ಮಂಗಳವಾರ, ನವೆಂಬರ್ 12, 2019
26 °C

1957ರ ಚುನಾವಣೆ: ಆಗ ಕಾಂಗ್ರೆಸ್ ಗೆದ್ದಿರಲಿಲ್ಲ!

Published:
Updated:

ಚಿಕ್ಕಬಳ್ಳಾಪುರ: ಈಗಿನ ಚುನಾವಣೆಗಳು ಎಷ್ಟು ಕುತೂಹಲಕಾರಿ ಮತ್ತು ಕೌತುಕಮಯವೋ 1950ರ ದಶಕದಲ್ಲಿ ನಡೆದ ಚುನಾವಣೆಗಳು ಅಷ್ಟೇ ಆಸಕ್ತಿಕರವಾಗಿದ್ದವು. ದೇಶಕ್ಕೆ ಸ್ವತಂತ್ರ ಬಂದ ಹತ್ತು ವರ್ಷಗಳಲ್ಲಿ ಜಾಗೃತಗೊಂಡಿದ್ದ ಮತದಾರರು ತಮ್ಮ ತಮ್ಮ ಕ್ಷೇತ್ರದ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದರು. ಅನಕ್ಷರತೆ ಪ್ರಮಾಣ ಕಡಿಮೆಯಾಗಿದ್ದರೂ ಹೆಚ್ಚಿನ ಮಂದಿ ಮತಗಟ್ಟೆಗೆ ತೆರಳಿ ಮತಗಳನ್ನು ಚಲಾಯಿಸಿದ್ದರು. ಪಕ್ಷೇತರ ಅಥವಾ ಪಕ್ಷದ ಅಭ್ಯರ್ಥಿ ಎಂಬುದನ್ನು ಲೆಕ್ಕಿಸದೆ ಮತದಾನದ ಮೂಲಕ ತಮ್ಮ ಮೆಚ್ಚಿನ ಅಭ್ಯರ್ಥಿಗೆ ವಿಜಯಮಾಲೆ ತೊಡಿಸಿದ್ದರು.1957ರಲ್ಲಿ ಭಾಷಾವಾರು ಪ್ರಾಂತ್ಯ ಮತ್ತು ರಾಜ್ಯಗಳು ರಚನೆಯಾಗಿರಲಿಲ್ಲ. ಪೂರ್ಣಪ್ರಮಾಣದ ರಾಜ್ಯ ಅಸ್ತಿತ್ವಕ್ಕೆ ಇನ್ನೂ ಬಂದಿರದ ಕಾರಣ ಕರ್ನಾಟಕವನ್ನು ಆಗ ಮೈಸೂರು ಎನ್ನಲಾಗುತ್ತಿತ್ತು. ಮೈಸೂರು ವಿಧಾನಸಭೆಯೆಂದೇ ಕರೆಯಲಾಗುತ್ತಿತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಆಗಲೂ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಜೊತೆಗೆ ಕಟ್ಟೆಚ್ಚರ ವಹಿಸಲಾಗಿತ್ತು.ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ನಡೆದ ಚುನಾವಣೆಗಳು ಕುತೂಹಲ ಕೆರಳಿಸಿದ್ದವು. ನಾಲ್ಕು ಕ್ಷೇತ್ರಗಳಲ್ಲೂ 1957ರ ಫೆಬ್ರುವರಿ 25ರಂದು ಮತದಾನ ನಡೆದಿತ್ತು. ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆಗ ಎರಡು ಸ್ಥಾನಗಳನ್ನು ಕಲ್ಪಿಸಲಾಗಿತ್ತು. ಬಾಗೇಪಲ್ಲಿ ಮತ್ತು ಗುಡಿಬಂಡೆ ಆಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಸಾಧ್ಯತೆಯಿದೆ. ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಎಸ್.ಮುನಿರಾಜು ಮತ್ತು ಎ.ಮುನಿಯಪ್ಪ ಇಬ್ಬರೂ ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ಚಿಕ್ಕಬಳ್ಳಾಪುರದಲ್ಲಿ ಒಟ್ಟು 107184 ಮತದಾರರು ಮತ ಚಲಾಯಿಸಿದ್ದರು.