ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1962ರ ಚೀನಾ ಸಮರ: ಮೊತ್ತ ಮೊದಲ ಬಾರಿಗೆ ಹುತಾತ್ಮರಿಗೆ ಕೇಂದ್ರ ಗೌರವ

Last Updated 20 ಅಕ್ಟೋಬರ್ 2012, 9:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಇತಿಹಾಸದಲ್ಲಿ ಇದೇ ಮೊತ್ತ ಮೊದಲ ಬಾರಿಗೆ 1962ರ ಭಾರತ- ಚೀನಾ ಸಮರದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ~ಸಮರದ ಪುನರಾವರ್ತನೆ ಸಾಧ್ಯತೆಯನ್ನು ತಳ್ಳಿಹಾಕಿ, ಇಂತಹ ಸಂದರ್ಭ ಬಂದಲ್ಲಿ ಅಂತಹ ಬೆದರಿಕೆ ಎದುರಿಸಲು ಮತ್ತು ರಾಷ್ಟ್ರವನ್ನು ಸಂರಕ್ಷಿಸುವ ಬಗ್ಗೆ ಸಶಸ್ತ್ರ ಪಡೆಗಳು ಸಂಪೂರ್ಣ ವಿಶ್ವಾಸ ಹೊಂದಿವೆ~ ಎಂದು ಹೇಳಿದರು.

1962ರ ಸಮರದ ಹುತಾತ್ಮ ಯೋಧರಿಗೆ ಅಧಿಕೃತವಾಗಿ ಭಾರತೀಯ ರಕ್ಷಣಾ ಸಂಸ್ಥೆ ಗೌರವ ಸಲ್ಲಿಸಿದ್ದು ಇದೇ ಪ್ರಥಮ.

~ಈಗಿನ ಭಾರತವು 1962ರ ಭಾರತ ಅಲ್ಲ, 1962ರ ನಂತರದ ವರ್ಷಗಳಲ್ಲಿ ಬಂದ ಸರ್ಕಾರಗಳು ಇತಿಹಾಸದಿಂದ ಪಾಠ ಕಲಿತಿದ್ದು ರಕ್ಷಣಾ ಸಾಮರ್ಥ್ಯಗಳನ್ನು ವೃದ್ಧಿಸಿಕೊಂಡಿವೆ ಮತ್ತು ನಮ್ಮ ಸಶಸ್ತ್ರ ಪಡೆಗಳನ್ನು ಆಧುನೀಕರಿಸಿವೆ. ನಮ್ಮ ಸಶಸ್ತ್ರ ಪಡೆಗಳು ಯಾವುದೇ ಅಪಾಯ ಎದುರಾದಲ್ಲಿ ನಮ್ಮ ಗಡಿಗಳನ್ನು ಸಂರಕ್ಷಿಸಲು ಸಮರ್ಥವಾಗಿವೆ ಎಂಬ ವಿಶ್ವಾಸ ನಮಗಿದೆ~ ಎಂದು 1962ರ ಸಮರದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಸಮರದ ಹುತಾತ್ಮರು ಮತ್ತು ಸಮರದಲ್ಲಿ ಪಾಲ್ಗೊಂಡವರಿಗೆ ಗೌರವ ಸಲ್ಲಿಸುವ ಸಮಾರಂಭದ ಸಂದರ್ಭದಲ್ಲಿ ಸಚಿವರು ನುಡಿದರು.

ಚೀನಾದಿಂದ ಇರುವ ಬೆದರಿಕೆ ಹಾಗೂ ಅದನ್ನು ನಿಭಾಯಿಸಲು ಭಾರತದ ಸಿದ್ಧತೆ ಬಗ್ಗೆ ವಿವರಿಸುವಂತೆ ಪತ್ರಕರ್ತರು ಆಗ್ರಹಿಸಿದಾಗ ಸಚಿವರು ಈ ಉತ್ತರ ನೀಡಿದರು.

1962ರ ಸಮರದಲ್ಲಿ ಭಾರತ ಚೀನೀ ಸೇನೆಯ ಮುಂದೆ ಸೋಲು ಅನುಭವಿಸಿತ್ತು. ಗೆದ್ದ ಚೀನೀ ಸೇನೆ ಭಾರತಕ್ಕೆ ಸೇರಿದ ಪ್ರದೇಶವನ್ನು ವಶಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮುಂದುವರೆದಿತ್ತು.

ರಕ್ಷಣಾ ಸಚಿವ ಆಂಟನಿ, ರಕ್ಷಣಾ ಖಾತೆ ರಾಜ್ಯ ಸಚಿವ ಎಂ.ಎಂ. ಪಲ್ಲಂ ರಾಜು, ವಾಯುಪಡೆ ಮಾರ್ಷಲ್ ಅರ್ಜುನ ಸಿಂಗ್ ಮತ್ತು ಮೂರೂ ಪಡೆಗಳ ಮುಖ್ಯಸ್ಥರು 1962ರ ಸಮರ ಯೋಧರಿಗೆ ಗೌರವ ಸಲ್ಲಿಸಿದರು ಮತ್ತು ಅಮರ ಜವಾನ್ ಜ್ಯೋತಿಗೆ ಮಾಲಾರ್ಪಣೆ ಮಾಡಿದರು.

~1962 ಬಳಿಕ ಬಂದ ಎಲ್ಲ ಸರ್ಕಾರಗಳೂ ನಮ್ಮ ಸಾಮರ್ಥ್ಯ ವೃದ್ಧಿಗೆ ನಿರಂತರ ಶ್ರಮಿಸಿವೆ. ಸೇನಾ ಸಾಮರ್ಥ್ಯ ಹೆಚ್ಚಳದ ಜೊತೆಗೆ ಮೂಲಸವಲತ್ತನ್ನೂ ಅಭಿವೃದ್ಧಿ ಪಡಿಸಿವೆ. ನಮ್ಮ ಸಾಮರ್ಥ್ಯ ಹೆಚ್ಚಳ ಪ್ರಕ್ರಿಯೆಯನ್ನು ನಾವು ತೀವ್ರತರವಾಗಿ ಮುಂದುವರೆಸುತ್ತೇವೆ~ ಎಂದು ರಕ್ಷಣಾ ಸಚಿವರು ನುಡಿದರು.

1962ರ ಸಮರದ ಹುತಾತ್ಮರಿಗೆ ಗೌರವ ಸಲ್ಲಿಸಲು ಸರ್ಕಾರ 50 ವರ್ಷ ತೆಗೆದುಕೊಂಡದ್ದು ಏಕೆ ಎಂಬ ಪ್ರಶ್ನೆಗೆ ~ಯಾವ ಬದಲಾವಣೆಯೂ ಆಗಿಲ್ಲ. ಇದು ಐವತ್ತನೇ ವರ್ಷವಾಗಿದ್ದು, ನಮ್ಮ ಗಡಿ ರಕ್ಷಿಸುವ ಸಲುವಾಗಿ ಬಲಿದಾನ ಮಾಡಿದ ನಮ್ಮ ಸೈನಿಕರು ಮತ್ತು ಅಧಿಕಾರಿಗಳಿಗೆ ಇಡೀ ರಾಷ್ಟ್ರವೇ ಗೌರವಾರ್ಪಣೆ ಮಾಡಲು ಇದೇ ಸಕಾಲ ಎಂದು ನಾವು ಯೋಚಿಸಿದೆವು~ ಎಂದು ಸಚಿವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT