡವು ಯೋಜನೆಯ ಸಾಧಕ– ಬಾಧಕ ಕುರಿತು ಚರ್ಚೆ  ಹಾಗೂ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಿದೆ ಎಂದರು.

ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್, ನ್ಯಾಯಮೂರ್ತಿ ವಿನಯ ಮಿತ್ತಲ್, ನ್ಯಾಯಮೂರ್ತಿ ಪಿ.ಎಸ್. ನಾರಾ­ಯಣ ಹಾಗೂ ಕೇಂದ್ರ ಜಲಸಂಪನ್ಮೂಲ ಇಲಾಖೆ ಅಧಿಕಾರಿ ಎಂ.ಇ.ಹಕ್, ಎಸ್.ಕೆ.­ಸೇರಗುಪ್ಪ, ರಜಿಸ್ಟ್ರಾರ್‌ ಜಗದೀಶ ಚಂದ್ರ, ಕೆ.ಎನ್. ಕಪೂರ ಸೇರಿದಂತೆ 10 ಮಂದಿ ತಜ್ಞರು, ರಾಜ್ಯದಿಂದ 10 ಮಂದಿ ಕಾನೂನು ತಜ್ಞರು, 12 ತಾಂತ್ರಿಕ ತಜ್ಞರು, ಮಹಾರಾಷ್ಟ್ರ­ದಿಂದ ಇಬ್ಬರು ಕಾನೂನು ತಜ್ಞರು, 5 ತಾಂತ್ರಿಕ ತಜ್ಞರು ಹಾಗೂ ಗೋವಾದಿಂದ ಇಬ್ಬರು ಕಾನೂನು ತಜ್ಞರು, 9 ತಾಂತ್ರಿಕ ತಜ್ಞರು ಸೇರಿದಂತೆ ಒಟ್ಟು 53 ಮಂದಿ ತಂಡದಲ್ಲಿರುತ್ತಾರೆ ಎಂದು ತಿಳಿಸಿದರು.

ಮಹಾದಾಯಿ ನದಿ ಯೋಜನೆ ರಾಜ್ಯಕ್ಕೆ ಮಹತ್ವದ ವಿಷಯವಾಗಿರುವುದರಿಂದ ರಾಜ್ಯ ಹಾಗೂ ಜಿಲ್ಲೆಗಿರುವ ನೀರಿನ ಅವಶ್ಯಕತೆ ಕುರಿತು ನ್ಯಾಯಮಂಡಳಿಗೆ ಸೂಕ್ತ ಮಾಹಿತಿ ನೀಡುವ ನಿಟ್ಟಿನಲ್ಲಿ ಸಂಬಧಿಸಿದ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ಕಾನೂನು ಮತ್ತು ತಾಂತ್ರಿಕ ವಿಷಯಗಳು ಬಂದಾಗ ಯಾವ ರೀತಿ ಮಾಹಿತಿ ಒದಗಿಸಬೇಕು ಹಾಗೂ ನಮ್ಮ ವಾದ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಮಾರ್ಗದರ್ಶನ ಮತ್ತು ಸೂಚನೆ ನೀಡಲಾಗಿದೆ ಎಂದರು.

ಮಹಾದಾಯಿ ನದಿ ನೀರು ಯೋಜನೆ ಕುರಿತು ಈಗಾಗಲೇ ನ್ಯಾಯಮಂಡಳಿ ಎದುರಿಗೆ ರಾಜ್ಯವು ತನ್ನ ವಾದ ಮಂಡಿಸಿದೆ. ನ್ಯಾಯಮಂಡಳಿ ತೀರ್ಪಿನನ್ವಯ ಮುಂದಿನ 20–30 ವರ್ಷಗಳ ಅವಧಿಗೆ ನೀರು ಬಳಕೆ ಕುರಿತು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಎನ್. ಜಯರಾಂ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ­ಧಿಕಾರಿ ದೀಪಾ ಚೋಳನ್‌, ಹೆಚ್ಚುವರಿ ಜಿಲ್ಲಾಧಿ­ಕಾರಿ ಡಾ. ಪ್ರವೀಣಕುಮಾರ, ಪಾಲಿಕೆ ಆಯುಕ್ತ ರವಿಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ನೀರಾವರಿ, ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

ಸಭೆಗೆ ಬಂದಿದ್ದ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಅವರು, ವಿವಿಧ ನೀರಾವರಿ ಯೋಜನೆಗಳ ಕಾಮಗಾರಿ ಕೈಗೆತ್ತಿ­ಕೊಳ್ಳುವಂತೆ ಸತ್ಯಮೂರ್ತಿ ಅವರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT