ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1ರಿಂದ ಆಟೋರಿಕ್ಷಾಗೆ ಮೀಟರ್ ಕಡ್ಡಾಯ

Last Updated 22 ಫೆಬ್ರುವರಿ 2012, 5:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆಟೋರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿ ಪ್ರತಿ 2 ಕಿಲೋಮೀಟರ್‌ಗೆ ಕನಿಷ್ಠ 15 ರೂಪಾಯಿಗಳ ದರವನ್ನು ನಿಗದಿ ಮಾಡಿದ್ದು, ಮಾರ್ಚ್ 1ರಿಂದ ಎಲ್ಲಾ ಆಟೋರಿಕ್ಷಾಗಳಿಗೆ ಫೆರ್‌ಮೀಟರ್ ಅಳವಡಿಕೆ ಕಡ್ಡಾಯವಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಜೆ. ತೆಂಬದ್ ತಿಳಿಸಿದ್ದಾರೆ.

ಪರಿಷ್ಕೃತ ದರವು ಈಗಾಗಲೇ ಆಟೋ ಮೀಟರ್ ಅಳವಡಿಸಿದ ಆಟೋರಿಕ್ಷಾಗಳಿಗೆ ಅನ್ವಯಿಸಲಿದೆ. ಜಿಲ್ಲೆಯಲ್ಲಿನ ಎಲ್ಲ ಆಟೋಗಳಿಗೆ ಫೆರ್ ಮೀಟರ್ ಅಳವಡಿಕೆಗೆ ಫೆ. 29 ಅಂತಿಮ ದಿನವಾಗಿದೆ. ಈ ಅವಧಿ ಒಳಗೆ ಮಾನ್ಯತೆ ಪಡೆದ ಫೇರ್‌ಮೀಟರ್ ಅಳವಡಿಕೆ ಮಾಡಿಕೊಂಡು ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಮೊಹರು ಮಾಡಿಸಿ ಪ್ರಮಾಣ ಪತ್ರ ಪಡೆದು ಸಾರಿಗೆ ಕಚೇರಿಯ ನೊಂದಣಿ ಪುಸ್ತಕದಲ್ಲಿ ಅಳವಡಿಸಿದ ಬಗ್ಗೆ ನಮೂದಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಫೆ. 29ರ ನಂತರವೂ ಮೀಟರ್ ಅಳವಡಿಸದ ಆಟೋಗಳ ಮೇಲೆ ಪ್ರಕರಣ ದಾಖಲಿಸಿ ನೊಂದಣಿ ನವೀಕರಣ, ರಹದಾರಿ ನವೀಕರಣ, ರಹದಾರಿ ವರ್ಗಾವಣೆಯನ್ನು ಮಾಡಲಾಗುವುದಿಲ್ಲ. ಮೀಟರ್ ಅಳವಡಿಸದೆ ಸಂಚರಿಸುವ ಆಟೋಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೇರ್‌ಮೀಟರ್ ಅಳವಡಿಕೆ ಮಾಡಿದ ಆಟೋರಿಕ್ಷಾದವರು ಪ್ರತಿ 2 ಕಿ.ಮೀ ಗೆ ನಿಗದಿ ಮಾಡಿರುವ ಕನಿಷ್ಠ ದರ ರೂ. 15  ಪಡೆಯಬೇಕು. ನಂತರದ ಪ್ರತಿ ಕಿಲೋ ಮೀಟರ್‌ಗೆ ರೂ. 7.50 , ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ನಿಗದಿತ ದರದ ಒಂದೂವರೆ ಪಟ್ಟು ದರವನ್ನು ಪಡೆಯಬಹುದು.

ಪ್ರಯಾಣಿಕರಿಗಾಗಿ ಕಾಯುವ ಮೊದಲ 15 ನಿಮಿಷಕ್ಕೆ ಉಚಿತ ಹಾಗೂ ನಂತರದ 15 ನಿಮಿಷಕ್ಕೆ ರೂ. 2ರಂತೆ ಪಡೆಯಬಹುದು. ಪ್ರಯಾಣಿಕರೊಂದಿಗೆ 20 ಕೆ.ಜಿ.ವರೆಗೆ ಲಗೇಜನ್ನು ಉಚಿತವಾಗಿ ಕೊಂಡ್ಯೊಯ್ಯಬೇಕು. ನಂತರದ 20 ಕೆ.ಜಿ.ಗೆ ರೂ. 3 ದರ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ಮೀಟರ್ ಅಳವಡಿಸದೆ ಸಂಚರಿಸುವ ಆಟೋಗಳ ಬಗ್ಗೆ ಮತ್ತು ಮೀಟರ್ ಅಳವಡಿಸಿ ಹೆಚ್ಚಿನ ದರವನ್ನು ಪಡೆದಲ್ಲಿ ಹತ್ತಿರದ ಪೊಲೀಸ್ ಠಾಣೆಗಾಗಲಿ ಅಥವಾ ಪ್ರಾದೇಶಿಕ ಸಾರಿಗೆ ಕಚೇರಿಗಾಗಲಿ ವಾಹನ ಸಂಖ್ಯೆಯೊಂದಿಗೆ ಸಾರ್ವಜನಿಕರು ದೂರು ನೀಡಬೇಕು ಎಂದು ಕೋರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT