ಭಾನುವಾರ, ಏಪ್ರಿಲ್ 18, 2021
29 °C

19 ವರ್ಷಗಳಿಂದ ಪಾಳು ಬಿದ್ದಿರುವ ಈಜು ಕೊಳ!

ಪ್ರಜಾವಾಣಿ ವಾರ್ತೆ/ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕ್ರೀಡೆಗಳ ತವರೂರು ಎಂದು ಕರೆಸಿಕೊಳ್ಳುವ ಕೊಡಗಿನ ಕೇಂದ್ರ ಸ್ಥಾನ ಮಡಿಕೇರಿಯಲ್ಲಿಯೇ ಈಜುಕೊಳವೊಂದು ಒಂದಲ್ಲ, ಎರಡಲ್ಲ, ಕಳೆದ 19 ವರ್ಷಗಳಿಂದ ಪಾಳು ಬಿದ್ದಿದೆ ಎಂದರೆ ನಂಬಲು ಅಸಾಧ್ಯ. ಜಿಲ್ಲೆಯ ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಆಸಕ್ತಿ ತೋರುವ ಇಂತಹ ಜಿಲ್ಲೆಯಲ್ಲಿಯೇ ಈ ಪರಿಸ್ಥಿತಿಯಾದರೆ ಇತರೆ ಜಿಲ್ಲೆಗಳ ಪಾಡೇನು?ನಗರದ ಮ್ಯಾನ್ಸ್ ಕಂಪೌಂಡ್‌ನಲ್ಲಿರುವ ಈಜು ಕೊಳ ಕಳೆದ 19 ವರ್ಷಗಳಿಂದ ಪಾಳು ಬಿದ್ದಿದೆ. ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಈಜು ಕೊಳ ಇಷ್ಟೊಂದು ದೀರ್ಘ ಕಾಲದವರೆಗೆ ನಿಷ್ಕ್ರಿಯವಾಗಿದೆ. ಇದು ಸಹಜವಾಗಿ ಈಜು ಪ್ರೇಮಿಗಳಲ್ಲಿ ನಿರಾಶೆ ಮೂಡಿಸಿದೆ.ಈಜು ಕೊಳದ ಸುತ್ತ ಈಗ ಕಾಡು ಬೆಳೆದು ನಿಂತಿದೆ. ಸುತ್ತಲಿನ ಸಿಮೆಂಟ್ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ತಳಪಾಯ ಕಿತ್ತು ಮೇಲೆ ಬರುತ್ತಿದೆ. ಕೊಳದ ಇಂದಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ.

ಮ್ಯಾನ್ಸ್ ಕಂಪೌಂಡ್ ಆವರಣದಲ್ಲಿರುವ ಜ್ಯೂನಿಯರ್ ಕಾಲೇಜಿನ ಆಡಳಿತ ಮಂಡಳಿ ಆರಂಭದಲ್ಲಿ ಇದರ ನಿರ್ವಹಣೆ ಮಾಡುತ್ತಿತ್ತು. ಕೆಲ ವರ್ಷಗಳ ನಂತರ 1990ರಲ್ಲಿ ಇದನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸುಪರ್ದಿಗೆ ವಹಿಸಲಾಯಿತು.ಆಗ ಇದನ್ನು ಪುನಶ್ಚೇತನಗೊಳಿಸಿ ಮೂರು ವರ್ಷಗಳವರೆಗೆ ಬಳಸಲಾಯಿತು. ಇದಾದ ನಂತರ ಅಂದರೆ 1993ರಿಂದ ಸಮಸ್ಯೆಗಳು ಆರಂಭಗೊಂಡವು. ಈಜು ಕೊಳದ ತಳಪಾಯದಲ್ಲಿ ನೀರಿನ ಸೋರಿಕೆ ಕಂಡುಬಂದಿತು. ಇದಲ್ಲದೇ, ಇಲ್ಲಿ ನೀರನ್ನು ಶುದ್ಧೀಕರಿಸುವ ಘಟಕದ ಕೊರತೆಯೂ ಇತ್ತು.ಈಜು ಕೊಳದ ನೀರನ್ನು ಸ್ವಚ್ಛಗೊಳಿಸಲು ಕ್ಲೋರಿನ್ ದ್ರಾವಣ ವನ್ನು ಹಾಕಲಾಗುತ್ತದೆ. ಕ್ಲೋರಿನ್ ಮಿಶ್ರಿತ ನೀರನ್ನು ಮೇಲಿಂದ ಮೇಲೆ ಶುದ್ಧೀಕರಿಸಲು ಘಟಕದ ಅವಶ್ಯಕತೆ ಇರುತ್ತದೆ. ಅದರ ಕೊರತೆಯೂ ಇಲ್ಲಿ ಕಂಡುಬಂದಿತು. ತದನಂತರ ಯಾರೂ ಅಷ್ಟಾಗಿ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಈಜು ಕೊಳ ಪಾಳುಬಿದ್ದಿತು.

ಇಲ್ಲಿನ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರೇ ಈಗ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿದ್ದು, ಇನ್ನಾದರೂ ನಗರದ ಈಜುಗೊಳಕ್ಕೆ ಕಾಯಕಲ್ಪ ಸಿಗಲಿದೆಯೇ ಎಂದು ಈಜು ಪ್ರೇಮಿಗಳು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ಪುನಶ್ಚೇತನಕ್ಕೆ ಕ್ರಮ

ಮ್ಯಾನ್ಸ್ ಕಂಪೌಂಡ್‌ನಲ್ಲಿರುವ ಈಜುಗೊಳದ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕ್ರೀಡಾಂಗಣಗಳಿಗೂ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹೇಳಿದರು.ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಯುವಜನ ಸೇವಾ ಮತ್ತು ಕ್ರೀಡಾ  ಇಲಾಖೆ ವತಿಯಿಂದ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಅದನ್ನು ಸಚಿವರಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಅವರು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.