ದೇಶದ ಸ್ವತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾಂಗ್ರೆಸ್‌ನ ದಟ್ಟ ಪ್ರಭಾವವಿತ್ತು. ಆದರೂ ಚಿಂತಾಮಣಿಯ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಎಂ.ಸಿ.ಆಂಜನೇಯರೆಡ್ಡಿಯವರನ್ನು ಗೆಲ್ಲಲು ಅವಕಾಶ ನೀಡಲಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಟಿ.ಕೆ.ಗಂಗಿರೆಡ್ಡಿಯವರ ಪರ ಮತ ಚಲಾಯಿಸಿ, ವಿಜಯಶಾಲಿಯಾಗಿಸಿದ್ದರು. 47894 ಅರ್ಹ ಮತದಾರರ ಪೈಕಿ 31789 ಮತದಾರರು ಮತ ಚಲಾಯಿಸಿದ್ದರು. ಒಟ್ಟು ಶೇ 66.37ರಷ್ಟು ಮತದಾನ ನಡೆದಿತ್ತು. ಟಿ.ಕೆ.ಗಂಗಿರೆಡ್ಡಿಯವರು ಅವರು ಕಾಂಗ್ರೆಸ್‌ನ ಎಂ.ಸಿ.ಆಂಜನೇಯರೆಡ್ಡಿಯವರನ್ನು 3816 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಮತದಾರರು ಕೂಡ ಕಾಂಗ್ರೆಸ್‌ನತ್ತ ಹೆಚ್ಚು ಒಲವು ತೋರಲಿಲ್ಲ. ಅತ್ಯಧಿಕ ಮತಗಳನ್ನು ನೀಡಿ ಪಕ್ಷೇತರ ಅಭ್ಯರ್ಥಿ ಕೆ.ಎಚ್.ವೆಂಕಟರೆಡ್ಡಿಯವರನ್ನು ಗೆಲ್ಲಿಸಿದ ಮತದಾರರು ಕಾಂಗ್ರೆಸ್‌ನ ಎನ್.ಸಿ.ನಾಗಯ್ಯರೆಡ್ಡಿ ಅವರನ್ನು ಸೋಲುವಂತೆ ಮಾಡಿದ್ದರು. 54166 ಅರ್ಹ ಮತದಾರರ ಪೈಕಿ 37793 ಮತದಾರರು ಮತ ಚಲಾಯಿಸಿದ್ದರು. ಶೇ 69.77ರಷ್ಟು ಮತದಾನ ನಡೆದಿತ್ತು. ಇತರ ಮೂರು ಕ್ಷೇತ್ರಗಳಿಗೆ ಹೋಲಿಸಿದಲ್ಲಿ, ಅತ್ಯಧಿಕ 13727 ಮತಗಳ ಅಂತರದಿಂದ ಕೆ.ಎಚ್.ವೆಂಕಟರೆಡ್ಡಿಯವರು ಕಾಂಗ್ರೆಸ್‌ನ ಎನ್.ಸಿ.ನಾಗಯ್ಯರೆಡ್ಡಿ ಅವರನ್ನು ಮಣಿಸಿದ್ದರು.ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚುನಾವಣೆ ಕೂಡ ಇತರ ಕ್ಷೇತ್ರಗಳಿಗಿಂತ ಹೆಚ್ಚು ಭಿನ್ನವಾಗಿರಲಿಲ್ಲ. ಇಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆ.ವೆಂಕಟಪ್ಪ ಅವರು ಕಾಂಗ್ರೆಸ್‌ನ ಎಸ್.ಆವಲರೆಡ್ಡಿ ಮೇಲೆ ವಿಜಯ ಸಾಧಿಸಿದ್ದರು. ಒಟ್ಟು 48721 ಮತದಾರರ ಪೈಕಿ 29720 ಮತದಾರರು ಮತ ಚಲಾಯಿಸಿದ್ದರು. ಶೇ 61ರಷ್ಟು ಮತದಾನ ನಡೆದಿತ್ತು. ಗಮನಾರ್ಹ ಸಂಗತಿಯೆಂದರೆ, ಆಗ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷಗಳು ಅಷ್ಟು ಪ್ರಭಾವ ಹೊಂದಿರಲಿಲ್ಲ. ಆದರೂ ಮತದಾರರು ಒಂದು ಕ್ಷೇತ್ರವನ್ನು ಹೊರತುಪಡಿಸಿ, ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ಪಕ್ಷೇತರರನ್ನು ಗೆಲ್ಲುವಂತೆ ಮಾಡಿದ್ದರು.

ಪ್ರತಿಕ್ರಿಯಿಸಿ (+)